×
Ad

ಅಧಿವೇಶನಕ್ಕೆ ಶಾಸಕರ ಗೈರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿಎಂ ಆಕ್ರೋಶ

Update: 2017-11-15 22:52 IST

ಬೆಳಗಾವಿ, ನ.15: ನಮ್ಮ ಸರಕಾರದ ಈ ಅವಧಿಯಲ್ಲಿ ಬೆಳಗಾವಿಯಲ್ಲಿ ನಡೆಯುತ್ತಿರುವ ಕೊನೆಯ ಅಧಿವೇಶನ ಇದಾಗಿದೆ. ಕಾಂಗ್ರೆಸ್ ಶಾಸಕರು ಬೆಳಗಾವಿಯಲ್ಲಿದ್ದರೂ ಅಧಿವೇಶನದಲ್ಲಿ ಪಾಲ್ಗೊಳ್ಳಲು ಆಸಕ್ತಿವಹಿಸದಿರುವುದೇಕೆ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬುಧವಾರ ಸುವರ್ಣ ವಿಧಾನಸೌಧದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ಅನೇಕ ಸಚಿವರು, ಶಾಸಕರು ಅಧಿವೇಶನಕ್ಕೆ ಗೈರು ಹಾಜರಾಗುತ್ತಿದ್ದಾರೆ. ಪ್ರತಿಪಕ್ಷಗಳಿಗೆ ಇದೇ ಒಂದು ರೀತಿಯ ಅಸ್ತ್ರವಾಗಿಬಿಟ್ಟಿದೆ. ಪ್ರತಿದಿನ ಸರಕಾರವನ್ನು ಮುಜುಗರಕ್ಕೆ ಸಿಲುಕಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಧಿವೇಶನದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ವಿಪ್ ಜಾರಿ ಮಾಡಲಾಗಿದೆ. ಆದರೂ, ಸದನಕ್ಕೆ ಬರುತ್ತಿಲ್ಲ. ಶಾಸಕರು, ಸಚಿವರಿಗೆ ಏನು ತೊಂದರೆಯಾಗಿದೆ. ಸಮಸ್ಯೆಗಳಿದ್ದರೆ ನಮ್ಮ ಗಮನಕ್ಕೆ ತನ್ನಿ, ಅದನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಅಧಿವೇಶನದ ಉಳಿದ ಅವಧಿಯಲ್ಲಾದರೂ ಸಚಿವರು, ಶಾಸಕರು ಕಡ್ಡಾಯವಾಗಿ ಸದನದಲ್ಲಿ ಹಾಜರಿರಬೇಕು. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಪ್ರಕರಣದಲ್ಲಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಕೆಲಸವನ್ನು ಪ್ರತಿಪಕ್ಷಗಳು ಮಾಡುತ್ತಿವೆ. ಅವುಗಳಿಗೆ ತಿರುಗೇಟು ನೀಡುವ ಅಗತ್ಯವಿದೆ. ಅಲ್ಲದೆ, ಸರಕಾರ ಮಂಡಿಸಲಿರುವ ವಿಧೇಯಕಗಳಿಗೆ ಸೋಲಾಗದಂತೆ ಎಚ್ಚರಿಕೆ ವಹಿಸುವಂತೆ ಸಿದ್ದರಾಮಯ್ಯ ಸೂಚನೆ ನೀಡಿದರು.

ರಾಜಕೀಯ ಕಾರಣಗಳಿಗಾಗಿ ಬಿಜೆಪಿ ಧರಣಿ, ಪ್ರತಿಭಟನೆಗಳನ್ನು ನಡೆಸುತ್ತಿದೆ. ಕೇಂದ್ರ ಸರಕಾರದಲ್ಲಿರುವ 24ಕ್ಕೂ ಹೆಚ್ಚು ಮಂದಿ ಸಚಿವರು, ಸಂಸದರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಎಫ್‍ಐಆರ್ ದಾಖಲಾಗಿದೆ. ಅವರ್ಯಾರು ರಾಜೀನಾಮೆ ನೀಡಿಲ್ಲ. ಅಧಿಕಾರದಲ್ಲಿ ಮುಂದುವರೆದಿದ್ದಾರೆ. ಆದುರಿಂದ, ಕೆ.ಜೆ.ಜಾರ್ಜ್ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ನಡೆಸುವ ಪ್ರತಿಭಟನೆಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ಏನೇ ಆದರೂ ಸಮರ್ಥವಾಗಿ ಎದುರಿಸೋಣ ಎಂದು ಮುಖ್ಯಮಂತ್ರಿ ಕಿವಿಮಾತು ಹೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್  ಮಾತನಾಡಿ, ಪಕ್ಷ ಸಂಘಟನೆಯಲ್ಲಿ ಶಾಸಕರು ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಒಲವನ್ನು ಮತದಾರರರು ವ್ಯಕ್ತಪಡಿಸುತ್ತಿದ್ದಾರೆ. ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮವನ್ನು ಮತ್ತಷ್ಟು ಚುರುಕುಗೊಳಿಸಬೇಕಾದ ಅಗತ್ಯವಿದೆ. ಸರಕಾರದ ಜನಪರ ಹಾಗೂ ಜನಪ್ರಿಯ ಯೋಜನೆಗಳನ್ನು ಪರಿಣಾಮಕಾರಿಯಾಗಿ ಮತದಾರರ ಮನೆಗೆ ಬಾಗಿಲಿಗೆ ತಲುಪಿಸಬೇಕು ಎಂದು ಕರೆ ನೀಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನಡೆಸುತ್ತಿರುವ ಪರಿವರ್ತನಾ ರ್ಯಾಲಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ನಡೆಸುತ್ತಿರುವ ಕುಮಾರಪರ್ವ ರ್ಯಾಲಿ ಬಗ್ಗೆ ಗಮನವಿರಲಿ. ಸರಕಾರ ಹಾಗೂ ಪಕ್ಷದ ವಿರುದ್ಧ ಪ್ರತಿಪಕ್ಷಗಳು ರೂಪಿಸುವ ಕಾರ್ಯತಂತ್ರಗಳ ಬಗ್ಗೆ ಎಚ್ಚರಿಕೆ ಇರಲಿ. ಅನಗತ್ಯವಾದ ಗೊಂದಲಗಳನ್ನು ಸೃಷ್ಟಿಸಲು ಪ್ರತಿಪಕ್ಷಗಳು ಪ್ರಯತ್ನ ನಡೆಸುತ್ತವೆ. ಆದುದರಿಂದ ಎಲ್ಲ ಶಾಸಕರು ಈ ವಿಚಾರದಲ್ಲಿ ಎಚ್ಚರಿಕೆಯಿಂದರಬೇಕು ಎಂದು ಸಲಹೆ ನೀಡಿದರು.

ನರೇಂದ್ರ ಸ್ವಾಮಿ-ಆಂಜನೇಯ ನಡುವೆ ವಾಗ್ವಾದ ?
ಸದಾಶಿವ ಆಯೋಗ ವರದಿ ಅನ್ವಯ ಒಳಮೀಸಲಾತಿ ಕಲ್ಪಿಸುವ ವಿಚಾರದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ನಡೆದ ಚರ್ಚೆಯಲ್ಲಿ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹಾಗೂ ಶಾಸಕ ಪಿ.ಎಂ.ನರೇಂದ್ರಸ್ವಾಮಿ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದು, ಕೈ-ಕೈ ಮಿಲಾಯಿಸುವ ಹಂತಕ್ಕೆ ಪರಿಸ್ಥಿತಿ ಬಿಗಡಾಯಿಸಿತ್ತು ಎನ್ನಲಾಗಿದೆ.

ಸದಾಶಿವ ಆಯೋಗದ ವರದಿಯಲ್ಲಿರುವ ಅಂಶಗಳಿಗೂ ಸಚಿವ ಆಂಜನೇಯ ಪ್ರತಿಪಾದಿಸುತ್ತಿರುವ ಅಂಶಗಳು ವ್ಯತಿರಿಕ್ತವಾಗಿವೆ. ಜನರನ್ನು ದಾರಿ ತಪ್ಪಿಸುವ ಹಾಗು ನಮ್ಮನ್ನು ಅವಮಾನಿಸುವ ರೀತಿಯಲ್ಲಿ ಸಚಿವರು ವರ್ತಿಸುತ್ತಿದ್ದಾರೆ. ಎಸ್ಸಿಪಿಟಿಎಸ್ಪಿ ಯೋಜನೆಯಲ್ಲಿ ಸಾಕಷ್ಟು ಅನುದಾನವಿದ್ದರೂ ಅದನ್ನು ಹಂಚಿಕೆ ಮಾಡುವ ವಿಚಾರದಲ್ಲಿ ಆಂಜನೇಯ ತಾರತಮ್ಯ ಮಾಡುತ್ತಿದ್ದಾರೆ ಎಂದು ನರೇಂದ್ರಸ್ವಾಮಿ ಕಿಡಿಗಾರಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನ ಮುಕ್ತಾಯವಾದ ನಂತರ ಎರಡು ಕಡೆಯವರೊಂದಿಗೆ ಸಮಾಲೋಚನಾ ಸಭೆ ನಡೆಸಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News