×
Ad

ಶಿವಮೊಗ್ಗ: ಇನ್ನೂ 2 ದಿನ ಖಾಸಗಿ ಆಸ್ಪತ್ರೆಗಳು ಸಂಪೂರ್ಣ ಬಂದ್!

Update: 2017-11-15 23:19 IST

ಶಿವಮೊಗ್ಗ, ನ.15: ಕರ್ನಾಟಕ ಖಾಸಗಿ ಆಸ್ಪತ್ರೆ ನಿಯಂತ್ರಣ ಕಾಯ್ದೆ (ಕೆಪಿಎಂಇ) ತಿದ್ದುಪಡಿ ವಿಧೇಯಕ ಮಂಡನೆ ವಿರೋಧಿಸಿ ಖಾಸಗಿ ಆಸ್ಪತ್ರೆ-ನರ್ಸಿಂಗ್ ಹೋಂ ವೈದ್ಯರು ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಳಿಸಲು ನಿರ್ಧರಿಸಿದ್ದಾರೆ. ಅದರಂತೆ ನ.17ರವರೆಗೆ ಆಸ್ಪತ್ರೆ ಬಂದ್ ಮಾಡಲು ನಿರ್ಧರಿಸಿದ್ದಾರೆ.

ಇದರಿಂದ ಶಿವಮೊಗ್ಗ ನಗರ ಹಾಗೂ ಜಿಲ್ಲೆಯಲ್ಲಿ ಬುಧವಾರ ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಹೊರ ರೋಗಿಗಳಿಗೆ ಚಿಕಿತ್ಸೆ ದೊರಕಲಿಲ್ಲ. ಇದರಿಂದ ಚಿಕಿತ್ಸೆಗೆ ಆಗಮಿಸಿದ್ದ ರೋಗಿಗಳು ಪರದಾಡುವಂತಾಯಿತು. ಸರಕಾರಿ ಆಸ್ಪತ್ರೆಗಳತ್ತ ತೆರಳುತ್ತಿದ್ದ ದೃಶ್ಯ ಕಂಡುಬಂದಿತು.ವಿಧೇಯಕ ವಿರೋಧಿಸಿ ಸರಣಿ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿದೆ. ಅದರಂತೆ ಮೂರು ದಿನಗಳ ಕಾಲ ಮುಷ್ಕರಕ್ಕೆ ಕರೆ ನೀಡಲಾಗಿದೆ. ತುರ್ತು ಚಿಕಿತ್ಸೆಯೂ ಸ್ಥಗಿತಗೊಳಿಸಲಾಗಿದೆ. ನ.18ರಂದು ಅನಿರ್ದಿಷ್ಟಾವಧಿ ಬಂದ್‌ಗೆ ಭಾರತೀಯ ವೈದ್ಯಕೀಯ ಸಂಘ ಕೈಗೊಳ್ಳುವ ತೀರ್ಮಾನದಂತೆ ಮುಂದುವರಿಯಲಾಗುವುದು. ಸಾರ್ವಜನಿಕರು ಸಹಕಾರ ನೀಡಬೇಕೆಂದು ಭಾರತೀಯ ವೈದ್ಯ ಸಂಘದ ಜಿಲ್ಲಾ ಶಾಖೆ ತಿಳಿಸಿದೆ.

ಖಾಸಗಿ ಆಸ್ಪತ್ರೆಗಳ ಮುಷ್ಕರದಿಂದ ಸರಕಾರಿ ಆಸ್ಪತ್ರೆಗಳ ಮೇಲೆ ಸಾಕಷ್ಟು ಒತ್ತಡ ಬಿದ್ದಿದ್ದು, ಚಿಕಿತ್ಸೆಗೆ ಆಗಮಿಸುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಸರಕಾರಿ ಆಸ್ಪತ್ರೆ ವೈದ್ಯರಿಗೆ ತಾತ್ಕಾಲಿಕ ಅವಧಿಯವರೆಗೆ ರಜೆ ರದ್ದುಗೊಳಿಸಲಾಗಿದೆ. ರಜೆ ಮೇಲೆ ತೆರಳಿದ್ದ ವೈದ್ಯರು, ಸಿಬ್ಬಂದಿಯನ್ನು ಕೂಡ ಆರೋಗ್ಯ ಇಲಾಖೆ ವಾಪಸ್ ಕರೆಯಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News