ಮಡಿಕೇರಿ: ಕಂದಾಯ ಇಲಾಖೆ ಅಧಿಕಾರಿಗಳ ಸಭೆ
ಮಡಿಕೇರಿ, ನ.15: ನಿರಾಶ್ರಿತರ ಪರಿಹಾರ ಕೇಂದ್ರ ಸೇರಿದಂತೆ ವಿವಿಧ ಸಮುದಾಯ ಭವನಗಳಿಗೆ ಪ್ರಥಮ ಆದ್ಯತೆಯಲ್ಲಿ ನಿವೇಶನ ಒದಗಿಸುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಬಾಂಗಣದಲ್ಲಿ ಬುಧವಾರ ನಡೆದ ಕಂದಾಯ ಇಲಾಖೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಂಬೇಡ್ಕರ್, ವಾಲ್ಮೀಕಿ ಹಾಗೂ ಆದಿವಾಸಿ ಸಮುದಾಯ ಭವನ ಸೇರಿದಂತೆ ವಿವಿಧ ಭವನಗಳಿಗೆ ಸರಕಾರ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದೆ. ತಮ್ಮ ವ್ಯಾಪ್ತಿಯಲ್ಲಿ ನಿವೇಶನ ಹಂಚಿಕೆ ಮಾಡಲು ಕಾಲಮಿತಿಯೊಳಗೆ ತುರ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಸಮಾಜ ಕಲ್ಯಾಣ, ಐಟಿಡಿಪಿ ಇಲಾಖೆಗಳ ಅಧಿಕಾರಿಗಳು ನಿವೇಶನ ಸಂಬಂಧ ಹೆಚ್ಚಿನ ಕಾಳಜಿ ವಹಿಸಬೇಕು. ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿ ಸರಕಾರದ ಕೆಲಸ ನಿರ್ವಹಿಸುತ್ತಿರುವುದು ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಬೇಕು. ನಿವೇಶನ ಗುರುತಿಸುವುದು, ಹಂಚಿಕೆ ಮಾಡುವುದು ಸೇರಿದಂತೆ ಆದ್ಯತೆ ಮೇಲೆ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಹೇಳಿದರು.
ವಕ್ಫ್ ಮಂಡಳಿ ಆಸ್ತಿ ಸಂರಕ್ಷಣೆ ಮಾಡುವುದು, ದಾಖಲೆ ಸರಿಪಡಿಸಿಕೊಳ್ಳುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಹೆಚ್ಚುವರಿ ಜಿಲ್ಲಾದಿಕಾರಿ ಎಂ.ಸತೀಶ್ ಕುಮಾರ್, ವಿವಿಧ ಸಮುದಾಯ ಭವನಗಳಿಗೆ ಸಕಾಲದಲ್ಲಿ ನಿವೇಶನ ಹಂಚಿಕೆ ಮಾಡಲು ಹೆಚ್ಚಿನ ಮುತುವರ್ಜಿ ವಹಿಸುವಂತೆ ಕಂದಾಯ ನಿರೀಕ್ಷಕರಿಗೆ ನಿರ್ದೇಶನ ನೀಡಿದರು.
ಉಪವಿಭಾಗಾಧಿಕಾರಿ ಡಾ.ನಂಜುಂಡೇಗೌಡ, ತಹಶೀಲ್ದಾರ್ ಗೋವಿಂದರಾಜು, ಮಹೇಶ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಮಾಯಾದೇವಿ ಗಲಗಲಿ, ಐಟಿಡಿಪಿ ಇಲಾಖೆ ಅಧಿಕಾರಿ ಪ್ರಕಾಶ್, ಆಹಾರ ಇಲಾಖೆ ಉಪ ನಿರ್ದೇಶಕ ಪುಟ್ಟಸ್ವಾಮಿ, ಶಿರಸ್ತೇದಾರರಾದ ಅರುಣ್ ಸಾಗರ್, ಪ್ರಕಾಶ್, ಕಂದಾಯ ನಿರೀಕ್ಷಕರು ಇತರರು ಇದ್ದರು.