ಕೊಲೆ ಪ್ರಕರಣ: ಇಬ್ಬರಿಗೆ ಜೀವಾವಧಿ ಶಿಕ್ಷೆ
ಮಡಿಕೇರಿ, ನ.15: ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಮಡಿಕೇರಿಯ ಹೋಂ ಸ್ಟೇವೊಂದರಲ್ಲಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ ಒಂದನೆ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆಯೊಂದಿಗೆ ದಂಡ ವಿಧಿಸಿ ತೀರ್ಪು ನೀಡಿದೆ.
ವೀರಾಜಪೇಟೆಯ ಹುದಿಕೇರಿ ಗ್ರಾಮದ ರಾಕೇಶ್ ಹಾಗೂ ನಗರದ ಕನ್ನಂಡ ಬಾಣೆಯ ಬಾಯಡ ಡೀನಾಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 7,500 ರೂ. ದಂಡ, ಕೊಲೆ ಕೃತ್ಯವನ್ನು ಮರೆಮಾಚಲು ಯತ್ನಿಸಿದ ಅಪರಾಧಕ್ಕೆ 5 ವರ್ಷಗಳ ಕಾಲ ಕಠಿಣ ಸಜೆ, ತಲಾ 2,500 ರೂ. ದಂಡವನ್ನು ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ವಸೂಲಾಗುವ ಮೊತ್ತದಲ್ಲಿ 15 ಸಾವಿರ ರೂ.ಯನ್ನು ಕೊಲೆಯಾದ ಪ್ರಸನ್ನನ ತಂದೆ ಡಿ.ಎಂ.ಅಣ್ಣಯ್ಯ ಅವರಿಗೆ ಪರಿಹಾರವಾಗಿ ನೀಡುವಂತೆ ಆದೇಶದಲ್ಲಿ ಸೂಚಿಸಿದೆ. ಹೋಂಸ್ಟೇಯ ವ್ಯವಸ್ಥಾಪಕನಾಗಿದ್ದ ರಾಕೇಶ್ ಹಾಗೂ ಅಡುಗೆ ಕೆಲಸ ಮಾಡುತ್ತಿದ್ದ ಡೀನಾ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು, ತಮ್ಮ ಸಂಬಂಧಕ್ಕೆ ತನ್ನ ಪತಿ ಪ್ರಸನ್ನನಿಂದ ತೊಂದರೆಯಾಗುತ್ತಿದೆ ಎಂದು 2010ರ ಆ.8ರಲ್ಲಿ ಪೂರ್ವಸಿದ್ಧತೆಯೊಂದಿಗೆ ಕೊಲೆ ನಡೆದಿತ್ತು. ತನ್ನ ಪತಿ ಪ್ರಸನ್ನನಿಗೆ ನಿದ್ರೆ ಮಾತ್ರೆ ನೀಡಿ ಮಲಗಿಸಿ ಚಂಗುಲಂಡ ರಾಕೇಶ್‌ಗೆ ಫೋನ್ ಮಾಡಿ ಬರುವಂತೆ ತಿಳಿಸಿದ್ದಾಳೆ. ಸ್ಥಳಕ್ಕೆ ಬಂದ ಚಂಗುಲಂಡ ರಾಕೇಶ್ (ರಾಕಿ) ನಿದ್ರಿಸುತ್ತಿದ್ದ ಪ್ರಸನ್ನನ ಕುತ್ತಿಗೆಗೆ ಕಡಿದು ಕೊಲೆ ಮಾಡಿ ಕೃತ್ಯವನ್ನು ಮರೆಮಾಚಲು ಕತ್ತಿಯನ್ನು ಆತನ ಕೈ ಬಳಿ ಇಟ್ಟು, ಬಾಯಡ ಡೀನಾಳನ್ನು ಮತ್ತು ಆಕೆಯ 8 ವರ್ಷದ ಮಗಳನ್ನು ಬಾತ್ ರೂಮಿನಲ್ಲಿ ಕೂಡಿ ಹಾಕಿ ತೆರಳುತ್ತಾನೆ.
ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಗಳ ವಿರುದ್ಧ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಚಂಗುಲಂಡ ರಾಕೇಶ್ ಮತ್ತು ಬಾಯಡ ಡೀನಾ ಇವರೂ ಪ್ರಸನ್ನನನ್ನು ಕೊಲೆ ಮಾಡಿರುವುದು ಸಾಬೀತಾದ ಹಿನ್ನೆಲೆ ಒಂದನೆ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಡಿ.ಪವನೇಶ್ ಅವರು ಕೊಲೆ ಮಾಡಿದ ಅಪರಾಧಕ್ಕೆ ಶಿಕ್ಷೆಯನ್ನು ವಿಧಿಸಿದ್ದಾರೆ.
ವಿಚಾರಣೆಯನ್ನು ಸರಕಾರಿ ಅಭಿಯೋಜಕ ಎಂ.ಕೃಷ್ಣವೇಣಿ ನಡೆಸಿದರು.