×
Ad

ಮಡಿಕೇರಿ: ನ.17ರಿಂದ ರಾಜ್ಯ ಮಟ್ಟದ ಟೆಕ್ವಾಂಡೋ ಪಂದ್ಯಾವಳಿ ಪ್ರಾರಂಭ

Update: 2017-11-16 17:28 IST

ಮಡಿಕೇರಿ, ನ.16: ಕೊಡಗು ಜಿಲ್ಲಾ ಟೆಕ್ವಾಂಡೊ ಸ್ಪೋಟ್ರ್ಸ್ ಸಂಸ್ಥೆ ವತಿಯಿಂದ ನ.17 ಮತ್ತು 18 ರಂದು 35ನೆ ರಾಜ್ಯ ಮಟ್ಟದ ಟೆಕ್ವಾಂಡೊ ಪಂದ್ಯಾವಳಿ ನಡೆಯಲಿದೆ. 

ಕರ್ನಾಟಕ ಟೆಕ್ವಾಂಡೊ ಸಂಸ್ಥೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೊಡಗು ಜಿಲ್ಲಾ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸಹಯೋಗದೊಂದಿಗೆ ಸಬ್ ಜೂನಿಯರ್, ಜೂನಿಯರ್ ಬಾಲಕ-ಬಾಲಕಿಯರ ವಿಭಾಗ ಹಾಗೂ ಸೀನಿಯರ್ ವಿಭಾಗಗಳಲ್ಲಿ ಪಂದ್ಯಾವಳಿ ನಡೆಯಲಿದೆ. 

ನಗರದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಸ್ಪರ್ಧೆಯಲ್ಲಿ ರಾಜ್ಯದ 25 ಜಿಲ್ಲೆಗಳ ಸುಮಾರು ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಪಂದ್ಯಾವಳಿಗೆ ನ.17 ರಂದು ಬೆಳಗ್ಗೆ 10.30 ಗಂಟೆಗೆ ನಗರದ ಕಾವೇರಿಹಾಲ್‍ನಲ್ಲಿ ನಗರಸಭಾ ಅಧ್ಯಕ್ಷೆ ಕೂಡಕಂಡಿ ಕಾವೇರಮ್ಮ ಸೋಮಣ್ಣ ಅವರು ಚಾಲನೆ ನೀಡಲಿದ್ದಾರೆ. 

ಪಂದ್ಯಾವಳಿ ಉದ್ಘಾಟನೆಗೂ ಮುನ್ನ ಗಾಂಧಿ ಮೈದಾನದಿಂದ ಕಾವೇರಿ ಹಾಲ್‍ವರೆಗೆ ವಿವಿಧ ಜಿಲ್ಲೆಗಳ ಕ್ರೀಡಾಪಟುಗಳ ಮೆರವಣಿಗೆ ನಡೆಯಲಿದೆ. ಈ ಪಂದ್ಯಾವಳಿಯಲ್ಲಿ ಚಿನ್ನದ ಪದಕದ ಸಾಧನೆ ಮಾಡುವ ಕ್ರೀಡಾಪಟುಗಳು ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.

ಸನ್ಮಾನ: ರಾಜ್ಯ ಮಟ್ಟದ ಟೆಕ್ವಾಂಡೊ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಟೆಕ್ವಾಂಡೊದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ  ಕ್ರೀಡಾ ಸಾಧಕರಾದ ಬಿ.ಜಿ.ಶರ್ಮಿಳ, ಕೆ.ಎಸ್. ಭವ್ಯಶ್ರೀ ಆಳ್ವಾ, ವಿ.ಆರ್.ಅರ್ಜುನ್ ಮತ್ತು ಟಿ.ಪವಿತ್ ಜನಾರ್ಧನ್ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಕೊಡಗು ಜಿಲ್ಲಾ ಟೆಕ್ವಾಂಡೊ ಸ್ಪೋಟ್ರ್ಸ್ ಸಂಸ್ಥೆಯ ಅಧ್ಯಕ್ಷ ಬಿ.ಜಿ.ಲೋಕೇಶ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News