×
Ad

ಜಾನಪದ ಕಲೆಗಳ ಪುನಶ್ಚೇತನ ಅಗತ್ಯ: ಕಲ್ಮನೆ ನಂಜಪ್ಪ

Update: 2017-11-16 18:05 IST

ತುಮಕೂರು, ನ.16: ಅಳಿವಿನಂಚಿನಲ್ಲಿರುವ ಜಾನಪದ ಕಲೆಗಳ ಪುನಶ್ಚೇತನ ಅಗತ್ಯವಾಗಿದ್ದು, ಇಂತಹ ಮಹಾನ್ ಕಾರ್ಯಗಳ ಯಶಸ್ಸಿಗೆ ವಿಶ್ವವಿದ್ಯಾನಿಲಯಗಳು ಪ್ರೋತ್ಸಾಹ ನೀಡಬೇಕು ಎಂದು ಹಿರಿಯ ಬಯಲಾಟ ಕಲಾವಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲ್ಮನೆ ಎ. ಎಸ್. ನಂಜಪ್ಪ ಅಭಿಪ್ರಾಯಪಟ್ಟಿದ್ದಾರೆ.

ತುಮಕೂರು ವಿಶ್ವವಿದ್ಯಾನಿಲಯದ ಸಾಂಸ್ಕೃತಿಕ ಚಟುವಟಿಕೆಗಳ ಘಟಕದ ಆಶ್ರಯದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ‘ಕಲಾಸಂಭ್ರಮ-2017’ ಸ್ನಾತಕೋತ್ತರ ವಿದ್ಯಾರ್ಥಿಗಳ ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮೂಡಲಪಾಯ ಯಕ್ಷಗಾನಕ್ಕಾಗಿ ನನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದೇನೆ. ಆದರೆ ಕಲಿಯುವ ಯುವಕರು ಕಡಿಮೆಯಾಗುತ್ತಾ ಅದು ನಶಿಸಿಹೋಗುತ್ತಿದೆಯೇನೋ ಎಂದು ಆತಂಕವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕರಾವಳಿಯಲ್ಲಿ ಯಕ್ಷಗಾನ ಆಲವಾಗಿ ಬೇರೂರಿದೆ. ಅಲ್ಲಿ ಕಲಿಯುವವರೂ ಕಲಿಸುವವರೂ ಧಾರಾಳ ಇದ್ದಾರೆ. ಆದರೆ ಬಯಲುಸೀಮೆಯಲ್ಲಿ ಆಸಕ್ತ ಯುವಕರ ಕೊರತೆಯಿದ್ದು, ಈಗಿನ ಯುವಕರಿಗೆ ಸಿನೆಮಾ, ಧಾರಾವಾಹಿಗಳೇ ಹೆಚ್ಚು ಪ್ರಿಯವಾಗಿವೆ. ಆಧುನಿಕ ಆಕರ್ಷಣೆಗಳು, ಆಸೆ ಆಕಾಂಕ್ಷೆಗಳಿಂದ ಯುವಕರ ಶಕ್ತಿ ಕುಂದುತ್ತಾ ಇದೆ. ಯುವ ಕಲಾಸಕ್ತರು ಮೂಡಲಪಾಯ ಯಕ್ಷಗಾನ ಕಲಿಯಲು ಉತ್ಸಾಹ ತೋರಿದರೆ ಕಲಿಸಿಕೊಡಲು ನಾನು ಸಿದ್ಧ ಎಂದು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪರೀಕ್ಷಾಂಗ ಕುಲಸಚಿವ ಪ್ರೊ.ಡಿ.ವಿ.ಪರಮಶಿವಮೂರ್ತಿ, ಜನಪದ ಕಲೆಗಳು ಮನುಷ್ಯನ ಮುಗ್ಧತೆಯ ಪ್ರತಿಬಿಂಬಗಳು. ಗ್ರಾಮೀಣ ಸಂಸ್ಕೃತಿಯ ಆಳವಾದ ಅಧ್ಯಯನ ನಡೆಸುವುದಕ್ಕೆ ಜನಪದ ಕಲೆಗಳು ಅವಶ್ಯಕ. ಅನೇಕ ಜನಪದ ಕಲೆಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಒದ್ದಾಡುತ್ತಿವೆ. ಎಷ್ಟೋ ಕಲೆಗಳು ಕಲಾವಿದರ ಕೊರತೆಯಿಂದ ನಾಶವಾಗಿ ಹೋಗಿವೆ. ಯುವಕರು ಕಲೆ, ಸಂಸ್ಕೃತಿಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸಂಚಾಲಕ ಡಾ.ಕೆ.ಸಿ.ಸುರೇಶ್, ಸಿಬಂತಿ ಪದ್ಮನಾಭ ಉಪಸ್ಥಿತರಿದ್ದರು. ಸಾಂಸ್ಕೃತಿಕ ಚಟುವಟಿಕೆಗಳ ಘಟಕದ ಅಧ್ಯಕ್ಷ ಪ್ರೊ.ಬಿ.ರವೀಂದ್ರಕುಮಾರ್ ಸ್ವಾಗತಿಸಿದರು. ಸದಸ್ಯ ಡಾ.ಶ್ರೀಪಾದಭಟ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News