×
Ad

ಕ್ಷುಲ್ಲಕ ಕಾರಣ: ಪ್ರಯಾಣಿಕನಿಗೆ ಬಸ್ ನಿರ್ವಾಹಕ ಹಲ್ಲೆ

Update: 2017-11-16 18:17 IST

ಹೊನ್ನಾವರ, ನ.16: ಕ್ಷುಲ್ಲಕ ಕಾರಣಕ್ಕೆ ಕೆಎಸ್ಸಾರ್ಟಿಸಿ ಬಸ್ ನಿರ್ವಾಹಕ ಪ್ರಯಾಣಿಕನಿಗೆ ಹಲ್ಲೆ ನಡೆಸಿದ ಘಟನೆ ತಾಲೂಕಿನ ಅರೇಅಂಗಡಿ ಸರ್ಕಲ್ ಬಳಿ ನಿನ್ನೆ ರಾತ್ರಿ ನಡೆದಿದೆ.

ತಾಲೂಕಿನ ಕಡ್ಲೆ ನಿವಾಸಿ ಮಾದೇವ ಮಡಿವಾಳ (58) ಹಲ್ಲೆಗೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ.

ಹೊನ್ನಾವರ ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿರುವ ಮಾದೇವ ಅವರು ಎಂದಿನಂತೆ ತಮ್ಮ ಕೆಲಸ ಮುಗಿಸಿ ಮನೆಗೆ ಹೋಗಲು ಅರೇಅಂಗಡಿ ಮಾರ್ಗವಾಗಿ ಕುಮಟಾಕ್ಕೆ ಹೋಗುವ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದು, ಅರೇ ಅಂಗಡಿಯ ಬಸ್ ನಿಲ್ದಾಣದ ಸಮೀಪ ಬರುತ್ತಿದ್ದಂತೆ ಮಾದೇವ ಅವರು ನಿರ್ವಾಹಕನಲ್ಲಿ ಬಸ್ ನಿಲ್ಲಿಸುವಂತೆ ಹೇಳಿದ್ದಾರೆ. ಇಷ್ಟಕ್ಕೆ ಕೋಪಗೊಂಡ ಬಸ್ ನಿರ್ವಾಹಕ ಪ್ರಶಾಂತ ಎಂಬಾತ ಮಾದೇವ ಅವರ ಕೆನ್ನೆಗೆ ಬಲವಾಗಿ ಹೊಡೆದು ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.

ಬಸ್ ನಿರ್ವಾಹಕನ ಈ ವರ್ತನೆಯನ್ನು ಕಂಡು ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ಸಾರ್ವಜನಿಕರು ಅರೇಅಂಗಡಿ ಸರ್ಕಲ್ ಬಳಿ ಬಸ್ ತಡೆದು ನಿರ್ವಾಹಕನ ವರ್ತನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಘಟನೆಯ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ ಸ್ಥಳೀಯರು ನಿರ್ವಾಹಕನ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಪೊಲೀಸರನ್ನು ಒತ್ತಾಯಿಸಿದರು.

ಈ ಬಗ್ಗೆ ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News