ವೈದ್ಯರ ಮುಷ್ಕರ: ಚಿಕಿತ್ಸೆ ಸಿಗದೆ ಹೃದ್ರೋಗಿ ಮೃತ್ಯು
ಶಿವಮೊಗ್ಗ, ನ.16: ಖಾಸಗಿ ಆಸ್ಪತ್ರೆ ವೈದ್ಯರು ನಡೆಸುತ್ತಿರುವ ಮುಷ್ಕರದಿಂದ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರಕದೆ ಹೃದ್ರೋಗಿಯೋರ್ವರು ಮೃತಪಟ್ಟಿರುವ ಘಟನೆ ಶಿವಮೊಗ್ಗ ನಗರದಲ್ಲಿ ತಡರಾತ್ರಿ ನಡೆದಿದೆ.
ರಾಗಿಗುಡ್ಡದ ನಿವಾಸಿ ಪಕಾತಿ ಸತ್ತಾರ್ (55) ಮೃತಪಟ್ಟವರೆಂದು ಗುರುತಿಸಲಾಗಿದೆ.
ಸತ್ತಾರ್ ಅವರಿಗೆ ರಾತ್ರಿ 11ಕ್ಕೆ ಗಂಟೆ ಸುಮಾರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಕುಟುಂಬದ ಸದಸ್ಯರು ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆ ತಂದಿದ್ದಾರೆ.
ಆದರೆ ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ ಸೂಕ್ತ ಚಿಕಿತ್ಸೆ ಲಭ್ಯವಾಗದೆ ಮತ್ತೊಂದು ಖಾಸಗಿ ಆಸ್ಪತ್ರೆಗೆ ಕರೆ ತಂದರೂ ಚಿಕಿತ್ಸೆ ಸಿಗಲಿಲ್ಲ. ಬಳಿಕ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ಕರೆತರುವ ವೇಳೆಗೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ಸಕಾಲಿಕ ಚಿಕಿತ್ಸೆ ದೊರಕಿದ್ದರೆ ಪಕಾತಿ ಸತ್ತಾರ್‍ರವರು ಬದುಕುಳಿಯುವ ಸಾಧ್ಯತೆ ಹೆಚ್ಚಿತ್ತು. ಆದರೆ ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರದ ಹಿನ್ನೆಲೆಯಿಂದ ಚಿಕಿತ್ಸೆ ದೊರಕದೆ ಅಸುನೀಗುವಂತಾಗಿದೆ. ಇದು ನಿಜಕ್ಕೂ ದುರಂತ ಎಂದು ಸ್ಥಳೀಯ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.