ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಕಡಿವಾಣ ಹಾಕುವ ಉದ್ದೇಶವಿಲ್ಲ: ಸಿದ್ದರಾಮಯ್ಯ
ಬೆಳಗಾವಿ, ನ.16: ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ವಿಧೇಯಕ ವಿರೋಧಿಸಿ ವೈದ್ಯರು ಕೈಗೊಂಡಿರುವ ಮುಷ್ಕರ ವಿಧಾನ ಮಂಡಲ ಉಭಯ ಸದನಗಳಲ್ಲಿ ಪ್ರತಿಧ್ವನಿಸಿತು. ಅಲ್ಲದೆ, ಕೆಲ ಕಾಲ ಆಡಳಿತ ಮತ್ತು ವಿಪಕ್ಷ ಸದಸ್ಯರ ಮಧ್ಯೆ ಭಾರೀ ಗದ್ದಲ-ಕೋಲಾಹಲಕ್ಕೂ ಸಾಕ್ಷಿಯಾಯಿತು.
ರಾಜ್ಯ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ತಿದ್ದುಪಡಿ ವಿಧೇಯಕ (ಕೆಪಿಎಂಇ) ಜಾರಿ ತರುವುದು ಜನಸಾಮಾನ್ಯರ ಮತ್ತು ಬಡರೋಗಿಗಳ ಹಿತ ಕಾಯುವುದು ಸರ್ಕಾರದ ಉದ್ದೇಶವಾಗಿದೆ. ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ ಹಾಕುವ ಯಾವುದೇ ಉದ್ದೇಶ ಸರಕಾರಕ್ಕಿಲ್ಲ. ಖಾಸಗಿ ವೈದ್ಯರು ತಮ್ಮ ಮುಷ್ಕರ ಹಿಂಪಡೆದು ಸೇವೆಗೆ ತೊಡಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಗುರುವಾರ ವಿಧಾನ ಪರಿಷತ್‍ನಲ್ಲಿ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಅವರು ಖಾಸಗಿ ವೈದ್ಯರ ಮುಷ್ಕರದಿಂದ ರೋಗಿಗಳಿಗೆ ತೊಂದರೆಯಾಗಿರುವ ಕುರಿತಂತೆ ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ಕೋರಿ ಪ್ರಸ್ತಾಪಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಅವರು, ಈಗಾಗಲೇ ಜಾರಿಯಲ್ಲಿರುವ 2007ರ ಕೆಪಿಎಂಇ ಕಾಯ್ದೆಗೆ ಕೆಲವು ತಿದ್ದುಪಡಿಗಳನ್ನು ತರಲು ಶಾಸಕ ಕೆ.ಎನ್. ರಾಜಣ್ಣ ಅಧ್ಯಕ್ಷತೆಯಲ್ಲಿರುವ ಜಂಟಿ ಸದನ ಸಮಿತಿಯು ವೈದ್ಯರ ಜತೆಗೆ ಚರ್ಚಿಸಿ ಸಲಹೆಗಳನ್ನು ಪಡೆದಿದೆ. ಉದ್ದೇಶಿತ ವಿಧೇಯಕವನ್ನು ಸದನದ ಮುಂದೆ ಮಂಡಿಸುವ ಪೂರ್ವದಲ್ಲಿಯೇ ಖಾಸಗಿ ವೈದ್ಯರು ಆತಂಕಕ್ಕೊಳಗಾಗಿ ಪ್ರತಿಭಟನೆ ಆರಂಭಿಸಿದ್ದಾರೆ. ಅಲ್ಲದೆ, ಬೆಳಗಾವಿ ಅಧಿವೇಶನ ಆರಂಭವಾದ ಮೊದಲ ದಿನವೇ ಖಾಸಗಿ ವೈದ್ಯರ ಸಂಘಟನೆಗಳ ಪ್ರಮುಖರನ್ನು ಕರೆದು ವಿಧೇಯಕದ ಕುರಿತು ಆರೋಗ್ಯ ಸಚಿವರೊಂದಿಗೆ ಮತ್ತೊಮ್ಮೆ ಚರ್ಚಿಸಿ ಸದನದಲ್ಲಿ ಮಂಡಿಸುವುದಾಗಿ ತಿಳಿಸಿದ್ದೇವೆ. ಕಾಯ್ದೆಯಿಂದ ಖಾಸಗಿ ಆಸ್ಪತ್ರೆಗಳಿಗೆ ಮತ್ತು ವೈದ್ಯರಿಗೆ ನಿಯಂತ್ರಣ ಅಥವಾ ಕಡಿವಾಣ ಹಾಕುವ ಉದ್ದೇಶ ಖಂಡಿತ ಇಲ್ಲ ಎಂದು ಮನವರಿಕೆ ಮಾಡಿದ ನಂತರವೂ ಮುಷ್ಕರ ಮುಂದುವರೆಸಿರುವುದು ಸರಿಯಾದ ಬೆಳವಣಿಗೆ ಅಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ವೈದ್ಯರು ಉಹಾಪೋಹಗಳಿಗೆ ಮಣಿದು ಹೋರಾಟ ನಡೆಸಬಾರದು. ಇದು ಪ್ರತಿಷ್ಠೆಯ ಪ್ರಶ್ನೆ ಅಲ್ಲ. ತಮ್ಮ ಜವಾಬ್ದಾರಿ ನಿಭಾಯಿಸಿ ಜನರ ಮತ್ತು ಸಮಾಜದ ಹಿತ ಕಾಪಾಡುವುದು ಮುಖ್ಯ. ವೈದ್ಯ ಸಂಘಟನೆಗಳ ಪದಾಧಿಕಾರಿಗಳ ಜತೆಗೆ ಮತ್ತೊಂದು ಸುತ್ತು ಮಾತುಕತೆ ನಡೆಸಲಾಗುವುದು. ವಿಧೇಯಕವು ಸದನದಲ್ಲಿ ಮಂಡನೆಯಾಗದೇ ಇರುವುದರಿಂದ ಈ ಕುರಿತು ಪ್ರತಿಪಕ್ಷದ ನಾಯಕರು ಮಂಡಿಸಲು ಉದ್ದೇಶಿಸಿರುವ ನಿಲುವಳಿ ಸೂಚನೆಗೆ ಅವಕಾಶ ನೀಡಬಾರದು ಎಂದು ಸಭಾಪತಿಗೆ ಮುಖ್ಯಮಂತ್ರಿ ಇದೇ ವೇಳೆ ಕೋರಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್. ರಮೇಶ್ ಕುಮಾರ್ ಮಾತನಾಡಿ, ಕೆಪಿಎಂಇ ಕಾಯ್ದೆಗೆ ತಿದ್ದುಪಡಿ ತರುವ ವಿಧೇಯಕ ಇದುವರೆಗೂ ಸದನದ ಮುಂದೆ ಮಂಡನೆಯೇ ಆಗಿಲ್ಲ. ಖಾಸಗಿ ವೈದ್ಯರು ವದಂತಿಗಳಿಗೆ ಕಿವಿಗೊಟ್ಟು ಹೋರಾಟಕ್ಕಿಳಿದಿರುವುದು ಶಾಸನಸಭೆಯ ಸ್ವಾತಂತ್ರ್ಯ ಕಸಿದುಕೊಳ್ಳುವ ಯತ್ನದಂತಿದೆ. ಬಡರೋಗಿಗಳ ಸೇವೆಗೆ ಸಂಬಂಧಿಸಿದ 150 ಕೋಟಿ ರೂ. ಸರಕಾರದ ಬಳಿ ಬಾಕಿ ಇದ್ದಾಗ ಈ ಹಿಂದೆ ಖಾಸಗಿ ಆಸ್ಪತ್ರೆಗಳು ಪ್ರತಿಭಟನೆಗಿಳಿದಾಗ ಸರಕಾರ ಹಣ ಪಾವತಿಸುತ್ತದೆ. ರೋಗಿಗಳಿಗೆ ನೀಡಿದ ಚಿಕಿತ್ಸೆಯನ್ನು ಸೇವೆಯಾಗಿ ಪರಿಗಣಿಸಿ ಅದು ವ್ಯಾಪಾರವಾಗಬಾರದು ಎಂದು ಮನಿವ ಮಾಡಿಕೊಂಡರೂ ಕಿವಿಗೊಡದ ಕೆಲವು ಖಾಸಗಿ ಆಸ್ಪತ್ರೆಗಳನ್ನು ಅಧಿಸೂಚಿತ ಪಟ್ಟಿಯಿಂದ ಕೈಬಿಡಲಾಯಿತು. ಕೆಲವು ದಿನಗಳ ನಂತರ ಪಟ್ಟಿಗೆ ಸೇರಿಸಿಕೊಳ್ಳಲು ಕೋರಿ ಖಾಸಗಿ ಆಸ್ಪತ್ರೆಗಳು ಮರಳಿ ಅರ್ಜಿ ಸಲ್ಲಿಸಿದವು. ಈಗ ಕಾಯ್ದೆಯ ಮಂಡನೆ ವಿರೋಧಿಸಿ ನಡೆಸುತ್ತಿರುವ ಮುಷ್ಕರವನ್ನು ತಕ್ಷಣ ಹಿಂತೆಗೆದುಕೊಳ್ಳಬೇಕು ಎಂದು ವಿನಂಬ್ರವಾಗಿ ಕೋರುತ್ತೇನೆ ಎಂದರು.
ಈ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಂಪೂರ್ಣ ಸಮನ್ವಯವಿದೆ. ಕಳೆದ 40 ವರ್ಷಗಳಿಂದ ನಾನು ಅವರನ್ನು ಹತ್ತಿರದಿಂದ ನೋಡುತ್ತಿದ್ದೇನೆ. ಅವರ ಕಾರ್ಯವೈಖರಿ ನನಗೆ ತೃಪ್ತಿ ತಂದಿದೆ. ಬಡವರ ಪರವಾಗಿ ನಾನು ನೀಡಿದ ಎಲ್ಲ ಸಲಹೆಗಳನ್ನು ಅವರು ಅನುಷ್ಠಾನಗೊಳಿಸಿದ್ದಾರೆ. ಅವರ ಸಿದ್ಧಾಂತ ಮತ್ತು ಆದರ್ಶಗಳನ್ನು ನಂಬಿರುವ ನಾನು ನನ್ನ ಕೊನೆಯ ಉಸಿರಿರುವವರೆಗೂ ಮುಖ್ಯಮಂತ್ರಿಗಳೊಂದಿಗಿರುತ್ತೇನೆ. ಈ ವಿಷಯದಲ್ಲಿ ಪ್ರತಿಪಕ್ಷಗಳ ಆರೋಪ ನಿರಾಧಾರವಾಗಿದೆ. ಅವರು ಮಂಡಿಸಲು ಯತ್ನಿಸುತ್ತಿರುವ ನಿಲುವಳಿ ಸೂಚನೆಗೆ ಅವಕಾಶ ಕಲ್ಪಿಸಬಾರದು ಎಂದು ಹೇಳಿದರು.
ಈ ವಿಷಯದಲ್ಲಿ ಸರ್ಕಾರ ಹೊಂದಿರುವ ಮುಕ್ತ ಮನಸ್ಸಿನ ಕುರಿತು ತೃಪ್ತಿ ವ್ಯಕ್ತಪಡಿಸಿದ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರು, ಜನರಿಗೆ, ಬಡರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ವರ್ತಿಸುವ ಸಲಹೆ ನೀಡಿದರು. ಈ ಹಂತದಲ್ಲಿ ಪ್ರತಿಪಕ್ಷದ ನಿಲುವಳಿ ಸೂಚನೆ ಅವಕಾಶ ನೀಡುವ ಅಗತ್ಯವಿಲ್ಲ ಎಂದು ಹೇಳಿದರು.
ಇದೇ ವಿಷಯವಾಗಿ ವಿಧಾನಸಭೆಯಲ್ಲಿಂದು ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಅವರು ಪ್ರಸ್ತಾಪಿಸಿ ಕೆಪಿಎಂಇ ತಿದ್ದುಪಡಿ ವಿಧೇಯಕ ಕೈಬಿಡಬೇಕು. ವೈದ್ಯರೊಂದಿಗೆ ಚರ್ಚಿಸುವಂತೆ ಸದನದಲ್ಲಿ ಆಗ್ರಹಿಸಿದರು.
ಆರೋಗ್ಯ ಸೇವೆಯನ್ನು ಒದಗಿಸಲು ಸರಕಾರ ಖಾಸಗಿ ಆಸ್ಪತ್ರೆಗಳಿಗೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಹಣ ಪಾವತಿಗೆ ವಿಳಂಬವಾದರೆ ಬಡವರಿಗೆ ಆರೋಗ್ಯ ಸೇವೆ ನಿಲ್ಲಿಸುವುದಾಗಿ ಬೆದರಿಕೆ ಹಾಕುತ್ತಾರೆ. ಬಡಕೂಲಿಕಾರನ ತೆರಿಗೆ ಹಣವನ್ನು ಖಾಸಗಿ ಆಸ್ಪತ್ರೆ ಪಾವತಿಸಲಾಗುತ್ತದೆ. ಇದಕ್ಕೆ ಉತ್ತಮ ಸೇವೆ ಬಯಸುವುದು ತಪ್ಪೇ. ಈ ಅಸಂಘಟಿತ ಜನಸಮೂಹದ ಮನವಿಗೆ ಸರಕಾರ ಸ್ಪಂದಿಸುವುದು ತಪ್ಪೇ. ಬಡವರ ಪರವಾದ ವಿಧೇಯಕ ಮಂಡಿಸುವುದು ಬೇಡ ಎನ್ನುವುದು ಎಷ್ಟು ಸರಿ.
-ಕೆ.ಆರ್.ರಮೇಶ್‍ಕುಮಾರ್, ಆರೋಗ್ಯ ಸಚಿವ
ರಾಜ್ಯದ ಜನ ಸಾಮಾನ್ಯರ ತೆರಿಗೆ ಹಣವನ್ನು ಸರಕಾರದ ವಿವಿಧ ಆರೋಗ್ಯ ಯೋಜನೆಗಳ ಮೂಲಕ ಖಾಸಗಿ ಆಸ್ಪತ್ರೆಗಳಿಗೆ ನೀಡುತ್ತಿದ್ದೇವೆ. ಹೀಗಾಗಿ ಆ ಹಣವನ್ನು ಅತ್ಯಂತ ಜವಾಬ್ದಾರಿಯುತವಾಗಿ ವೆಚ್ಚ ಮಾಡುವ ಹೊಣೆ ನಮ್ಮ ಮೇಲಿದೆ. ವೈದ್ಯರು ಸಂಘಟಿತ ಸಮುದಾಯ. ಅವರು ಮುಷ್ಕರ ನಡೆಸುತ್ತಿದ್ದಾರೆ. ಚಿಕಿತ್ಸೆಗೆ ಹಣಕಟ್ಟಲಾಗದೆ ಸಾವನ್ನಪ್ಪಿದ್ದ ಕುಟುಂಬದವರು ಆಸ್ಪತ್ರೆಯ ವೆಚ್ಚ ಭರಿಸಲಾಗದೆ ಸ್ವಾಭಿಮಾನ ಬಿಟ್ಟು ಸಿಎಂ ಅವರ ಮುಂದೆ ಅರ್ಜಿ ಹಿಡಿದು ನಿಲ್ಲುವವರು, ನಮಗೆ ದೂರು ಕೊಟ್ಟವರು ಅಸಂಘಟಿತ ಸಮುದಾಯ. ಅವರನ್ನು ಕರೆತಂದು ಬೆಳಗಾವಿಯಲ್ಲಿ ವೈದ್ಯರ ಎದುರು ಮುಷ್ಕರ ಕೂರಿಸಲು ನನ್ನಿಂದ ಆಗುತ್ತಿಲ್ಲ. ಆದರೆ, ಆ ಅಸಂಘಟಿತ ಸಮುದಾಯದ ಹಿತರಕ್ಷಣೆ ಮಾಡುವುದು ಜವಾಬಾರಿಯುತ ಸರಕಾರದ ಹೊಣೆಗಾರಿಕೆಯಿದ್ದು, ನಾನು ಅದನ್ನು ನಿಭಾಯಿಸುತ್ತಿದ್ದೇನೆ
-ಕೆ.ಆರ್.ರಮೇಶ್‍ಕುಮಾರ್, ಆರೋಗ್ಯ ಸಚಿವ
ಈಶ್ವರಪ್ಪ-ಸಿದ್ದರಾಮಯ್ಯ ವಾಗ್ವಾದ: ರಾಜ್ಯದಲ್ಲಿ ವೈದ್ಯರ ಮುಷ್ಕರದಿಂದ 25 ಮಂದಿ ಸಾವನ್ನಪ್ಪಿರುವುದಕ್ಕೆ ರಾಜ್ಯ ಸರಕಾರ ಹಾಗೂ ಆರೋಗ್ಯ ಸಚಿವರೇ ನೇರ ಕಾರಣ. ಇವರು ಕೊಲೆಗಡಕರು. ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಮಾಡಿದ ಆಗ್ರಹವು, ಅವರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಇದಕ್ಕೆ ತಿರುಗೇಟು ನೀಡಿದ ಮುಖ್ಯಮಂತ್ರಿ, ವೈದ್ಯರ ಪ್ರತಿಭಟನೆಗೆ ನೀವೇ ಕಾರಣ. ವೈದ್ಯರನ್ನು ಸರಕಾರದ ವಿರುದ್ಧ ಎತ್ತಿಕಟ್ಟಿ, ಪ್ರತಿಭಟನೆ ಮಾಡುವಂತೆ ಕುಮ್ಮಕ್ಕು ನೀಡಿದೆ ಎಂದರು.