×
Ad

ಬಹುನಿರೀಕ್ಷಿತ ‘ವಾಮಾಚಾರ ನಿರ್ಮೂಲನೆ ಮಸೂದೆ’ಗೆ ವಿಧಾನಸಭೆ ಅಸ್ತು

Update: 2017-11-16 20:02 IST

ಬೆಳಗಾವಿ, ನ.16: ರಾಜ್ಯದಲ್ಲಿ ಅಮಾನವೀಯ ದುಷ್ಟ ಪದ್ಧತಿಗಳು ಹಾಗೂ ವಾಮಾಚಾರ ಪ್ರತಿಬಂಧ ಮತ್ತು ನಿರ್ಮೂಲನೆ(ಮೌಢ್ಯ) ಮಹತ್ವಕಾಂಕ್ಷಿ, ಬಹು ನಿರೀಕ್ಷಿತ ವಿಧೇಯಕ ವಿಧಾನಸಭೆಯಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರ ಸುದೀರ್ಘ ಚರ್ಚೆಯ ಬಳಿಕ ಸರ್ವಾನುಮತದಿಂದ ಅನುಮೋದನೆ ನೀಡಲಾಯಿತು.

ಗುರುವಾರ ವಿಧಾನಸಭೆ ಭೋಜನ ವಿರಾಮದ ನಂತರ ಶಾಸನ ರಚನೆ ಕಲಾಪ ಕೈಗೆತ್ತಿಕೊಂಡ ಸ್ಪೀಕರ್ ಕೋಳಿವಾಡ ಅವರು, ವಿಧೇಯಕ ಪರ್ಯಾಲೋಚನೆಗೆ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರನ್ನು ಕರೆದರು.

ಈ ವೇಳೆ ಸಚಿವ ಆಂಜನೇಯ ಮಾತನಾಡಿ, ‘ಕರ್ನಾಟಕ ಅಮಾನವೀಯ ದುಷ್ಟ ಪದ್ಧತಿಗಳು ಹಾಗೂ ವಾಮಾಚಾರ ಇವುಗಳ ಪ್ರತಿಬಂಧ ಮತ್ತು ನಿರ್ಮೂಲನೆ ವಿಧೇಯಕ-2017ನ್ನು ಮಂಡನೆ ಮಾಡಿ ಉದ್ದೇಶವನ್ನು ಸದನಕ್ಕೆ ವಿವರಿಸಿದರು. 

ರಾಜ್ಯ ಸರಕಾರ ಮೌಢ್ಯ ನಿಷೇಧಕ್ಕೆ ಕ್ರಾಂತಿಕಾರಕ ಕಾನೂನು ಜಾರಿಗೆ ತರಲು ಮುಂದಾಗಿದೆ. ಇದರ ಸಾಧಕ-ಭಾದಕಗಳ ಕುರಿತು ತಜ್ಞರು, ಸಾಮಾಜಿಕ ಕಾರ್ಯಕರ್ತರು, ಪ್ರಗತಿಪರ ಸ್ವಾಮೀಜಿಗಳು ಸೇರಿದಂತೆ ಎಲ್ಲ ವರ್ಗದ ನಾಯಕರು ಎಲ್ಲರೂ ಒಳಗೊಂಡಂತೆ ಅಭಿಪ್ರಾಯಗಳನ್ನು ಆಲಿಸಿ, ವಿಧೇಯಕವನ್ನು ತರಲಾಗುತ್ತಿದೆ ಎಂದು ಸ್ಪಷ್ಟಣೆ ನೀಡಿದರು.

ದೇಶಕ್ಕೆ ಮಾದರಿಯಾಗಿರುವ ಇದೊಂದು ಕ್ರಾಂತಿಕಾರಿ ಮಸೂದೆಯಾಗಿದ್ದು, ‘ಮಲ’ಕ್ಕೆ ಸಮನಾದ ‘ಎಂಜಲೆ’. ಆ ಎಲೆಗೆ ನಾಯಿಯ ರೀತಿಯಲ್ಲಿ ಮನುಷ್ಯ ಕಾಯುವ ಅನಿಷ್ಠ ಪದ್ಧತಿಗೆ ಕಡಿವಾಣ ಹಾಕಬೇಕಿದೆ. ವಿಜ್ಞಾನ ಮತ್ತು ತಂತ್ರಜ್ಞಾನ, ವೈಜ್ಞಾನಿಕ ವಿಚಾರಗಳು ಬೆಳೆದಿರುವ ಈ ದಿನಗಳಲ್ಲಿ ಅನಿಷ್ಟ ಆಚರಣೆಗಳನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕಾನೂನು ಅಗತ್ಯ ಎಂದು ಅವರು ಪ್ರತಿಪಾದಿಸಿದರು.

ಹವನ-ಹೋಮದ ನೆಪದಲ್ಲಿ ತುಪ್ಪವನ್ನು ಬೆಂಕಿಗೆ ಹಾಕಲಾಗುತ್ತದೆ. ಆದರೆ, ಸಾವಿರಾರು ಮಕ್ಕಳ ನಾಲಿಗೆಗಳು ಇನ್ನೂ ತುಪ್ಪದ ರುಚಿಯನ್ನೆ ಕಂಡಿಲ್ಲ. ಹೀಗಿರುವಾಗ ಅಂತಹ ಆಚರಣೆಗಳು ಬೇಕೆ ಎಂದ ಅವರು, ಸದನ ಇದಕ್ಕೆ ಅನುಮೊದನೆ ನೀಡಬೇಕೆಂದು ವಿಪಕ್ಷಗಳ ¼ ಸದಸ್ಯರಲ್ಲಿ ಮನವಿ ಮಾಡಿ, ಕಾಯ್ದೆಯ ಉದ್ದೇಶವನ್ನು ವಿವರಿಸಿದರು.

ಈ ವೇಳೆ ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅನಿಷ್ಟ ಆಚರಣೆಗಳ ನೆಪದಲ್ಲಿ ಅನಕ್ಷರಸ್ಥ ಜನರನ್ನು ಶೋಷಣೆ ಮಾಡಲಾಗುತ್ತಿತ್ತು. ಇದೀಗ ಸಾಕ್ಷರತಾ ಪ್ರಮಾಣ ಶೇ.78ರಷ್ಟಿದ್ದು, ಒಳಿತು-ಕೆಡಕು ಏನೆಂಬುವುದು ಜನರಿಗೆ ಅರ್ಥವಾಗುತ್ತಿದೆ. ಮನುಷ್ಯನ ಮೇಲಾಗುವ ದುಷ್ಪರಿಣಾಮಗಳನ್ನು ನಿರ್ಮೂಲನೆ ಮಾಡಿ ನಂಬಿಕೆಗೆ ಧಕ್ಕೆಯಾಗದಂತೆ ಮಸೂದೆಯನ್ನು ಜಾಗೃತಿಯಿಂದ ಸಿದ್ದಪಡಿಸಲಾಗಿದೆ ಎಂದ ಅವರು, ದೇಶದಲ್ಲಿ ವೈಜ್ಞಾನಿಕ ವಿಚಾರಗಳು ಬೆಳೆದಿದ್ದು, ಮನುಕುಲಕ್ಕೆ ತೊಂದರೆಯಾಗುವ ಉದ್ದೇಶದಿಂದ ಕಠಿಣ ಕಾನೂನು ಜಾರಿಗೆ ತರಲು ಮುಂದಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಉದ್ದೇಶದಿಂದ ಅಮಾನವೀಯ ದುಷ್ಟ ಪದ್ಧತಿಗಳು ಹಾಗೂ ವಾಮಾಚಾರ ಪ್ರತಿಬಂಧ ಮತ್ತು ನಿರ್ಮೂಲನೆ ವಿಧೇಯಕ ತರಲಾಗಿದೆ ಎಂದರು.

ಬಿಜೆಪಿ ಸದಸ್ಯ ಸಿ.ಟಿ.ರವಿ ಮಾತನಾಡಿ, ಮಸೂದೆಯ ಕೆಲ ಅಂಶಗಳನ್ನು ಸ್ವಾಗತಿಸಿದಲ್ಲದೆ, ಮತ್ತೆ ಕೆಲ ಅಂಶಗಳ ವಿರುದ್ಧ ಆಕ್ಷೇಪಗಳಿವೆ. ಸರಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ವಿಧೇಯಕ ತರುವ ಘೋಷಣೆ ಮಾಡಿ ಇದೀಗ ಚುನಾವಣೆ ಸಮೀಪಿಸುತ್ತಿರುವ ವೇಳೆ ವಿಧೇಯಕ ತರುತ್ತಿರುವುದೇಕೆ ಎಂದು ಸ್ಪಷ್ಟಪಡಿಸಬೇಕು. ಸಿಎಂ ಕಾರಿನ ಮೇಲೆ ಕಾಗೆ ಕುಳಿತ ಬಳಿಕ ಆ ವಾಹನವನ್ನೇ ಬದಲು ಮಾಡಿದರು, ಅಧಿಕಾರ ಹೋಗಲಿದೆ ಎಂಬ ಕಾರಣಕ್ಕೆ ಬಳ್ಳಾರಿಯ ವಿರೋಪಾಕ್ಷ ದೇವಸ್ಥಾನಕ್ಕೆ ಭೇಟಿ ನೀಡಲಿಲ್ಲ. ಜತೆಗೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ವಿಧಾನಸಭೆ ಚುನಾವಣೆಯಲ್ಲಿ ಸೋಲಬೇಕು ಎಂದು ಸಿಎಂ ಮಾಟಮಾಡಿಸಿದರು ಎಂದು ಛೇಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಮಾಟ-ಮಂತ್ರ ಸೇರಿದಂತೆ ಯಾವುದೇ ಮೂಢನಂಬಿಕೆಗಳ ಮೇಲೆ ನನಗೆ ನಂಬಿಕೆ ಇಲ್ಲ. ಬಾಯಿಗೆ ಬಂದಂತೆ ಮಾತನಾಡಬೇಡಿ. ಹಲವು ದಿನಗಳ ಹಿಂದೆ ಕಾರು ಬದಲಾವಣೆ ಮಾಡುವ ಬಗ್ಗೆ ಪ್ರಸ್ತಾಪವಿತ್ತು. ಕಾಗೆ ಕೂರುವುದಕ್ಕೂ ಹೊಸ ಕಾರು ಬರುವುದಕ್ಕೂ ಕಾಲ ಕೂಡಿ ಬಂದಿತ್ತು. ಅದು ಮೂಢನಂಬಿಕೆಯಲ್ಲ. ಬಳ್ಳಾರಿಯ ವಿರುಪಾಕ್ಷ ದೇವಸ್ಥಾನಕ್ಕೆ ಹಲವು ಬಾರಿ ಭೇಟಿ ನೀಡಿದ್ದೇನೆ. ಇತ್ತೀಚೆಗೆ ಹಂಪಿ ಉತ್ಸವಕ್ಕೆ ಹೋಗಿದ್ದಾಗ ದೇವಸ್ಥಾನಕ್ಕೆ ಹೋಗಲು ಸಮಯ ಇರಲಿಲ್ಲ ಎಂದು ಸ್ಪಷ್ಟನೆ ನೀಡಿದರು.

ತಾನು ಚಾಮರಾಜನಗರಕ್ಕೆ ಹತ್ತುಕ್ಕೂ ಹೆಚ್ಚು ಬಾರಿ ಭೇಟಿ ನೀಡಿದ್ದೇನೆ. ಮೂಢನಂಬಿಕೆಯಲ್ಲಿ ನನಗೆ ವಿಶ್ವಾಸ ಇಲ್ಲ. ಐದು ವರ್ಷ ಪೂರ್ಣಗೊಳಿಸುತ್ತೇನೆ. ಈ ಹಿಂದೆ ಚಾಮರಾಜನಗರ ಹೊಸ ಜಿಲ್ಲೆ ರಚನೆಯಾದಾಗ ಸಿಎಂ ಆಗಿದ್ದ ಜೆ.ಎಚ್.ಪಟೇಲ್ ಮಲೆಮಹದೇಶ್ವರ ಬೆಟ್ಟದಲ್ಲೇ ನೂತನ ಜಿಲ್ಲೆ ಉದ್ಘಾಟನೆ ಮಾಡಿದರು. ತಾವು ಮತ್ತು ರಾಚಯ್ಯ ಚಾಮರಾಜನಗರಲ್ಲಿ ಚಾಲನೆ ನೀಡಿದೇವು ಎಂದು ಸ್ಮರಿಸಿಕೊಂಡರು.

ಮಸೂದೆ ಮೇಲೆ ಮಾತನಾಡಿದ ಜೆಡಿಎಸ್ ಸದಸ್ಯ ಎಚ್.ಡಿ.ರೇವಣ್ಣ, ಆಡಳಿತಾರೂಢ ಕಾಂಗ್ರೆಸ್ ಮತ್ತು ವಿಪಕ್ಷ ಬಿಜೆಪಿ ಪಕ್ಷಗಳ ಹಿತದೃಷ್ಟಿಯಿಂದ 2018ರ ವಿಧಾನಸಭೆ ಚುನಾವಣೆ ಪೂರ್ಣಗೊಳ್ಳುವ ವರೆಗೂ ವಾಮಾಚಾರ ನಿರ್ಮೂಲನೆ ಮಸೂದೆ ಜಾರಿಗೆ ತರುವುದು ಬೇಡ ಎಂದು ಹೇಳಿದ್ದು ವಿಧಾನಸಭೆಯಲ್ಲಿ ಕೆಲಕಾಲ ಸ್ವಾರಸ್ಯಕರ ಚರ್ಚೆ ನಡೆಯಿತು.

ನಿಷೇಧ: ಭಾನಾಮತಿ, ಬೆತ್ತಲೆ ಮೆರವಣಿಗೆ, ಅತೀದ್ರೀಯ ಶಕ್ತಿಗಳ ಆಹ್ವಾನ- ಆ ಹೆಸರಿನಲ್ಲಿ ವಂಚನೆ, ದ್ವೇವವನ್ನು ಉಚ್ಚಾಟನೆ ನೆಪದಲ್ಲಿ ಪಾದರಕ್ಷೆಯನ್ನು ಅದಿದ ನೀರು ಕುಡಿಸುವುದು, ಬಾಯಲ್ಲಿ ಮಲ-ಮೂತ್ರ ಹಾಕುವುದು, ಮಾಟ-ಮಂತ್ರ, ಬೆರಳಿನ ಶಸ್ತ್ರ ಚಿಕಿತ್ಸೆ, ಭ್ರೂಣಲಿಂಗ ಬದಲಾವಣೆ, ಪವಿತ್ರಾತ್ಮವಿದೆ ಎಂದು ನಂಬಿಸಿ ಲೈಂಗಿಕ ಶೋಷಣೆ, ಕೊಕ್ಕೆಯಿಂದ ನೇತು ಹಾಕುವುದು, ಸಿಡಿ, ಚಿಕಿತ್ಸೆ ನೆಪದಲ್ಲಿ ಮಕ್ಕಳಿಗೆ ಹಿಂಸೆ, ಮುಳ್ಳುಗಳ ಮೇಲೆ ಮಲಗಿಸುವುದು, ಎತ್ತರಿಂದ ಕೆಳಗೆ ಎಸೆಯುವುದು, ಋತುಮತಿ, ಬಾಣಂತಿಯನ್ನು ಗ್ರಾಮದಿಂದ ಹೊರ ಹಾಕುವುದು, ಗಾವು ಸಿಗಿಯುವುದು, ಮಾನವನ ಘನತೆಗೆ ಕುಂದುಂಟು ಮಾಡುವ ಎಂಜಲು ಎಲೆ ಮೇಲೆ ಉರುಳಲು ಪ್ರೋತ್ಸಾಹ, ಕೆಂಡ ಹಾಯುವುದು, ಬಾಯಿಬೀಗ, ಮಂತ್ರ-ತಂತ್ರ ಚಿಕಿತ್ಸೆ ನೀಡುವುದನ್ನು ನಿಷೇಧಿಸಿದೆ.

ಅಭಾದಿತ: ಧಾರ್ಮಿಕ ಸ್ಥಳಗಳಲ್ಲಿ ಪ್ರದಕ್ಷಣೆ, ಯಾತ್ರೆ, ಪೂಜೆ, ಹರಿಕಥೆ ಭಜನೆ, ಪ್ರಾಥನೆ, ಎಲ್ಲ ಧಾರ್ಮಿಕ ಸಂಭ್ರಮಾಚರಣೆ, ಹಬ್ಬಗಳು, ಮೆರವಣಿಗೆ, ಜೈನ ಸಂಪ್ರದಾಯದ ಕೇಶಲೋಚನೆಯಂತ ಧಾರ್ಮಿಕ ಆಚರಣೆ, ವಾಸ್ತು, ಜ್ಯೋತಿಷ್ಯ-ಸಲಹೆ.

ಜನರನ್ನು ಶೋಷಣೆಗೀಡುಮಾಡುವ ಎಲ್ಲ ರೀತಿಯ ಅನಿಷ್ಟ ಪದ್ಧತಿಗಳನ್ನು ನಿರ್ಮೂಲನೆ ಮಾಡಲು ಅಮಾನೀಯ ದುಷ್ಟ ಪದ್ಧತಿಗಳು ಹಾಗೂ ವಾಮಾಚಾರ ಇವುಗಳ ಪ್ರತಿಬಂಧ ಮತ್ತು ನಿರ್ಮೂಲನೆ ಮಸೂದೆಗೆ ತರಲಾಗಿದೆ. ಈ ಕಾನೂನನ್ನು ಎಲ್ಲ ಧರ್ಮದವರು ಅನುಸರಿಸುವುದು ಕಡ್ಡಾಯ. ದೇಶಕ್ಕೆ ಮಾದರಿಯಾದ ಕ್ರಾಂತಿಕಾರಕ ಕಾನೂನು ಇದಾಗಿದೆ.
ಎಚ್.ಆಂಜನೇಯ, ಸಮಾಜ ಕಲ್ಯಾಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News