×
Ad

ಕರಾವಳಿಯ 42 ಕಡಲ ಕಿನಾರೆಗಳ ಅಭಿವೃದ್ಧಿಗೆ ಕ್ರಮ: ಸಚಿವ ಪ್ರಮೋದ್ ಮಧ್ವರಾಜ್

Update: 2017-11-16 22:18 IST

ಬೆಳಗಾವಿ, ನ. 16: ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರಾವಳಿ ಭಾಗದ 42 ಕಡಲ ಕಿನಾರೆ(ಬೀಚ್‍ಗಳು) ಮತ್ತು ನಾಲ್ಕು ದ್ವೀಪ ಪ್ರದೇಶಗಳನ್ನು ಪ್ರವಾಸೋದ್ಯಮ ತಾಣಗಳನ್ನಾಗಿ ಅಭಿವೃದ್ಧಿಪಡಿಸಲು ‘ಕರಾವಳಿ ನಿಬಂಧ ವಲಯ’(ಸಿಆರ್‍ಝೆಡ್) ಎಂಬ ಕಾರಣಕ್ಕೆ ಸಮಸ್ಯೆಯಾಗಿದೆ ಎಂದು ಪ್ರವಾಸೋದ್ಯಮ ಸಚಿವರ ಪರವಾಗಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.

ಗುರುವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ಎನ್.ಎ ಹಾರೀಸ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ‘ಕರಾವಳಿ ನಿಬಂಧ ವಲಯ’(ಸಿಆರ್‍ಝೆಡ್)ದಿಂದ ವಿನಾಯಿತಿ ನೀಡುವಂತೆ ಕೋರಿ 2016ರ ಆಗಸ್ಟ್ ನಲ್ಲೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೇರಳ ಮತ್ತು ಗೋವಾ ರಾಜ್ಯಗಳಲ್ಲಿ ವಿನಾಯಿತಿ ನೀಡಿರುವ ಹಿನ್ನೆಲೆಯಲ್ಲಿ ಆ ರಾಜ್ಯಗಳಲ್ಲಿ ಕಡಲ ಕಿನಾರೆಗಳು ಪ್ರವಾಸೋದ್ಯಮ ಕೇಂದ್ರಗಳಾಗಿ ಅಭಿವೃದ್ಧಿಗೊಂಡಿವೆ ಎಂದು ಸ್ಪಷ್ಟನೆ ನೀಡಿದರು.

ಕೇಂದ್ರ ಸರಕಾರ ಕರಾವಳಿ ನಿಬಂಧ ವಲಯ(ಸಿಆರ್‍ಝೆಡ್)ನಿಂದ ವಿನಾಯಿತಿ ನೀಡಿದ ಕೂಡಲೇ ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಭಾಗದ ಬೀಚ್ ಗಳ ಅಭಿವೃದ್ಧಿಗೆ ರಾಜ್ಯ ಸರಕಾರ ಆಸ್ಥೆ ವಹಿಸಲಿದೆ. ರಾಜ್ಯದ ಕರಾವಳಿ ಭಾಗವೂ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಫುಲ ಅವಕಾಶಗಳಿವೆ ಎಂದರು.

ಈ ಹಂತದಲ್ಲಿ ಎದ್ದುನಿಂದ ಆಡಳಿತ ಪಕ್ಷದ ಸದಸ್ಯ ಜೆ.ಆರ್.ಲೋಬೋ ಈ ಬಗ್ಗೆ ಹೆಚ್ಚಿನ ವಿವರ ನೀಡಬೇಕೆಂದು ಕೋರಿದರು. ಹೀಗಾಗಿ ಈ ವಿಷಯ ಚರ್ಚೆಗೆ ಅರ್ಧಗಂಟೆ ಕಾಲಾವಕಾಶ ನೀಡಲಾಗುವುದು ಎಂದು ಸ್ಪೀಕರ್ ಕೋಳಿವಾಡ ಅವಕಾಶ ಕಲ್ಪಿಸುವ ಭರವಸೆ ನೀಡಿದ್ದರಿಂದ ಚರ್ಚೆಯನ್ನು ಮುಕ್ತಾಯ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News