ಕುಂದಾಪುರ ಪಟ್ಟಣಕ್ಕೆ ಒಳಚರಂಡಿ ಯೋಜನೆ: ರೋಷನ್‍ಬೇಗ್
ಬೆಳಗಾವಿ, ನ.16: ಉಡುಪಿ ಜಿಲ್ಲೆಯ ಕುಂದಾಪುರ ಪಟ್ಟಣದಲ್ಲಿ ಯುಐಡಿಎಸ್‍ಎಸ್‍ಎಂಟಿ ಯೋಜನೆಯಡಿ 48.14 ಕೋಟಿ ರೂ.ಮೊತ್ತದ ಒಳಚರಂಡಿ ಯೋಜನೆಗೆ ರಾಜ್ಯ ಸರಕಾರವು 2014ರಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ನಗರಾಭಿವೃದ್ಧಿ ಸಚಿವ ಆರ್.ರೋಷನ್‍ಬೇಗ್ ತಿಳಿಸಿದ್ದಾರೆ.
ಗುರುವಾರ ವಿಧಾನಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಯೋಜನೆಯಡಿ ಗ್ರಾಮಸಾರ ಕೊಳವೆ ಮಾರ್ಗವನ್ನು ಅಳವಡಿಸುವುದು, ಆಳುಗುಂಡಿಗಳನ್ನು ಮತ್ತು ವೆಟ್‍ವೆಲ್‍ಗಳನ್ನು ನಿರ್ಮಿಸಲು ಟೆಂಡರ್ ಮೂಲಕ ಅಹಮದಾಬಾದ್‍ನ ಪಿ.ಸಿ.ಸ್ನೇಹಲ್ ಕನ್ಸಟ್ರಕ್ಷನ್ ಸಂಸ್ಥೆಗೆ 42.11 ಕೋಟಿ ರೂ.ಗಳಿಗೆ ವಹಿಸಲಾಗಿದ್ದು, ಕಾಮಗಾರಿಯನ್ನು ಪ್ರಸಕ್ತ ಸಾಲಿನ ನ.23ರೊಳಗೆ ಪೂರ್ಣಗೊಳಿಸಬೇಕಾಗಿದೆ ಎಂದರು.
ಈ ಯೋಜನೆಗೆ ಒಟ್ಟು 7.25 ಎಕರೆಗಳಷ್ಟು ಜಮೀನು ಅವಶ್ಯಕತೆ ಇದ್ದು, ಇದರಲ್ಲಿ 0.25 ಎಕರೆ ಸರಕಾರಿ ಜಮೀನಿದೆ. ಪ್ರಸ್ತುತ 1 ಸಂಖ್ಯೆಯ 2.8 ಎಂಎಲ್‍ಡಿ ಸಾಮಥ್ರ್ಯದ ಮಲಿನ ನೀರು ಶುದ್ಧೀಕರಣ ಘಟಕಕ್ಕೆ ಮತ್ತು ಏರು ಕೊಳವೆ ಮಾರ್ಗ ಅಳವಡಿಸುವ ಹಾದಿಗೆ ಅವಶ್ಯವಿರುವ 1.55 ಎಕರೆ ಜಮೀನುಗಳನ್ನು ಮಾತ್ರ ಸ್ಥಳೀಯ ಸಂಸ್ಥೆಯಿಂದ ಹಸ್ತಾಂತರಿಸಲಾಗಿದೆ ಎಂದು ಅವರು ಹೇಳಿದರು.
5 ವೆಟ್‍ವೆಲ್, 2 ಮಲಿನ ನೀರು ಶುದ್ಧೀಕರಣ ಘಟಕ ಮತ್ತು ಸಂಪರ್ಕ ರಸ್ತೆಗಳಲ್ಲಿ ಕೊಳವೆ ಮಾರ್ಗ ಇತ್ಯಾದಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಬೇಕಾಗಿರುವ 5.45 ಎಕರೆ ಖಾಸಗಿ ಜಮೀನಿನ ಭೂ ಸ್ವಾಧೀನಕ್ಕಾಗಿ ಅಧಿಸೂಚನೆ ಹೊರಡಿಸಬೇಕಾಗಿದೆ. ಆದುದರಿಂದ, ಕಾಮಗಾರಿಯನ್ನು ಮುಕ್ತಾಯಗೊಳಿಸಲು ವಿಳಂಬವಾಗಿದೆ. ಈ ಜಮೀನುಗಳನ್ನು ಭೂ ಸ್ವಾಧೀನ ಪಡಿಸಿಕೊಂಡು ಕಾಮಗಾರಿಯನ್ನು ಮುಂದಿನ ಒಂದು ವರ್ಷದಲ್ಲಿ ಮುಕ್ತಾಯಗೊಳಿಸಲು ಯೋಜಿಸಲಾಗಿದೆ ಎಂದು ತಿಳಿಸಿದರು.
ಪ್ರಸ್ತುತ ಒಳಚರಂಡಿ ಯೋಜನೆಯಡಿಯಲ್ಲಿ 23 ಕಿ.ಮೀ. ಉದ್ದದ ಗ್ರಾಮಸಾರ ಕೊಳವೆ ಮಾರ್ಗವನ್ನು ಅಳವಡಿಸಿ 750 ಆಳುಗುಂಡಿಗಳನ್ನು ನಿರ್ಮಿಸಲಾಗಿದೆ. ಬಾಕಿ ಕಾಮಗಾರಿಯು ಪ್ರಗತಿಯಲ್ಲಿದೆ. ಈ ಕಾಮಗಾರಿಯು ಗುಣಮಟ್ಟದಾಗಿದೆ. ಅನುಮೋದಿತ ಕರಾರಿನ ಪ್ರಕಾರ ಪ್ರತಿ ಕಾಮಗಾರಿಯ ಗುಣಮಟ್ಟ ಪರೀಕ್ಷೆಯನ್ನು 3ನೆ ತಪಾಸಣೆ ಏಜೆನ್ಸಿಯಾದ ಎಸ್‍ಜಿಎಸ್ ರವರಿಂದ ಮಾಡಿಸಿದ ನಂತರ ಬಿಲ್‍ಗಳನ್ನು ಪಾವತಿಸಲಾಗುತ್ತದೆ. ಅದರಂತೆ, ಎಲ್ಲ ಕಾಮಗಾರಿಗಳಲ್ಲೂ ಗುಣಮಟ್ಟವನ್ನು ಕಾಪಾಡಿಕೊಂಡು ಕ್ರಮಬದ್ಧವಾಗಿ ಪೂರ್ಣಗೊಳಿಸಲು ಕ್ರಮ ವಹಿಸಲಾಗಿದೆ ಎಂದರು.
ಶ್ರೀರಾಮ ಫೌಂಡೇಶನ್ ಸಂಸ್ಥೆಯು ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ 1 ಕೋಟಿ ರೂ.ಅಂದಾಜು ವೆಚ್ಚದ ವಿದ್ಯುತ್ ಚಿತಾಗಾರ ನಿರ್ಮಿಸುವುದಾಗಿ ಈ ಬಗ್ಗೆ ಪುರಸಭಾ ವತಿಯಿಂದ ಚಿತಾಗಾರವನ್ನು ನಿರ್ಮಿಸಲು ಅಗತ್ಯವಿರುವ ಭೂಮಿಯನ್ನು ನೀಡಲು ಕೋರಿ ಮನವಿಯನ್ನು ಪುರಸಭೆಗೆ ಸಲ್ಲಿಸಿದ್ದು, ಈ ಬಗ್ಗೆ ವಿವರವಾದ ಪ್ರಸ್ತಾವನೆಯನ್ನು ಪುರಸಭೆಯು ಸಲ್ಲಿಸಿದ್ದಲ್ಲಿ ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ರೋಷನ್‍ಬೇಗ್ ತಿಳಿಸಿದರು.