×
Ad

ಜಿಲ್ಲೆಯ ಆರ್ಥಿಕ ಪ್ರಗತಿಗೆ ಹಾಲು ಒಕ್ಕೂಟ, ಡಿಸಿಸಿ ಬ್ಯಾಂಕ್ ಮುನ್ನುಡಿ ಬರೆದಿದೆ: ಶಿವಶಂಕರ್ ರೆಡ್ಡಿ

Update: 2017-11-16 22:31 IST

ಕೋಲಾರ, ನ.16: ಜಿಲ್ಲಾ ಸಹಕಾರಿ ಯೂನಿಯನ್ ಮತ್ತು ಡಿಸಿಸಿ ಬ್ಯಾಂಕ್ ಸಂಯುಕ್ತಾಶ್ರಯದಲ್ಲಿ ನಡೆದ 64ನೆ ಅಖಿಲ ಭಾರತ ಸಹಕಾರ ಸಪ್ತಾಹ ಮಹಿಳಾ ಸಬಲೀಕರಣಕ್ಕೆ ಸಾಕ್ಷಿಯಾಯಿತು. 15 ಸಾವಿರಕ್ಕೂ ಹೆಚ್ಚು ಮಂದಿ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಸದಸ್ಯರು ಸಮಾವೇಶಗೊಂಡಿದ್ದರು. ಅಖಿಲ ಭಾರತ 64ನೆ ಸಹಕಾರ ಸಪ್ತಾಹವನ್ನು ವಿಧಾನಸಭಾ ಉಪಾಧ್ಯಕ್ಷ ಎನ್.ಎಚ್.ಶಿವಶಂಕರ್ ರೆಡ್ಡಿ ಉದ್ಘಾಟಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಶಿವ ಶಂಕರ ರೆಡ್ಡಿ, ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಹಾಲು ಒಕ್ಕೂಟ ಮತ್ತು ಡಿಸಿಸಿ ಬ್ಯಾಂಕ್ ಆರ್ಥಿಕ ಪ್ರಗತಿಗೆ ಮುನ್ನುಡಿ ಬರೆದಿದೆ ಎಂದು ಶ್ಲಾಘಿಸಿದರು. 

ಕೋಲಾರ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ಮತ್ತು ಡಿಸಿಸಿ ಬ್ಯಾಂಕ್ ಅವಿಭಜಿತ ಕೋಲಾರ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದೆ. ಕಳೆದ 3 ವರ್ಷಗಳಲ್ಲಿ ಡಿಸಿಸಿ ಬ್ಯಾಂಕ್ 15 ಸಾವಿರ ಸ್ವಸಹಾಯ ಗುಂಪುಗಳಿಗೆ 500 ಕೋಟಿ ರೂ. ಸಾಲ ವಿತರಿಸಿದೆ. ಇದೊಂದು ದಾಖಲೆ ಪ್ರಮಾಣದ ಸಾಧನೆಯಾಗಿದೆ. ಬ್ಯಾಂಕ್ ಪೀನಿಕ್ಸ್ ಪಕ್ಷಿಯಂತೆ ಮೈಕೊಡವಿ ನಿಂತು ಆರ್ಥಿಕವಾಗಿ ಸಧೃಢವಾಗಿದೆ. ಬ್ಯಾಂಕ್ ಮೂಲಕ ಸ್ತೀಶಕ್ತಿ ಸ್ವಸಹಾಯ ಗುಂಪುಗಳು ಮತ್ತು ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗಿದೆ. ಬ್ಯಾಂಕ್ ಆ ಮೂಲಕ ಇಡೀ ರಾಜ್ಯದ ಗಮನ ಸೆಳೆದಿದೆ ಎಂದು ಶ್ಲಾಘಿಸಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ಸಹಕಾರ ಸಪ್ತಾಹಕ್ಕೆ 8 ಸಾವಿರ ಮಂದಿ ಸ್ವಸಹಾಯ ಗುಂಪುಗಳ ಸದಸ್ಯರ ಆಗಮನ ನಿರೀಕ್ಷಿಸಲಾಗಿತ್ತು ನಮ್ಮ ನಿರೀಕ್ಷೆಗೂ ಮೀರಿ 15 ಸಾವಿರ ಮಂದಿ ಸಪ್ತಾಹದಲ್ಲಿ ಪಾಲ್ಗೊಂಡಿದ್ದಾರೆ. ಪ್ರಾಮಾಣಿಕವಾಗಿ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಿರುವ ಕಾರಣ ಇಷ್ಟು ದೊಡ್ಡ ಪ್ರಮಾಣದಲ್ಲಿ ಮಹಿಳೆಯರು ಆಗಮಿಸಿದ್ದಾರೆ. ಇದರಿಂದ ಕೆಲಸ ಮಾಡಲು ನಮಗೆ ಹುಮ್ಮಸ್ಸು ದೊರತಿದೆ. ಮಹಿಳೆಯರ ಆಶೀರ್ವಾದದಿಂದ ಮತ್ತಷ್ಟು ಕೆಲಸ ಮಾಡಲು ಉತ್ಸಾಹ ಬಂದಿದೆ. ಬ್ಯಾಂಕ್ ಆಡಳಿತ ಮಂಡಳಿ ವಿರಮಿಸುವುದಿಲ್ಲ ಎಂದರು. 

ಸಪ್ತಾಹದಲ್ಲಿ ಅತ್ತ್ಯುತ್ತಮ ಸಾಧನೆ ಮಾಡಿದ ಸ್ವಸಹಾಯ ಗುಂಪುಗಳು, ಹಾಲು ಉತ್ಪಾಧಕರ ಸಹಕಾರ ಸಂಘಗಳು, ವ್ಯವಸಾಯೋತ್ಪನ್ನ ಸಹಕಾರ ಸಂಘಗಳ ಸದಸ್ಯರನ್ನು ಸನ್ಮಾನಿಸಲಾಯಿತು. ಸಪ್ತಾಹದಲ್ಲಿ ಕರ್ನಾಟಕ ರಾಜ್ಯ ಸಹಕಾರಿ ಮಹಾಮಂಡಳಿ ಅಧ್ಯಕ್ಷ ಡಾ.ಶೇಖರ್‍ಗೌಡ ಮಾಲಿ ಪಾಟೀಲ್, ಕೋಮುಲ್ ಅಧ್ಯಕ್ಷ ಬ್ಯಾಟಪ್ಪ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ವೆಂಕಟಸ್ವಾಮಿ, ಬ್ಯಾಂಕ್ ನಿರ್ದೇಶಕರಾದ ದಯಾನಂದ್, ನಾಗನಾಳ ಸೋಮಣ್ಣ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹೆಚ್.ವಿ.ನಾಗರಾಜ್, ಕೋಮುಲ್ ಎಂ.ಡಿ. ಡಾ. ಹನುಮೇಶ್ ಮುಂತಾದವರು ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News