ಕಾಡಾನೆಗಳ ದಾಳಿ: ಟೊಮೆಟೊ ಬೆಳೆ ನಾಶ; ಲಕ್ಷಾಂತರ ರೂ. ನಷ್ಟ
ಮೈಸೂರು, ನ.16: ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಮುಳ್ಳೂರು ಗ್ರಾಮದಲ್ಲಿ 3 ಎಕರೆಯಲ್ಲಿ ಬೆಳೆದಿದ್ದ ಟೊಮೆಟೊ ಬೆಳೆಯನ್ನು ಕಾಡಾನೆಗಳು ನುಗ್ಗಿ ತುಳಿದು ನಾಶಪಡಿಸಿವೆ. ಇದರಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
ಬುಧವಾರ ರಾತ್ರಿ ಕಾಡಾನೆಗಳು ಟೊಮೆಟೊ ಬೆಳೆಯನ್ನು ತಿಂದು ತುಳಿದು ನಾಶಪಡಿಸಿವೆ. ಇದರಿಂದ ಸಾಲ ಸೋಲ ಮಾಡಿ ಬೆಳೆದಿದ್ದ ರೈತನ ಫಸಲು ಹಾಳಾಗಿದೆ. ಇದರಿಂದ ರೈತ ಬೆಳೆದಿದ್ದ ಫಸಲು ಕೈಗೆ ಸಿಗದೇ ಕೊನೆ ಗಳಿಗೆಯಲ್ಲಿ ನಾಶವಾಗುತ್ತಿವೆ. ಬೆಳೆ ಬೆಳೆಯಲು ಸಾಲ ಮಾಡಿದ್ದು, ಜೀವನ ನಿರ್ವಹಣೆ ಮಾಡುವುದು ಕಷ್ಟಕರವಾಗಿದೆ ಎಂದು ಜಮೀನಿನ ಮಾಲಕರು ಅಳಲು ತೋಡಿಕೊಂಡಿದ್ದಾರೆ. ಇದರಿಂದ ರೈತರು ಸಾಲ ತೀರಿಸಲಾಗದೇ ಫಸಲು ಕೈಗೆ ಸಿಗದೇ ಆತ್ಮಹತ್ಯೆಯ ದಾರಿ ಹಿಡಿಯುವಂತಾಗುತ್ತದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಕೋಟೆ ತಾಲೂಕಿನ ಮುಳ್ಳೂರು, ಚಾಮಲಾಪುರ, ಜಾಲಹಳ್ಳಿ, ಅರಿಯೂರು ಸುತ್ತಮುತ್ತ ದಿನನಿತ್ಯ ಕಾಡಾನೆಗಳ ಹಾವಳಿ ವಿಪರೀತವಾಗಿದೆ. ಇದರಿಂದ ಈ ಭಾಗದ ರೈತರು ಕಂಗಾಲಾಗಿದ್ದಾರೆ. ಮುಂದಿನ ದಿನಗಳಲ್ಲಾದರೂ ಈ ಪ್ರಾಣಿಗಳ ಹಾವಳಿಯನ್ನು ತಡೆಗಟ್ಟಲು ಅರಣ್ಯಾಧಿಕಾರಿಗಳು, ಸಂಬಂಧಪಟ್ಟ ಸಚಿವರು ಶಾಶ್ವತ ಪರಿಹಾರ ಮಾಡಿಕೊಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.