ಅಮಾಯಕರ ಸಾವಿನಿಂದ ಕೆಂಪಾದ ವೈದ್ಯರ ಬಿಳಿ ಬಟ್ಟೆ

Update: 2017-11-16 18:55 GMT

ಸೇನೆ, ಪೊಲೀಸ್, ಶಿಕ್ಷಕ, ವೈದ್ಯ ಈ ಎಲ್ಲ ಹುದ್ದೆಗಳನ್ನು ನಾವು ‘ಸೇವೆ’ ಎಂದು ಗುರುತಿಸುತ್ತೇವೆ. ಇವರೆಲ್ಲರೂ ತಮ್ಮ ವೃತ್ತಿಗೆ ವೇತನವನ್ನು ಪಡೆದುಕೊಳ್ಳುತ್ತಿರಬಹುದು. ಆದರೆ ಹಣವನ್ನು ಮೀರಿದ ಹೊಣೆಗಾರಿಕೆಯನ್ನು ಇವರು ನಿಭಾಯಿಸುವುದರಿಂದಲೇ ಇವರ ಕರ್ತವ್ಯವನ್ನು ಸೇವೆಯೆಂದು ಗೌರವಿಸುತ್ತೇವೆ. ಸೇನೆಯನ್ನೇ ತೆಗೆದುಕೊಳ್ಳೋಣ. ಅಲ್ಲಿರುವ ಅವ್ಯವಸ್ಥೆ ನಮ್ಮ ಯೋಧರ ನೈತಿಕ ಶಕ್ತಿಯನ್ನೇ ಕಂಗೆಡಿಸಿರುವುದು ಸುಳ್ಳಲ್ಲ. ಹಲವು ಸೈನಿಕರ ಮೂಲಕ ಇದು ಸ್ಫೋಟಗೊಂಡಿದೆ. ಹಾಗೆಂದು ಯಾವತ್ತೂ ಸೈನಿಕರು ತಮ್ಮ ಕರ್ತವ್ಯವನ್ನು ಮರೆತು ಮುಷ್ಕರಕ್ಕಿಳಿದಿಲ್ಲ. ಹಾಗೆ ಮುಷ್ಕರಕ್ಕಿಳಿದರೆ ಅದನ್ನು ನಾವು ದೇಶದ ವಿರುದ್ಧ ಬಂಡಾಯವೆಂದು ಗುರುತಿಸುತ್ತೇವೆ.

ಇತ್ತೀಚೆಗೆ ರಾಜ್ಯದಲ್ಲಿ ಪೊಲೀಸರು ಮುಷ್ಕರಕ್ಕಿಳಿಯುವ ಬೆದರಿಕೆಯೊಡ್ಡಿ ಸರಕಾರವನ್ನು ಬೆದರಿಸಿದ್ದರು. ಆದರೆ ಸರಕಾರ ಅದನ್ನು ಯಶಸ್ವಿಯಾಗಿ ನಿಭಾಯಿಸಿತು. ಒಂದು ವೇಳೆ ರಾಜ್ಯಾದ್ಯಂತ ಪೊಲೀಸರೆಲ್ಲ ಒಂದೇ ದಿನ ರಜೆ ಹಾಕಿದ್ದೇ ಆದರೆ ಕಾನೂನು ಸುವ್ಯವಸ್ಥೆಯ ಗತಿ ಏನಾಗಬೇಕು? ಅದನ್ನು ನಾವು ರಾಜ್ಯದ್ರೋಹವೆಂದೇ ಪರಿಗಣಿಸಬೇಕಾಗುತ್ತದೆ. ಯಾಕೆಂದರೆ, ಮುಷ್ಕರದ ಅವಧಿಯಲ್ಲಿ ನಾಡಿಗೆ ಆಗುವ ಹಾನಿಯನ್ನು ಮತ್ತೆ ತುಂಬಿಸಲು ಸಾಧ್ಯವಿಲ್ಲ. ಆದರೆ ಆ ಮುಷ್ಕರದ ಬೆದರಿಕೆ ರಾಜ್ಯ ಸರಕಾರವನ್ನು ಎಚ್ಚರಿಸಿತು ಮಾತ್ರವಲ್ಲ, ಪೊಲೀಸರ ಸಮಸ್ಯೆಗಳಿಗೆ ಕಿವಿಯಾಗಿ, ಅದನ್ನು ಪರಿಹರಿಸಲು ಆಸಕ್ತಿ ವಹಿಸಿತು. ಶಿಕ್ಷಕರಂತೂ ಪ್ರತೀ ವರ್ಷ, ಉತ್ತರ ಪತ್ರಿಕೆ ತಿದ್ದುವ ವೇಳೆ ಮುಷ್ಕರಕ್ಕಿಳಿಯುವುದು, ಸರಕಾರ ಅವರಿಗೆ ಎಚ್ಚರಿಕೆ ನೀಡುವುದು ನಡೆಯುತ್ತಲೇ ಇದೆ. ಇದೀಗ ವೈದ್ಯರ ಸರದಿ.

ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ವಿಧೇಯಕವನ್ನು ಜಾರಿಗೆ ತರಲು ಸರಕಾರ ಯತ್ನಿಸುತ್ತಿರುವ ಸಂದರ್ಭದಲ್ಲಿ ರಾಜ್ಯಾದ್ಯಂತ ವೈದ್ಯರು ಅದರ ವಿರುದ್ಧ ಬಂಡೆದಿದ್ದಾರೆ. ತಮ್ಮ ಆಸ್ಪತ್ರೆಗಳನ್ನು ಮುಚ್ಚಿ ಪ್ರತಿಭಟನೆ ನಡೆಸುತ್ತಿದ್ದಾರೆ. ವೈದ್ಯರ ಈ ಮುಷ್ಕರಕ್ಕೆ 20ಕ್ಕೂ ಅಧಿಕ ಅಮಾಯಕರು ಮೃತಪಟ್ಟಿದ್ದಾರೆ. ಮಗದೊಂದೆಡೆ ನಾಡಿನ ಜನರು ಈ ವಿಧೇಯಕ ಜಾರಿಗೆ ತರಬೇಕು ಎಂದು ಆಗ್ರಹಿಸುತ್ತಿದ್ದಾರೆ. ಈ ವಿಧೇಯಕ ಜಾರಿಯಾಗುವ ಮೂಲಕ ಖಾಸಗಿ ಆಸ್ಪತ್ರೆಗಳ ಸರ್ವಾಧಿಕಾರಕ್ಕೆ ಲಗಾಮು ಹಾಕಬಹುದು ಎನ್ನುವುದು ಸರಕಾರ ಮತ್ತು ಜನಸಾಮಾನ್ಯರ ಅಭಿಮತವಾಗಿದೆ. ಆದರೆ ವೈದ್ಯರ ಪ್ರಕಾರ, ಈ ವಿಧೇಯಕ ಜಾರಿಗೆ ಬಂದರೆ ಸಣ್ಣ ಆಸ್ಪತ್ರೆಗಳೆಲ್ಲ ಮುಚ್ಚಬೇಕಾಗಬಹುದು. ಬೃಹತ್ ಕಾರ್ಪೊರೇಟ್ ಆಸ್ಪತ್ರೆಗಳನ್ನು ಬೆಳೆಸುವುದಕ್ಕಾಗಿಯೇ ಸಣ್ಣ ಆಸ್ಪತ್ರೆಗಳ ವೈದ್ಯರ ಕೈಕಾಲುಗಳನ್ನು ಕಾನೂನಿನ ಮೂಲಕ ಕಟ್ಟಿ ಹಾಕಲು ಯತ್ನಿಸಲಾಗುತ್ತಿದೆ ಎಂದು ಅವರು ಆರೋಪಿಸುತ್ತಿದ್ದಾರೆ. ಪೊಲೀಸರನ್ನೆಲ್ಲ ಭ್ರಷ್ಟಾಚಾರಿಗಳೆಂದು ಬಿಂಬಿಸುವಂತೆ, ವೈದ್ಯರನ್ನೆಲ್ಲ ಸಾರಾಸಗಟಾಗಿ ಸ್ವಾರ್ಥಿಗಳು, ಲೋಭಿಗಳು ಎಂದೆಲ್ಲ ಕರೆಯುವುದಿದೆ. ವೈದ್ಯರಿಂದ ಸಣ್ಣ ಎಡವಟ್ಟುಗಳಾದರೂ ಅದು ನಿರ್ಲಕ್ಷದಿಂದಲೇ ಸಂಭವಿಸಿದೆ ಎನ್ನುವ ಪೂರ್ವಾಗ್ರಹ ಪೀಡಿತರು ಬಹುಸಂಖ್ಯೆಯಲ್ಲಿದ್ದಾರೆ.

ಆದರೆ ಪೊಲೀಸರಿರಲಿ, ವೈದ್ಯರಿರಲಿ ನಮ್ಮಂತೆಯೇ ಸಾಮಾನ್ಯ ಮನುಷ್ಯರು. ಅವರು ಅತಿಮಾನುಷರಲ್ಲ. ತಮ್ಮೆಲ್ಲ ಒತ್ತಡಗಳ ನಡುವೆ ಅವರು ನಿಭಾಯಿಸುವ ಹೊಣೆಗಾರಿಕೆ ಅತೀ ದೊಡ್ಡದು. ಅವರಿಗೂ ಅವರದೇ ಆದ ವೈಯಕ್ತಿಕ ಬದುಕು ಇದೆ. ತಮ್ಮ ಕರ್ತವ್ಯ ಸಂದರ್ಭದಲ್ಲಿ ಅಂತಹ ವೈಯಕ್ತಿಕ ಬದುಕನ್ನು ಅವರು ಬಹಳಷ್ಟು ಸಮಯದಲ್ಲಿ ಬಲಿಕೊಡಬೇಕಾಗುತ್ತದೆ. ಹಗಲು ರಾತ್ರಿ ರಸ್ತೆಗಳಲ್ಲಿ, ಬೀದಿಗಳಲ್ಲೀ ಚಳಿ, ಮಳೆ, ಬಿಸಿಲೆನ್ನದೆ ಕಳೆಯುವ, ಕ್ರಿಮಿನಲ್‌ಗಳ ನಡುವೆ ಜೀವ ಒತ್ತೆಯಿಟ್ಟು ವ್ಯವಹರಿಸುವ ಪೊಲೀಸರ ಬಗ್ಗೆ ಒಂದಿಷ್ಟು ಮೃದುವಾಗಿ, ಸಕಾರಾತ್ಮಕವಾಗಿ ಯೋಚಿಸಿದರೆ ಅವರು ಸಮಾಜಕ್ಕೆ ನೀಡುತ್ತಿರುವ ಕೊಡುಗೆ ಅದೆಷ್ಟು ಹಿರಿದಾದುದು ಎನ್ನುವುದನ್ನು ನಮ್ಮದಾಗಿಸಿಕೊಳ್ಳಬಹುದು.

ಹಗಲು ರಾತ್ರಿ ರೋಗಿಗಳ ಜೊತೆಗೆ ಕಳೆಯುವ ವೈದ್ಯರೂ ಇದಕ್ಕೆ ಭಿನ್ನರಲ್ಲ. ನೂರು ಮಂದಿಗೆ ಚಿಕಿತ್ಸೆ ಕೊಡುವಾಗ ಎರಡು ತಪ್ಪುಗಳು ನಡೆದು ಹೋಗಬಹುದು. ರೋಗಿಗಳ ಕುಟುಂಬಕ್ಕೆ ಅದು ಬಹುದೊಡ್ಡ ನಷ್ಟ. ಆದರೆ ಇದೇ ಸಂದರ್ಭದಲ್ಲಿ ಹೆಚ್ಚಿನ ವೈದ್ಯರು ತಮ್ಮ ವೃತ್ತಿಯ ಘನತೆ, ಗೌರವವನ್ನು ಇಟ್ಟುಕೊಂಡೇ ಇನ್ನೂ ಕೆಲಸ ಮಾಡುತ್ತಿದ್ದಾರೆ ಎನ್ನುವುದನ್ನು ನಾವು ಮರೆಯಬಾರದು. ಆದುದರಿಂದ ಸಮಾಜ ಇಷ್ಟಾದರೂ ಸ್ವಸ್ಥವಾಗಿದೆ. ಇದೇ ಸಂದರ್ಭದಲ್ಲಿ ವೈದ್ಯಕೀಯ ಸೇವೆಯ ವೌಲ್ಯವನ್ನು ಮರೆತವರು ಅದನ್ನು ಹಣ ದೋಚುವ ದಂಧೆಯಾಗಿಸಿರುವುದನ್ನು ಯಾವುದೇ ಕಾರಣಕ್ಕೂ ಅಲ್ಲಗಳೆಯುವಂತಿಲ್ಲ. ವೈದ್ಯಕೀಯ ಕ್ಷೇತ್ರವನ್ನು ಉದ್ಯಮವಾಗಿಸಿಕೊಂಡ ಶಕ್ತಿಗಳನ್ನು ಮಟ್ಟ ಹಾಕಬೇಕು ಎನ್ನುವುದರಲ್ಲಿ ಎರಡು ಮಾತೇ ಇಲ್ಲ. ಇದೇ ಸಂದರ್ಭದಲ್ಲಿ, ಅಂತಹ ಶಕ್ತಿಗಳಿಗೆ ನೀಡುವ ಏಟಿಗೆ ಪ್ರಾಮಾಣಿಕ ವೈದ್ಯರು ಬಲಿಯಾಗಬಾರದು ಎನ್ನುವುದೂ ಅಷ್ಟೇ ಮುಖ್ಯ.

ಆದುದರಿಂದ, ವಿಧೇಯಕವನ್ನು ಏಕ ಮುಖವಾಗಿ ಜಾರಿಗೊಳಿಸದೆ, ವೈದ್ಯರ ಜೊತೆಗೆ ಎಲ್ಲ ಆಯಾಮಾಗಳನ್ನು ಇಟ್ಟುಕೊಂಡು ಚರ್ಚಿಸಿ ಆ ಬಳಿಕವೇ ಜಾರಿಗೆ ತರಬೇಕು. ಹಾಗೆಂದು, ವೈದ್ಯರು ಕಾನೂನಿಗೆ ಅತೀತರಲ್ಲ. ರೋಗಿಗಳನ್ನು ಸುಲಿಯುವುದು ತಮ್ಮ ಹಕ್ಕು ಎಂದು ತಿಳಿದುಕೊಂಡ ದೊಡ್ಡ ಪಡೆಯೇ ವೈದ್ಯಕೀಯ ಕ್ಷೇತ್ರದೊಳಗೆ ನುಗ್ಗಿದೆ. ಅದಕ್ಕೆ ಬಲಿಯಾದವರು ಹಣವನ್ನು ಮಾತ್ರ ಕಳೆದುಕೊಂಡಿರುವುದಲ್ಲ, ಪ್ರಾಣಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಇಂದು ವೈದ್ಯರ ಬೇಜವಾಬ್ದಾರಿಗಳನ್ನು ಪ್ರಶ್ನಿಸಲೂ ಬಾರದು ಎನ್ನುವಂತಹ ಕಾನೂನು ಇದೆ. ವೈದ್ಯರ ಸ್ವಾರ್ಥ ಮತ್ತು ಬೇಜವಾಬ್ದಾರಿಗೆ ತಮ್ಮ ಕುಟುಂಬ ಸದಸ್ಯರು ಮೃತಪಟ್ಟರೆ ಸಂತ್ರಸ್ತರು ಆಕ್ರೋಶಗೊಳ್ಳುವುದು ಸಹಜ. ಆದರೆ ಅಂತಹ ಜನರ ಮೇಲೆ ಗೂಂಡಾ ಕಾಯ್ದೆಯನ್ನು ಯಾವ ಕರುಣೆಯೂ ಇಲ್ಲದೆ ಬಳಸುವುದೂ ಇದೆ.

ಇದೇ ಸಂದರ್ಭದಲ್ಲಿ ತಪ್ಪೆಸಗುವ, ವೈದ್ಯಕೀಯ ಕ್ಷೇತ್ರವನ್ನು ದುರ್ಬಳಕೆ ಮಾಡುವವರ ಮೇಲೆ ಕಾನೂನನ್ನು ಬಿಗಿಗೊಳಿಸಬಾರದು ಎಂದು ವೈದ್ಯರು ಹೇಳುವುದು ಅವರ ಸ್ವಾರ್ಥದ ಪರಮಾವಧಿಯನ್ನು ತೋರಿಸುತ್ತದೆ. ಇದು ವೈದ್ಯಕೀಯ ಕ್ಷೇತ್ರಕ್ಕೆ ಅವರು ಬಗೆಯುವ ದ್ರೋಹವಾಗಿದೆ. ಇಂದು ಜನಸಾಮಾನ್ಯರ ಹಣೆಗೆ ಪಿಸ್ತೂಲ್ ಇಟ್ಟು ವಿಧೇಯಕವನ್ನು ಹಿಂದೆಗೆಯಿರಿ ಎಂದು ಸರಕಾರವನ್ನು ಬೆದರಿಸುತ್ತಿರುವ ವೈದ್ಯರು ತಾವು ಧರಿಸಿರುವ ಬಿಳಿ ವಸ್ತ್ರಕ್ಕೆ ಅನ್ಯಾಯವೆಸಗಿದ್ದಾರೆ. 20ಕ್ಕೂ ಅಧಿಕ ಜನರ ಸಾವಿನಿಂದ ಅವರ ವಸ್ತ್ರ ಕೆಂಪಾಗಿದೆ. ಅದನ್ನು ಒಗೆದು ಮತ್ತೆ ಬಿಳಿ ಮಾಡುವುದು ಅಷ್ಟು ಸುಲಭವಲ್ಲ. ಈ ನಿಟ್ಟಿನಲ್ಲಿ ವೈದ್ಯರು ತಮ್ಮ ಸ್ಕೆತೋಸ್ಕೋಪನ್ನು ತಮ್ಮ ಎದೆಗೇ ಇಟ್ಟು ಎದೆಬಡಿತವನ್ನು ಆಲಿಸಿಕೊಳ್ಳಬೇಕಾಗಿದೆ. ಈಗಾಗಲೇ ಹೈಕೋರ್ಟ್ ಮುಷ್ಕರ ಹಿಂದೆಗೆಯಲು ಸೂಚನೆ ನೀಡಿದೆ.

ಹೈಕೋರ್ಟ್‌ನ ಆದೇಶವನ್ನು ಪಾಲಿಸುವ ಮೂಲಕ ಕನಿಷ್ಠ ಸಂವಿಧಾನಕ್ಕಾದರೂ ವೈದ್ಯರು ಗೌರವ ನೀಡಬೇಕಾಗಿದೆ. ಸರಕಾರ ಯಾವ ಕಾರಣಕ್ಕೂ ವಿಧೇಯಕ ಜಾರಿಗೊಳಿಸುವುದರಿಂದ ಹಿಂದೆ ಸರಿಯಬಾರದು. ಇದೇ ಸಂದರ್ಭದಲ್ಲಿ ತೀರಾ ಅವೈಜ್ಞಾನಿಕ, ತರ್ಕಹೀನ ಎನಿಸುವ ಕೆಲವು ಕಠಿಣ ಕಾನೂನನ್ನು ಹಿಂದೆಗೆಯಬಹುದು. ಆದರೆ ಇದೇ ಸಂದರ್ಭದಲ್ಲಿ ರೋಗಿಗಳ ಶುಲ್ಕ ಪಾವತಿಯ ಕುರಿತಂತೆ ಇರುವ ನಿಯಮವನ್ನು ಯಾವ ಕಾರಣಕ್ಕೂ ಹಿಂದೆಗೆಯಬಾರದು.

ವೈದ್ಯರು ಪಡೆಯುವ ಶುಲ್ಕವೂ ಸೇರಿದಂತೆ ತಮ್ಮ ಸೇವೆಯ ಮೆನುಕಾರ್ಡ್‌ನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇಡಬೇಕು. ಹಾಗೆಯೇ ಜನರು ಸರಕಾರಿ ಆಸ್ಪತ್ರೆ ಕಡೆ ಹೋಗದೆ, ಖಾಸಗಿ ಆಸ್ಪತ್ರೆಗೆ ಯಾಕೆ ಧಾವಿಸುತ್ತಾರೆ ಎನ್ನುವುದನ್ನೂ ಸರಕಾರ ಅರ್ಥ ಮಾಡಿಕೊಳ್ಳಬೇಕು. ಒಂದೆಡೆ ಸರಕಾರಿ ಆಸ್ಪತ್ರೆಗಳನ್ನು ಖಾಸಗಿಯವರಿಗೆ ಮಾರುತ್ತಾ, ಮಗದೊಂದೆಡೆ ಖಾಸಗಿ ವೈದ್ಯರನ್ನು ಪಳಗಿಸಲು ಹೊರಡುವುದು ಸರಿಯಲ್ಲ. ನಮ್ಮ ಸರಕಾರಿ ಆಸ್ಪತ್ರೆಗಳನ್ನು ಆತ್ಯಾಧುನಿಕಗೊಳಿಸುವುದು, ಅಲ್ಲಿಗೆ ಅಗತ್ಯವಿರುವ ಸಿಬ್ಬಂದಿಯನ್ನು ತುಂಬುವುದು, ಯಾವುದೇ ಖಾಸಗಿ ಆಸ್ಪತ್ರೆಗಳಿಗೆ ಸರಿಗಟ್ಟುವಂತೆ ಅವುಗಳನ್ನು ಆಧುನಿಕಗೊಳಿಸುವುದು ಪರೋಕ್ಷವಾಗಿ ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ ಹಾಕಿದಂತೆಯೇ ಸರಿ. ಈ ಬಗ್ಗೆ ಸರಕಾರ ಗಂಭೀರವಾಗಿ ಯೋಚಿಸಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News