ನೋಟ್ ಬ್ಯಾನ್ ನಂತರ ಕೇಂದ್ರ ಸರಕಾರದಿಂದ ಮತ್ತೊಂದು ಶಾಕ್?

Update: 2017-11-17 13:25 GMT
ಹೊಸದಿಲ್ಲಿ, ನ.17: ಕಳೆದ ವರ್ಷ ಕೇಂದ್ರ ಸರಕಾರ ನೋಟ್ ಬ್ಯಾನ್ ಮಾಡಿದ ಸಂದರ್ಭ ದೇಶದ ಜನತೆ ಎದುರಿಸಿದ ಸಂಕಷ್ಟ ಅಷ್ಟಿಷ್ಟಲ್ಲ. ಇದೀಗ ಮತ್ತೊಮ್ಮೆ ಇಂತದ್ದೇ ಶಾಕ್ ನೀಡಲು ಕೇಂದ್ರ ಸರಕಾರ ಮುಂದಾಗಿದೆ ಎನ್ನಲಾಗಿದೆ. ಡಿಜಿಟಲ್ ವ್ಯವಹಾರಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ಭವಿಷ್ಯದಲ್ಲಿ ಬ್ಯಾಂಕ್ ಚೆಕ್ ಬುಕ್ ಸೌಲಭ್ಯವನ್ನು ಹಿಂದೆಗೆದುಕೊಳ್ಳಬಹುದು ಎಂದು ಕಾನ್ಫಿಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (ಸಿಎಐಟಿ) ನ ಹಿರಿಯ ಸದಸ್ಯರೊಬ್ಬರು ಹೇಳಿರುವುದಾಗಿ financialexpress.com ವರದಿ ಮಾಡಿದೆ. ಡೆಬಿಟ್ ಕಾರ್ಡ್ ಹಾಗು ಕ್ರೆಡಿಟ್ ಕಾರ್ಡ್ ಬಳಕೆಯನ್ನು ಪ್ರೋತ್ಸಾಹಿಸುವುದು ಸರಕಾರದ ಅಗತ್ಯವಾಗಿದೆ ಎಂದು ಸಿಎಐಟಿ ಮಹಾ ಕಾರ್ಯದರ್ಶಿ ಪ್ರವೀಣ್ ಖಂಡೇಲ್ ವಾಲ್ ಹೇಳಿದ್ದಾರೆ. “ಈ ಎಲ್ಲಾ ಕಾರಣಗಳಿಂದ ಭವಿಷ್ಯದಲ್ಲಿ ಕೇಂದ್ರ ಸರಕಾರವು ಬ್ಯಾಂಕ್ ಗಳ ಚೆಕ್ ಬುಕ್ ಸೌಲಭ್ಯವನ್ನು ಹಿಂದೆಗೆದುಕೊಳ್ಳಲೂಬಹುದು” ಎಂದವರು ಹೇಳಿದರು. ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಅವರು ನಂತರ ಪತ್ರಕರ್ತರೊಂದಿಗೆ ಈ ಮಾಹಿತಿ ಹಂಚಿಕೊಂಡರು. “ಸರಕಾರವು ಕರೆನ್ಸಿ ನೋಟುಗಳನ್ನು ಮುದ್ರಿಸಲು 25 ಸಾವಿರ ಕೋಟಿ ರೂ.ಗಳನ್ನು ಹಾಗು ಅದರ ಭದ್ರತೆ ಮತ್ತು ಇತರ ಕೆಲಸಗಳಿಗಾಗಿ 6 ಸಾವಿರ ಕೋಟಿ ರೂ.ಗಳನ್ನು ವ್ಯಯಿಸುತ್ತಿದೆ. ಇದಲ್ಲದೆ ಬ್ಯಾಂಕುಗಳು ಡೆಬಿಟ್ ಕಾರ್ಡ್ ಮೂಲಕ ಪಾವತಿ ಮಾಡಿದರೆ 1 ಶೇಕಡ ಹಾಗು ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ಮಾಡಿದರೆ 2 ಶೇ. ಶುಲ್ಕ ವಿಧಿಸುತ್ತದೆ. ಸರಕಾರವು ನೇರವಾಗಿ ಬ್ಯಾಂಕ್ ಗಳಿಗೆ ಸಬ್ಸಿಡಿ ನೀಡುವ ಮೂಲಕ ಈ ಶುಲ್ಕಗಳನ್ನು ರದ್ದು ಮಾಡಬಹುದು” ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News