ಅಧಿಕಾರದಿಂದ ಇಳಿಯಲು ನಿರಾಕರಿಸಿದ ಮುಗಾಬೆ

Update: 2017-11-17 18:00 GMT

ಹರಾರೆ (ಜಿಂಬಾಬ್ವೆ), ನ. 17: ಸೇನಾಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ, ಜಿಂಬಾಬ್ವೆ ಅಧ್ಯಕ್ಷ ರಾಬರ್ಟ್ ಮುಗಾಬೆ ರಾಜೀನಾಮೆ ನೀಡಲು ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ತನ್ನ ನಿರ್ಗಮನದ ಬಗ್ಗೆ ಮಾತುಕತೆ ನಡೆಸಲು ಅವರು ಸಮಯ ತೆಗೆದುಕೊಳ್ಳುತ್ತಿದ್ದಾರೆ ಎಂದು ಭಾವಿಸಲಾಗಿದೆ.

  ಸೇನೆಯು ಮುಗಾಬೆಯನ್ನು ಗೃಹಬಂಧನದಲ್ಲಿರಿಸಿದ ಬಳಿಕ ಗುರುವಾರ ಹರಾರೆಯಲ್ಲಿ ಈ ಸಭೆ ನಡೆಯಿತು. ಸೇನೆಯು ಈಗಾಗಲೇ ದೇಶದ ಸರಕಾರಿ ಟಿವಿಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ ಹಾಗೂ ಪ್ರಧಾನ ರಸ್ತೆಗಳನ್ನು ಮುಚ್ಚಿದೆ.

1980ರಿಂದ 37 ವರ್ಷಗಳ ಕಾಲ ನಿರಂತರವಾಗಿ ದೇಶವನ್ನು ಉಕ್ಕಿನ ಹಸ್ತದಿಂದ ಆಳುತ್ತಾ ಬಂದಿರುವ 93 ವರ್ಷದ ಮುಗಾಬೆ, ಈ ಸೇನಾ ಕ್ಷಿಪ್ರಕ್ರಾಂತಿಯಿಂದ ಚಕಿತರಾಗಿದ್ದಾರೆ ಎನ್ನಲಾಗಿದೆ.

ಮುಗಾಬೆಯನ್ನು ಅವರ ಖಾಸಗಿ ನಿವಾಸದಿಂದ ಸರಕಾರಿ ನಿವಾಸಕ್ಕೆ ಮಾತುಕತೆಗಾಗಿ ಭಾರೀ ಭದ್ರತೆಯಲ್ಲಿ ಕರೆದೊಯ್ಯಲಾಯಿತು. ಈ ಸಭೆಯಲ್ಲಿ ಪ್ರಾದೇಶಿಕ ಗುಂಪು ದಕ್ಷಿಣ ಆಫ್ರಿಕ ಅಭಿವೃದ್ಧಿ ಸಮುದಾಯ (ಎಸ್‌ಎಡಿಸಿ)ದ ಪ್ರತಿನಿಧಿಗಳೂ ಸಭೆಯಲ್ಲಿ ಪಾಲ್ಗೊಂಡಿದ್ದರು.

''ಇಂದು ಸಭೆ ನಡೆಯಿತು. ಅವರು ಅಧಿಕಾರದಿಂದ ಕೆಳಗಿಳಿಯಲು ನಿರಾಕರಿಸುತ್ತಿದ್ದಾರೆ. ಅವರು ಸಮಯಾವಕಾಶ ಪಡೆಯಲು ಯತ್ನಿಸುತ್ತಿದ್ದಾರೆ ಎಂದು ನನಗನಿಸುತ್ತದೆ'' ಎಂದು ಸೇನಾ ನಾಯಕತ್ವಕ್ಕೆ ನಿಕಟವಾಗಿರುವ ಮೂಲವೊಂದು ತಿಳಿಸಿದೆ.

ಮುಗಾಬೆಯ ಹೆಚ್ಚುತ್ತಿರುವ ಪ್ರಾಯ, ಕೈಕೊಟ್ಟ ಆರೋಗ್ಯ ಮತ್ತು ಸಾರ್ವಜನಿಕ ಅನುಪಸ್ಥಿತಿಯ ಹಿನ್ನೆಲೆಯಲ್ಲಿ, ಅವರ ಉತ್ತರಾಧಿಕಾರಿ ಯಾರಾಗಬೇಕೆಂಬ ಬಗ್ಗೆ ಬಿರುಸಿನ ಚಟುವಟಿಕೆಗಳು ನಡೆದಿವೆ. ಮುಗಾಬೆಯ ಪತ್ನಿ ಗ್ರೇಸ್ ಮತ್ತು ಮಾಜಿ ಉಪಾಧ್ಯಕ್ಷ ಎಮರ್‌ಸನ್ ಮನಂಗಾಗ್ವ ನಡುವೆ ಉತ್ತರಾಧಿಕಾರಿ ಸ್ಪರ್ಧೆ ನಡೆಯುತ್ತಿದೆ.

ಎಮರ್‌ಸನ್‌ರನ್ನು ಮುಗಾಬೆ ಕಳೆದ ವಾರ ವಜಾಗೊಳಿಸಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News