×
Ad

ನಾನು ಸಮಾಜ ಮುಖಿಯಾಗಿ ಚಿಂತಿಸಲು ರಂಗಭೂಮಿ ಚಳವಳಿ ಕಾರಣ: ನಟ ಪ್ರಕಾಶ್‍ ರೈ

Update: 2017-11-18 23:04 IST

ಕೋಲಾರ, ನ.18: ನಾನು ಸಮಾಜ ಮುಖಿಯಾಗಿ ಚಿಂತಿಸಲು ಮತ್ತು ಸಮಾಜದ ದನಿಯಾಗಿ ನಿಲ್ಲಲು ರಂಗಭೂಮಿ ಚಳವಳಿ ಕಾರಣವಾಗಿದೆ. ಹುಟ್ಟಿದಾಗ ಕಲೆ ಇರಲಿಲ್ಲ. ಹುಟ್ಟಿಸಿದವರಲ್ಲೂ ಕಲೆ ಇರಲಿಲ್ಲ. ಆದರೆ ಬೆಳೆಯುತ್ತಾ ಭೂಮಿಯಲ್ಲಿ ನಾನೊಬ್ಬ ಕಲಾವಿದನಾಗಿ ರೂಪುಗೊಂಡೆ ಎಂದು ಬಹುಭಾಷಾ ನಟ ಪ್ರಕಾಶ್‍ರೈ ತಿಳಿಸಿದ್ದಾರೆ.

ಮಾಲೂರು ತಾಲೂಕಿನ ಆಲಂಬಾಡಿ ಬಳಿ ಸಾರಂಗರಂಗ ಆಶ್ರಯದಲ್ಲಿ ಶ್ರೀ ಗೋಪಾಲಪ್ಪ ಮನೆಯಂಗಳ ರಂಗಭೂಮಿ ವೇದಿಕೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಚಿಂತಕರು ಮತ್ತು ರಂಗಭೂಮಿಯ ಕಲಾವಿದರ ಉಳಿಪೆಟ್ಟು ಮತ್ತು ಅವರ ಮಾತುಗಳ ಪ್ರಭಾವದಿಂದ ನಾನೊಬ್ಬ ಕಲಾವಿದನಾಗಿ ರೂಪುಗೊಂಡೆ. ನಮ್ಮನ್ನು ನಾವು ಗೌರವಿಸಿದಂತೆ ಇನ್ನೊಬ್ಬರನ್ನೂ ಗೌರವಿಸಬೇಕು ಎಂದರು.

ರಂಗಕರ್ಮಿ ಹಾಗೂ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿ, ಈಗಿನ ಪಿಚ್ಚಳ್ಳಿ ಶ್ರೀನಿವಾಸ್ 30 ವರ್ಷಗಳ ಹಿಂದೆ ವಿದ್ಯಾರ್ಥಿಯಾಗಿದ್ದು, ಸಮುದಾಯದ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ಶ್ರೀನಿವಾಸ್ ಹೋರಾಟಗಳಿಗೆ ಕೊರಳುಕೊಟ್ಟಿದ್ದರು. ಆ ಕಾಲಕ್ಕೆ ಜನಮುಖಿಯಾದ ದನಿ ನೀಡಿದ ಯುವಕ ಆಗಿದ್ದರು. ಆ ಹೊತ್ತಿನ ಕೊಡುಗೆ ಇಂದಿನ ಸಮಾರಂಭಕ್ಕೆ ಕಾರಣವಾಗಿದೆ. ಮೂರು ದಶಕಗಳ ಕಾಲ ಒಬ್ಬ ಕಲಾವಿದನಾಗಿ ಪಿಚ್ಚಹಳ್ಳಿ ಶ್ರೀನಿವಾಸ್ ಸಮುದಾಯಕ್ಕೆ ಕೊಡುಗೆ ನೀಡಿದ್ದಾರೆ. ಆ ಕೊಡುಗೆ ನೀಡಲು ದಲಿತ ಚಳವಳಿ ಒಳ್ಳೆಯ ಅವಕಾಶ ನೀಡಿತ್ತು ಎಂದರು.

ನಟ ಪ್ರಕಾಶ್ ರೈ ಸಂಸ್ಕೃತಿ ಪರ ದನಿ ಬಿಚ್ಚಿ ಮಾತನಾಡುತ್ತಾರೆ. ವ್ಯವಸ್ಥೆಯ ವಿರುದ್ಧ ಮಾತನಾಡಲು ಹಿಂಜರಿಯುವುದಿಲ್ಲ. ಇಂದಿನ ಪರಿಸ್ಥಿತಿಯಲ್ಲಿ ಸಾರಂಗರಂಗದಂತಹ ಪ್ರಯೋಗಗಳು ಅಗತ್ಯವಿದೆ ಎಂದರು. 

ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ವಿ. ಗೀತಾ ಮಾತನಾಡಿ, ಆದಿಮ ಆರಂಭವಾಗದಿದ್ದಲ್ಲಿ ಕೋಲಾರದ ಅಂತರಗಂಗೆ ಬೆಟ್ಟ ಮತ್ತೊಂದು ಬಾಬಾ ಬುಡನ್‍ಗಿರಿಯಾಗುತ್ತಿತ್ತು. ಅಂತರಗಂಗೆ ಬೆಟ್ಟದ ಕಾಶಿ ವಿಶ್ವೇಶ್ವರ ದೇವಾಲಯವನ್ನು ಕೇಸರಿಕರಣಗೊಳಿಸಲಾಗಿದೆ. ಅದನ್ನು ಬಜರಂಗದಳ ಕಾರ್ಯಕ್ರಮದಂತೆ ಬಿಂಬಿಸಲಾಗುತ್ತಿದೆ. ಜಾತ್ಯಾತೀತವಾಗಿ ನಡೆಯಬೇಕಾಗಿದ್ದ ಕಾರ್ಯಕ್ರಮವನ್ನು ಒಂದು ಸಮುದಾಯದ ಕಾರ್ಯಕ್ರಮದಂತೆ ಬಿಂಬಿಸಲಾಗುತ್ತಿದೆ ಎಂದು ವಿಷಾದಿಸಿದರು.

ಸಾರಂಗರಂಗದ ರೂವಾರಿ ಪಿಚ್ಚಳ್ಳಿ ಶ್ರೀನಿವಾಸ್ ಮಾತನಾಡಿ, ಗ್ರಾಮೀಣ ಪರಂಪರೆ ಕಲೆ, ಸಂಸ್ಕೃತಿ ಚಟುವಟಿಕೆಗಳಲ್ಲಿ ಸಾರಂಗ ರಂಗ ತೊಡಗಿಸಿಕೊಳ್ಳಲಿದೆ. ಅದರ ಮುಖಾಂತರ ತಾನೇ ತಾನಾಗಿ ಸಾರಂಗರಂಗ ಬೆಳೆಯಲಿದೆ. ರಂಗ ಚಟುವಟಿಕೆಗಳಿಗಾಗಿ ಬಯಲು ರಂಗಮಂದಿರ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಿ.ಎಂ.ಮುನಿಯಪ್ಪ, ಸಿ.ಕೆ. ಗುಂಡಣ್ಣ, ಶಶಿಧರ್ ಅಡಪ, ಸಾರಂಗ ಸಂಸ್ಥೆಯ ಅಧ್ಯಕ್ಷ ಸಿ. ಲಕ್ಷ್ಮೀನಾರಾಯಣ್ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News