ಪತ್ನಿ ಹತ್ಯೆ: ಅಪರಾಧಿಗೆ ಏಳು ವರ್ಷ ಜೈಲು
ಮೈಸೂರು,ನ.18: ವರದಕ್ಷಿಣೆ ಕಿರುಕುಳ ನೀಡಿ ಪತ್ನಿಯನ್ನು ಕೊಲೆ ಮಾಡಿದ ಪತಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ಮೈಸೂರಿನ ಏಳನೆ ಜಿಲ್ಲಾ ಹೆಚ್ಚುವರಿ ನ್ಯಾಯಾಲಯ ಆದೇಶ ನೀಡಿದೆ.
ತಜ್ಮಲ್ ಅಹ್ಮದ್ ಖಾನ್ ಏಳು ವರ್ಷ ಜೈಲು ಶಿಕ್ಷೆಗೆ ಗುರಿಯಾದ ಅಪರಾಧಿ.
ಈತ 2005ರಲ್ಲಿ ಅಮೀನಾ ಖಾತೂನ್ ಎಂಬಾಕೆಯನ್ನ ಮದುವೆಯಾಗಿದ್ದು, ಮದುವೆಯಾದ 2 ವರ್ಷಗಳ ನಂತರ ತವರು ಮನೆಯಿಂದ ಹಣವನ್ನ ಸಾಲವಾಗಿ ತರುವಂತೆ ಪೀಡಿಸುತ್ತಾ ಆಕೆಗೆ ಹೊಡೆದು ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದ. ಗಂಡನ ಕಿರುಕುಳ ತಳಲಾರದೆ ಪತ್ನಿ ತವರು ಮನೆಯವರಿಗೆ ವಿಷಯ ತಿಳಿಸಿದ್ದು, ಪತ್ನಿಯ ಮನೆಯವರು ಅಪರಾಧಿ ಪತಿಗೆ ಚೆನ್ನಾಗಿ ನೋಡಿಕೊಳ್ಳುವಂತೆ ಹೇಳಿದ್ದರು. ಆದರೂ ತನ್ನ ವರಸೆ ಬದಲಾಯಿಸಿಕೊಳ್ಳದ ಗಂಡ ತಜ್ಮಲ್ ಅಹ್ಮದ್ ಖಾನ್ 2011ರಲ್ಲಿ ಮತ್ತೆ ಹೆಂಡತಿಗೆ ತವರು ಮನೆಯಿಂದ ವರದಕ್ಷಿಣೆ ತರುವಂತೆ ಜಗಳ ತೆಗೆದು ಪತ್ನಿಯನ್ನ ಮನೆಯ ಗೋಡೆಗೆ ಜೋರಾಗಿ ತಳ್ಳಿದ್ದಾನೆ. ಪರಿಣಾಮ ಪತ್ನಿ ಸ್ಥಳದಲ್ಲಿ ಮೃತಪಟ್ಟಿದ್ದಳು. ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಗಂಡನ ವಿರುದ್ಧ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.
ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 13 ಸಾವಿರ ದಂಡ ಹಾಗೂ ಏಳು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ಮೈಸೂರಿನ ಏಳನೇ ಜಿಲ್ಲಾ ಹೆಚ್ಚುವರಿ ನ್ಯಾಯಾಲಯ ಆದೇಶ ನೀಡಿದೆ.