ಜನ ಸಾಮಾನ್ಯರ ಹೃದಯದಲ್ಲಿ ಅಮರರಾದ ಇಂದಿರಾ ಗಾಂಧಿ

Update: 2017-11-19 04:48 GMT

ಇಂದಿರಾ ಗಾಂಧಿಯವರನ್ನು ಹಲವಾರು ಕಾರಣಗಳಿಗಾಗಿ ಜನತೆ ಇಂದಿಗೂ ನೆನೆಯುತ್ತಾರೆ. ವಿಶೇಷವಾಗಿ 1972ರ ಅವಧಿಯಲ್ಲಿ ಪಾಕಿಸ್ತಾನದ ವಿರುದ್ಧ ಅವರು ತೆಗೆದುಕೊಂಡ ಯುದ್ಧದ ನಿರ್ಧಾರ, ಅದರ ಪರಿಣಾಮ ಭಾರತಕ್ಕೆ ಸಿಕ್ಕ ಜಯ, ಬಾಂಗ್ಲಾದೇಶದ ರಚನೆಗೆ ಕಾರಣವಾಯಿತು. ಯುದ್ಧದ ಸಂದರ್ಭ ಇವರು ತೋರಿದ ಧೈರ್ಯ ಇವರನ್ನು ಭಾರತದ ಮನೆ ಮಾತಾಗಿಸಿತು. ಅಲ್ಲದೆ ಬ್ಯಾಂಕುಗಳ ರಾಷ್ಟ್ರೀಕರಣ ಮಾಡುವ ಮೂಲಕ ದೇಶದ ಆರ್ಥಿಕ ಬೆಳವಣಿಗೆಗೆ ಅಡಿಪಾಯವನ್ನು ಹಾಕಿ, ಜನಸಾಮಾನ್ಯರು ಬ್ಯಾಂಕುಗಳಿಂದ ಸಾಲ ಪಡೆದುಕೊಳ್ಳಲು ವ್ಯವಸ್ಥೆ ಮಾಡಿದವರು ಇಂದಿರಾ ಗಾಂಧಿ. ಉಳುವವನಿಗೆ ಭೂಮಿ ಕಾನೂನನ್ನು ಜಾರಿಗೊಳಿಸಿ ದೇಶದ ಕೋಟಿ ಕೋಟಿ ಬಡ ಕೃಷಿಕರಿಗೆ ಭೂಮಿಯನ್ನು ಒದಗಿಸಿಕೊಟ್ಟ ಇಂದಿರಾ ಗಾಂಧಿ, ಬಡವರು ಶ್ರೀಮಂತರಿಂದ ಪಡೆದುಕೊಂಡಿದ್ದ ಸಾಲವನ್ನು ‘ಋಣಮುಕ್ತ ಯೋಜನೆ’ಯಡಿ ರದ್ದು ಪಡಿಸಿ ಬಡವರ ಪರವಾಗಿ ನಿಂತವರು.

ವಿಶೇಷವಾಗಿ ಬಡ ಜನರ, ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಪ್ರಗತಿಗೆ ಒತ್ತು ನೀಡಬಲ್ಲ ಮತ್ತು ಅವರ ಬದುಕನ್ನು ಬದಲಾಯಿಸಬಲ್ಲ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ಬಡತನವನ್ನು ಹೋಗಲಾಡಿಸಲು ದಿಟ್ಟ ಕ್ರಮವನ್ನು ಕೈಗೊಂಡವರು.

1974ರಲ್ಲಿ ಪೋಕ್ರಾನ್‌ನಲ್ಲಿ ಅಣು ಪರೀಕ್ಷೆಯನ್ನು ಮಾಡುವುದರ ಮೂಲಕ ಭಾರತ ತನ್ನ ದೇಶದ ರಕ್ಷಣೆಗಾಗಿ ಎಂತಹ ನಿರ್ಧಾರಕ್ಕೂ ಬದ್ಧ ಎಂದು ಶತ್ರು ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದವರು ಇಂದಿರಾ ಗಾಂಧಿ. ಅಲ್ಲದೆ ದೇಶ ಬಾಹ್ಯಾಕಾಶ ಕ್ಷೇತ್ರದಲ್ಲಿ ಹಿಂದುಳಿಯದೆ ಮುಂದುವರಿದ ರಾಷ್ಟ್ರಗಳಿಗೆ ಸರಿಸಮಾನವಾಗಿ ನಿಲ್ಲಬೇಕೆಂಬ ಉದ್ದೇಶದಿಂದ ಇಸ್ರೋ ಸಂಸ್ಥೆಯ ಸ್ಥಾಪನೆಗೆ ಚಾಲನೆ ನೀಡಿದವರು ಅವರು.

1981-82ರ ಅವಧಿಯಲ್ಲಿ ಪಂಜಾಬ್‌ನಲ್ಲಿ ಬ್ಲೂ ಸ್ಟಾರ್ ಆಪರೇಶನ್ ನಡೆಸಿ ಖಾಲಿಸ್ತಾನ ಚಳವಳಿಯನ್ನು ನಿರ್ನಾಮ ಮಾಡಿ ಅದಕ್ಕೆ ಪ್ರತಿಯಾಗಿ ತಮ್ಮ ಪ್ರಾಣವನ್ನೇ ಕಳೆದುಕೊಂಡವರು.

ವಿಶ್ವದಲ್ಲಿ ಭಾರತ ಪ್ರಮುಖ ರಾಷ್ಟ್ರವಾಗಿ ನಿಲ್ಲಲು ಬೇಕಾದಂತಹ ವಿದೇಶಾಂಗ ನೀತಿ ರಾಜತಾಂತ್ರಿಕ ನಿಲುವುಗಳನ್ನು ತೆಗೆದುಕೊಂಡು ಬಲಿಷ್ಠ ರಾಷ್ಟ್ರಗಳ ದೃಷ್ಟಿಯಲ್ಲಿ ಭಾರತ ಯಾರಿಗೇನೂ ಕಡಿಮೆಯಿಲ್ಲ ಎನ್ನುವಂತೆ ದೇಶದ ಕೀರ್ತಿ ಪತಾಕೆಯನ್ನು ಹೆಚ್ಚಿಸುತ್ತಾ ವಿಶ್ವ ಮಟ್ಟದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದಂತಹ ಉಕ್ಕಿನಂತಹ ಮಹಿಳೆ.

1966ರಿಂದ 1977ರ ವರೆಗೆ 1980-ರಿಂದ 1984ರ ತನಕ ಈ ದೇಶದ ಪ್ರಧಾನಿಯಾಗಿ ಆಡಳಿತ ನಡೆಸಿದ ಇವರು ದಿಟ್ಟತನದ ರಾಜಕೀಯಕ್ಕೆ ಮತ್ತೊಂದು ಹೆಸರು.

ಇಂದಿರಾ ಗಾಂಧಿಯವರು ಈ ದೇಶ ಕಂಡ ಮಹಾನ್ ನಾಯಕಿ. ಅವರ ಸಾಧನೆ ಮತ್ತು ವ್ಯಕ್ತಿತ್ವವನ್ನು ಅನೇಕ ಚರಿತ್ರೆಕಾರರು ಕೆಟ್ಟ ಮನಸ್ಸಿನಿಂದ ಬಿಂಬಿಸಿದರೂ ಜನ ಸಾಮಾನ್ಯರ ಹೃದಯದಲ್ಲಿ ಇವರ ಸ್ಥಾನ ಇನ್ನೂ ಕಿಂಚಿತ್ತೂ ಕಡಿಮೆಯಾಗಿಲ್ಲ.

Writer - ಕೆ.ಎಸ್.ನಾಗರಾಜ್

contributor

Editor - ಕೆ.ಎಸ್.ನಾಗರಾಜ್

contributor

Similar News