ಬೆಂಬಲ ಬೆಲೆ ನಿಗದಿಗೆ ಕೇಂದ್ರ ಅಸಹಕಾರ: ಸಿದ್ದರಾಮಯ್ಯ

Update: 2017-11-19 15:07 GMT

ಬೆಂಗಳೂರು, ನ.19: ಧಾನ್ಯಗಳಿಗೆ ಬೆಂಬಲ ಬೆಲೆ ನಿಗದಿ ಮಾಡುವಂತೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದ್ದರೂ, ಈ ವಿಚಾರದಲ್ಲಿ ಅಸಹಕಾರ ತೋರಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ರವಿವಾರ ದೇವನಹಳ್ಳಿ ರಸ್ತೆಯ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ(ಜಿಕೆವಿಕೆ) ಆಯೋಜಿಸಿದ್ದ ಕೃಷಿಮೇಳ-2017 ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೆಕ್ಕೆ ಜೋಳ ಮತ್ತಿತರ ಧಾನ್ಯಗಳಿಗೆ ಬೆಂಬಲ ಬೆಲೆ ನಿಗದಿ ಮಾಡುವಂತೆ ಕೋರಿ ಕೃಷಿ ಸಚಿವ ಕೃಷ್ಣ ಬೈರೇಗೌಡ ಹಾಗೂ ಆಹಾರ ಸಚಿವ ಖಾದರ್ ಅವರು ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ ಎಂದು ಹೇಳಿದರು.

ಮೈಸೂರು,ಮಂಡ್ಯ,ಹಾಸನ, ತುಮಕೂರು,ಕೋಲಾರ, ಚಿಕ್ಕಬಳ್ಳಾಪುರದಲ್ಲಿ ರಾಗಿಯೇ ಬೆಳೆದಿರಲಿಲ್ಲ. ಉತ್ತಮ ಮಳೆಯಾಗಿದ್ದರಿಂದ ಬೆಳೆ ಉತ್ತಮವಾಗಿ ಬೆಳೆದಿದೆ.ಬರಗಾಲ ಕಾರಣ ಕಳೆದ ವರ್ಷ ಕೃಷಿ ಮೇಳ ಮಾಡಲಿಲ್ಲ ಎಂದ ಅವರು, ಪ್ರಸ್ತುತ ಸಾಲಿನ ಮಳೆಯಿಂದ ರೈತ ಮುಖದಲ್ಲಿ ನಗು ಬಂದಿದೆ ಎಂದು ಹೇಳಿದರು.

ರಾಜ್ಯದಲ್ಲಿ ನಿತ್ಯ 72 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ಹಾಲಿಗಾಗಿ 1,200 ಕೋಟಿ ರೂ. ಸಬ್ಸಿಡಿ ಸಿಗುತ್ತಿದೆ ರೈತರಿಗೆ. 4 ಕೋಟಿಗೂ ಅಧಿಕ ಜನರಿಗೆ ಅನ್ನ ಭಾಗ್ಯ ಯೋಜನೆಯಡಿ ಅಕ್ಕಿ ನೀಡಲಾಗುತ್ತಿದೆ. ನಮ್ಮ ಸರಕಾರ ಬಂದ ಮೇಲೆ ಕೀಟನಾಶಕ, ಗೊಬ್ಬರ ಸಿಕ್ಕಿಲ್ಲ ಅಂತ ಹೋರಾಟವಾದ ನಿದರ್ಶನವೇ ಇಲ್ಲ. ರೈತರಿಗೆ ಯಾವುದೇ ಕೊರತೆ ಆಗದಂತೆ ನಾವು ನೋಡಿಕೊಂಡಿದ್ದೇವೆ ಎಂದರು.

ನಮ್ಮದು ಸಹ ರೈತ ಕುಟುಂಬ. ಮೊದಲು ರಾಗಿ, ಜೋಳ ಬೆಳೆಯುತ್ತಿದ್ದೆವು. ಜಂಟಿ ಕುಟುಂಬ ವಿಭಜನೆಯಿಂದ ಕೃಷಿ ಆದಾಯ, ಹಿಡುವಳಿ ಕಡಿಮೆ ಆಗಿದೆ. ಎಲ್ಲೆಡೆಯೂ ಪ್ರತಿ ವರ್ಷ ಹಿಡುವಳಿ ಗಾತ್ರ ಕಡಿಮೆ ಆಗುತ್ತಿದೆ. ನಾನು ಚಿಕ್ಕ ಹುಡುಗನಾಗಿದ್ದಾಗ ಕಡಿಮೆ ಎಂದರೆ 10 ಎಕರೆ ಜಮೀನು ಒಬ್ಬರಿಗಿತ್ತು. ಈಗ ಅರ್ಧ, ಮುಕ್ಕಾಲು, ಒಂದು ಎಕರೆ ಜಾಗ ಆಗಿ ಹಂಚಿಕೆಯಾಗಿದೆ.

ಈ ಭೂಮಿಯಲ್ಲಿ ಸಾಲ ಮಾಡಿ ಬೆಳೆ ಬೆಳೆದರೂ ಆದಾಯ ಸಿಗೋದು ಕಷ್ಟ. ಸಣ್ಣ ರೈತರು ಲಾಭ ಗಳಿಸಲು ಏನು ಮಾಡಬೇಕು ಎಂಬ ಬಗ್ಗೆ ಸಂಶೋಧನೆ ಆಗಬೇಕು. ಯಾವುದೋ ಒಂದು ಬೆಳೆಗೆ ಹೆಚ್ಚು ಬೆಲೆ ದೊರೆತಾಗ ಎಲ್ಲರೂ ಅದೇ ಬೆಳೆ ಬೆಳೆಯೋದು ಸರಿಯೇ ಎಂದ ಅವರು, ಉತ್ಪಾದನೆ ಬೇಡಿಕೆಗಿಂತ ಹೆಚ್ಚಾದಾಗ ಬೆಲೆ ಇಳಿಯುತ್ತದೆ. ಈ ಬಗ್ಗೆ ಗಮನ ಹರಿಸಿ ಎಂದು ಸಲಹೆ ನೀಡಿದರು.

 ಈ ಮೊದಲು ತಮಗೆ ಅಗತ್ಯವಾದ ಗೊಬ್ಬರವನ್ನು ರೈತರೇ ತಯಾರು ಮಾಡಿಕೊಳ್ಳುತ್ತಿದ್ದರು. ಈಗಲೂ ಪ್ರಯತ್ನ ಮಾಡುವುದು ಒಳ್ಳೆಯದು. ರಾಜ್ಯ ಸರಕಾರ ಸೂಕ್ಷ್ಮ ನೀರಾವರಿ ಕಡೆ ಗಮನ ಹರಿಸುತ್ತಿದೆ. ನೀರು ನಿರ್ವಹಣೆ ಬಗ್ಗೆ ರೈತರು ಸಹ ಕಾಳಜಿ ವಹಿಸಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದರು.

ಕೃಷಿ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಮುಂದಿನ ದಿನಗಳಲ್ಲಿ ಶೇಂಗಾ ಬೆಳೆಗೆ ಬೆಂಬಲ ಬೆಲೆ ನೀಡಿ ಖರೀದಿ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಪ್ರಶಸ್ತಿ ಪ್ರದಾನ: ಪ್ರಗತಿಪರ ರೈತ ಓಂಕಾರಮೂರ್ತಿ ಅವರಿಗೆ ಕ್ಯಾನ್ ಬ್ಯಾಂಕ್ ಅತ್ಯುತ್ತಮ ರೈತ ಮತ್ತು ಶಾರದಮ್ಮ ಎಂಬುವರಿಗೆ ಅತ್ಯುತ್ತಮ ರೈತ ಮಹಿಳೆ ಪ್ರಶಸ್ತಿ ಪ್ರದಾನ. ಡಾ.ಆರ್. ದ್ವಾರಕೀನಾಥ್ ಅತ್ಯುತ್ತಮ ರೈತ ಪ್ರಶಸ್ತಿ ಮಂಜುನಾಥ್ ಅವರಿಗೆ, ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿ ಡಾ.ಬಿ.ಹನುಮಂತೇಗೌಡ, ಡಾ.ಎಂ.ಎಚ್.ಮರಿಗೌಡ ಪ್ರಶಸ್ತಿ ಡಾ.ಎ.ಟಿ.ಸದಾಶಿವ ಎಂಬುವರಿಗೆ ಪ್ರದಾನಿಸಲಾಯಿತು.

ಕಾರ್ಯಕ್ರಮದಲ್ಲಿ ಗಾಂಧಿ ಕೃಷಿ ವಿಶ್ವ ವಿದ್ಯಾನಿಲಯದ ಕುಲಪತಿ ಡಾ.ಎಚ್.ಶಿವಣ್ಣ, ಸಂಶೋಧನಾ ನಿರ್ದೇಶಕ ವೈ.ಜಿ.ಷಡಕ್ಷರಿ,ವಿಸ್ತರಣಾ ನಿರ್ದೇಶಕ ಡಾ.ನಟರಾಜು, ಧಾರವಾಡ ಕೃಷಿ ವಿವಿಯ ಕುಲಪತಿ ಡಾ.ಬಿ.ಪಿ.ಬೀರದಾರ್ ಸೇರಿ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News