24 ಗಂಟೆ ನಿರಂತರ ವಿದ್ಯುತ್ ನೀಡುವ ಯೋಜನೆಗೆ 140 ಕೋಟಿ ಅನುದಾನ ಮಂಜೂರು: ವೈ.ಎಸ್.ವಿ ದತ್ತ
ಕಡೂರು, ನ.19: ಕೇಂದ್ರ ಸರ್ಕಾರದ ದೀನ್ ದಯಾಳ್ ಗ್ರಾಮ ಜ್ಯೋತಿ ವಿದ್ಯುತ್ ಯೋಜೆ ಅಡಿಯಲ್ಲಿ ಕಡೂರು ವಿಧಾನಸಭಾಕ್ಷೇತ್ರದ 200 ಗ್ರಾಮಗಳಿಗೆ 24 ಗಂಟೆ ನಿರಂತರ ವಿದ್ಯುತ್ ನೀಡುವ ಯೋಜನೆಗೆ 140 ಕೋಟಿ ಅನುದಾನ ಮಂಜೂರಾಗಿದೆ ಎಂದು ಶಾಸಕ ವೈ.ಎಸ್.ವಿ ದತ್ತ ತಿಳಿಸಿದರು.
ಅವರು ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನನ್ನ ಪರಿಶ್ರಮ ಹಾಗು ದೇವೇಗೌಡರ ಪ್ರಯತ್ನದಿಂದ ರಾಜ್ಯದ ಇತರೆ ಯಾವುದೇ ಕ್ಷೇತ್ರಕ್ಕಿಂತ ಅತಿ ಹೆಚ್ಚಿನ ಅನುದಾನ ನೀಡಿದ್ದಾರೆ. ಇದಕ್ಕಾಗಿ ತಾವು ಕೇಂದ್ರದ ಬಿಜೆಪಿ ಸರಕಾರಕ್ಕೆ ಕೃತಜ್ಞತೆ ಅರ್ಪಿಸುತ್ತೇನೆ. ಈ ಯೋಜನೆಯ ಸಂಪೂರ್ಣ ಪ್ರಯೋಜನವು ಕ್ಷೇತ್ರದ ಸುಮಾರು 20ಕ್ಕೂ ಹೆಚ್ಚಿನ ಗ್ರಾಮೀಣ ಹಳ್ಳಿಗಳಿಗೆ ದೊರಕಲಿದ್ದು.ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಶ್ರೀಘ್ರದಲ್ಲೇ ಕಾಮಾರಿಗೆ ಚಾಲನೆ ನೀಡಲಿದ್ದೇನೆ ಎಂದರು.
ಕೇಂದ್ರದ ಮತ್ತೊಂದು ಕುಟೀರ ಗ್ರಾಮ ಜ್ಯೋತಿ ಯೋಜನೆಯಲ್ಲಿ ಕಡೂರು ಕ್ಷೇತ್ರಕ್ಕೆ ರೂ12.55 ಕೋಟಿ ಹಣ ಕಡೂರು ಕ್ಷೇತ್ರಕ್ಕೆ ಬಂದಿದ್ದು ಇದರಲ್ಲಿ ಬಿಪಿಎಲ್ ಫಲಾನುಭವಿಗಳಿಗೆ ಉಚಿತ ವಿದ್ಯುದ್ದೀಕರಣ ಮಾಡಲಾಗುವುದು. ಈಗಾಗಲೇ ಕ್ಷೇತ್ರದ 3587 ಫಲಾನುಭವಿಗಳನ್ನು ಗುರುತಿಸಿದ್ದು ಬೆಳಗಾವಿಯ ಅವೇಶನ ಮುಗಿದ ಬಳಿಕ ಫಲಾನುಭವಿಗಳ ಮನೆಗೆ ತೆರಳಿ ಚಾಲನೆ ನೀಡಲಾಗುವುದು ಎಂದು ನುಡಿದರು.
ಕ್ಷೇತ್ರದಲ್ಲಿ ವಿದ್ಯುತ್ ಮಾದರಿ ಗ್ರಾಮ ಯೋಜನೆಗೆ 6 ಗ್ರಾಮಗಳನ್ನು ಗುರುತಿಸಲಾಗಿದ್ದು ಸುಮಾರು ರೂ 2.40 ಕೋಟಿ ಹಣ ಬಿಡುಗಡೆಯಾಗಿದೆ. ಒಟ್ಟಾರೆ ಕ್ಷೇತ್ರಕ್ಕೆ ಗ್ರಾಮೀಣ ರಸ್ತೆಗಳು, ಶಾಶ್ವತ ನೀರಾವರಿ ಯೋಜನೆಯ ಜೊತೆಗೆ ಗ್ರಾಮೀಣ ವಿದ್ಯುದ್ದೀಕರಣ ಸಹ ನಡೆಯುತ್ತಿರುವುದು ಕ್ಷೇತ್ರದ ಜನತೆಗೆ ತೃಪ್ತಿ ತಂದಿದೆ ಎಂಬ ಭಾವನೆ ನನ್ನದು ಎಂದರು.
ರಾಜ್ಯ ಸರ್ಕಾರವು ಹೆಚ್ಚುವರಿ ಟಿ.ಸಿ ಅಳವಡಿಕೆಗೆ ರೂ 6.72 ಕೋಟಿ. ಸೌರಶಕ್ತಿ ಬಳಕೆಗೆ ಪ್ರಾಯೋಗಿಕವಾಗಿ ರೂ 1.82 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ . ಇದನ್ನು ಪ್ರಾಯೋಗಿಕವಾಗಿ ಕಡೂರು ತಾಪಂ ಮತ್ತು ಪೊಲೀಸ್ ಠಾಣೆಗಳಲ್ಲಿ ಸೌರಶಕ್ತಿ ವಿದ್ಯುತ್ ಘಟಕ ಅಳವಡಿಸಲು ಸ್ಥಳ ಗುರುತಿಸಲಾಗಿದೆ ಎಂದರು.
ಮುಖಂಡರಾದ ಭಂಡಾರಿ ಶ್ರೀನಿವಾಸ್,ಕೆ ಎಂ. ಮಹೇಶ್ವರಪ್ಪ, ಶೂದ್ರ ಶ್ರೀನಿವಾಸ್, ಜಿಗಣೇಹಳ್ಳಿ ನೀಲಕಂಠಪ್ಪ, ಸೀಗೇಹಡ್ಲು ಹರೀಶ್, ವಿನಯ್ ದಂಡಾವತಿ ಮತ್ತಿತರರಿದ್ದರು.