ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ 35 ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್‍ಗೆ ಶಿಪಾರಸ್ಸು: ಲಕ್ಷ್ಮೀ ಹೆಬ್ಬಾಳ್ಕರ್

Update: 2017-11-19 13:33 GMT

ಕಡೂರು, ನ.19:ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ರಾಜ್ಯದ 35 ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್ ನೀಡುವಂತೆ ಶಿಪಾರಸ್ಸು ಮಾಡಲಾಗಿದೆ ಎಂದು ಮಹಿಳಾ ಕಾಂಗ್ರೆಸ್ ಘಟಕದ ರಾಜ್ಯಾಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಅವರು ಕಡೂರು ತಾಲೂಕಿನ ಕಲ್ಕೆರೆ ಗೊಲ್ಲರಹಟ್ಟಿಯಲ್ಲಿ ಗ್ರಾಮ ವಾಸ್ತವ್ಯಕ್ಕೆ ತೆರಳುವ ಮುನ್ನ ಪಟ್ಟಣದ ದಿ. ಮಾಜಿ ಶಾಸಕ ಕೆ.ಆರ್.ಹೊನ್ನಪ್ಪನವರ ನಿವಾಸದಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

ದೇಶಾದ್ಯಂತ ಶ್ರೀಮತಿ ಇಂದಿರಾ ಗಾಂಧಿಯವರ 100ನೇ ವರ್ಷದ ಜನ್ಮ ಶತಮಾನೋತ್ಸವದ ಹಿನ್ನೆಲೆಯಲ್ಲಿ ಕರ್ನಾಟಕ ಮಹಿಳಾ ಕಾಂಗ್ರೆಸ್ ಘಟಕದಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ದೌರ್ಜನ್ಯಕ್ಕೆ ಒಳಗಾದ ಹಾಗು ಶೋಷಿತ ಸಮುದಾಯಗಳ ಮಹಿಳೆಯರ ಮನೆಗಳಲ್ಲಿ ಏಕ ಕಾಲದಲ್ಲಿ ಗ್ರಾಮ ವಾಸ್ತವ್ಯ ಮಾಡಲಾಗುತ್ತಿದೆ. ಚಿಕ್ಕಮಗಳೂರು ಇಂದಿರಾಜಿಗೆ ರಾಜಕೀಯ ಪುನರ್ಜನ್ಮ ನೀಡಿದ ಕ್ಷೇತ್ರವಾಗಿರುವ ಹಿನ್ನೆಲೆಯಲ್ಲಿ ತಾವು ಕಡೂರು ತಾಲೂಕಿನ ಕಲ್ಕೆರೆ ಗೊಲ್ಲರಹಟ್ಟಿಯಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದೇನೆ. ಆ ವಾಸ್ತವ್ಯದ ಮೂಲಕ ಹಿಂದುಳಿದ ಗೊಲ್ಲ ಸಮುದಾಯದಲ್ಲಿರುವ ಮೌಢ್ಯಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದರು.

ಪ್ರಥಮ ಭಾರಿಗೆ ಮಹಿಳೆಯರಿಗೆ ಕಾಂಗ್ರೆಸ್ ಸರ್ಕಾರವು ಶೇ.50ರಷ್ಟು ಮೀಸಲಾತಿ ಜಾರಿಗೆ ತಂದಿತು. ನಮ್ಮ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಹಿಳೆಯಕರ ಸಬಲೀಕರಣಕ್ಕೆ ಹೆಚ್ಚಿ ಪ್ರೋತ್ಸಾಹ ನೀಡಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ರಾಹುಲ್ ಗಾಂಧಿಯವರಿಗೆ ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಸುಮಾರು 35 ಕ್ಷೇತ್ರಗಳಲ್ಲಿ ಪಕ್ಷದ ಮಹಿಳೆಯರಿಗೆ ಟಿಕೆಟ್ ನೀಡಬೇಕು ಎಂದು ಕೋರಲಾಗಿದೆ ಎಂದು ನುಡಿದರು.

ಇದರಲ್ಲಿ ಕಡೂರು ಕ್ಷೇತ್ರ ಸೇರಿದಂತೆ ಜಿಲ್ಲೆಯಲ್ಲಿ ಸುಮಾರು 4 ಮಹಿಳೆಯರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.  ನಾನು ಕೂಡ ಹುಬ್ಬಳ್ಳಿಯಿಂದ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದೇನೆ. ಪುರುಷರಿಗೆ ಸಮಾನವಾಗಿ ಮಹಿಳೆಯರು ಕೂಡ ರಾಜಕೀಯ ಕ್ಷೇತ್ರದಲ್ಲೂ ಸಾಧನೆ  ಮಾಡಿದ್ದು, ಬರಲಿರುವ ಚುನಾವಣೆಯಲ್ಲೂ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಗೆಲುವು ಸಾಧಿಸಲಿದ್ದಾರೆ. ನುಡಿದಂತೆ ನಡೆದಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಹಿಳೆಯರು ಸ್ವಾವಲಂಬಿಗಳಾಬೇಕು ಎಂಬ ನಿಟ್ಟಿಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ರಾಜ್ಯ ಮಹಿಳಾ ಕಾಂಗ್ರೆಸ್‍ನಿಂದ ಪ್ರಚಾರದ ಕಾರ್ಯ ಮಾಡಿ ಜನರಿಗೆ ಸರ್ಕಾರದ ಸಾಧನೆಗಳನ್ನು ತಿಳಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್‍ನ ಅಧ್ಯಕ್ಷೆ ವನಮಾಲ ದೇವರಾಜ್, ಮಾಜಿ ಶಾಸಕರಾದ ಕೆ.ಬಿ.ಮಲ್ಲಿಕಾರ್ಜುನ್, ಗಾಯತ್ರಿ ಶಾಂತೇಗೌಡ, ಮಾಜಿ ಜಿಪಂ ಅಧ್ಯಕ್ಷ ಕೆ.ಎಂ.ಕೆಂಪರಾಜು, ಜಿಪಂ ಸದಸ್ಯರಾದ ಮಹೇಶ್ ಒಡೆಯರ್, ಲಕ್ಕಮ್ಮ ಸಿದ್ದಪ್ಪ, ಲೋಲಾಕ್ಷಿಬಾಯಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಹೆಚ್.ಚಂದ್ರಪ್ಪ, ಮುಖಂಡ ಕೆ.ಎಸ್.ಆನಂದ್, ಫಿಕಾರ್ಡ್ ಬ್ಯಾಂಕ್ ನಿರ್ದೇಶಕ ಕೆ.ಹೆಚ್.ರಂಗನಾಥ್, ಮುಖಂಡರಾದ ಆರ್.ಎಂ.ಬಸವರಾಜ್, ಕೆ.ಹೆಚ್.ರವಿ, ಅಜಯ್ ವಡೆಯರ್, ಬಾಸೂರು ಚಂದ್ರಮೌಳಿ, ಕೆ.ಜಿ.ಲೋಕೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News