ಯಡಿಯೂರಪ್ಪ ಜೊತೆ ಮಾತುಕತೆ ನಡೆಸುವಂತೆ ಬೆಂಬಲಿಗರಿಗೆ ಈಶ್ವರಪ್ಪ ಸೂಚನೆ

Update: 2017-11-19 13:59 GMT

ಶಿವಮೊಗ್ಗ, ನ. 19: ವಿಧಾನಪರಿಷತ್ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ವಿಧಾನಪರಿಷತ್ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಪುತ್ರ ಡಿ.ಎಸ್.ಅರುಣ್‍ಗೆ ಟಿಕೆಟ್ ನೀಡುವಂತೆ ಆಗ್ರಹಿಸಿ ಭಾನುವಾರ ಡಿ.ಎಸ್.ಅರುಣ್ ಬೆಂಬಲಿಗರು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪರನ್ನು ಭೇಟಿಯಾಗಿ ಮನವಿ ಅರ್ಪಿಸಿದ್ದಾರೆ.

ನಗರದ ಮಲ್ಲೇಶ್ವರಂ ಬಡಾವಣೆಯಲ್ಲಿರುವ ನಿವಾಸದಲ್ಲಿ ಕೆ.ಎಸ್.ಈಶ್ವರಪ್ಪರನ್ನು ಬೆಂಬಲಿಗರು ಭೇಟಿಯಾಗಿ ಚರ್ಚೆ ನಡೆಸಿದರು. 'ಸರಳ - ಸಜ್ಜನ ವ್ಯಕ್ತಿತ್ವದ ಡಿ.ಎಸ್.ಅರುಣ್‍ಗೆ ಟಿಕೆಟ್ ಸಿಗುವ ವಿಶ್ವಾಸವಿತ್ತು. ಆದರೆ ಅವರಿಗೆ ಟಿಕೆಟ್ ನಿರಾಕರಣೆ ಮಾಡಿರುವುದು ತೀವ್ರ ನೋವುಂಟು ಮಾಡಿದೆ. ಡಿ.ಎಸ್.ಅರುಣ್‍ಗೆ ಟಿಕೆಟ್ ನೀಡದಿದ್ದರೆ ನಾವುಗಳ್ಯಾರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ' ಎಂದು ಬೆಂಬಲಿಗರು ತಿಳಿಸಿದ್ದಾರೆ ಎನ್ನಲಾಗಿದೆ. 

ಅಹವಾಲು ಆಲಿಸಿದ ನಂತರ ಕೆ.ಎಸ್.ಈಶ್ವರಪ್ಪ ಮಾತನಾಡಿ, 'ಈ ನಿಟ್ಟಿನಲ್ಲಿ ತಾವು ಏನೂ ಮಾಡಲಾಗದ ಸ್ಥಿತಿಯಲ್ಲಿದ್ದೆನೆ. ಪಕ್ಷದ ಕೋರ್ ಕಮಿಟಿಯಲ್ಲಿ ಈ ಬಗ್ಗೆ ನಿರ್ಧಾರವಾಗಿದೆ. ಅದರಂತೆ ಪಕ್ಷದ ಕೇಂದ್ರ ಚುನಾವಣಾ ಸಮಿತಿಯು ಅಭ್ಯರ್ಥಿ ಘೋಷಣೆ ಮಾಡಿದೆ. ಈ ಹಂತದಲ್ಲಿ ಅಭ್ಯರ್ಥಿ ಬದಲಾವಣೆ ಅಸಾಧ್ಯವಾಗಿದೆ' ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. 

'ಈ ಕುರಿತಂತೆ ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪರನ್ನು ಭೇಟಿಯಾಗಿ. ಅವರೇ ಏನಾದರೂ ನಿರ್ಧಾರ ಕೈಗೊಳ್ಳಬಹುದು. ತಮ್ಮ ಹಂತದಲ್ಲಿ ಏನೂ ಮಾಡಲಾಗುವುದಿಲ್ಲ. ಈ ವಿಚಾರದಲ್ಲಿ ಪಕ್ಷದ ಇತರೆ ಮುಖಂಡರನ್ನು ಭೇಟಿಯಾದರೂ ಯಾವುದೇ ಫಲಪ್ರದವಾಗುವುದಿಲ್ಲ' ಎಂದು ಬೆಂಬಲಿಗರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. 

ಕೆ.ಎಸ್.ಈಶ್ವರಪ್ಪರ ಸೂಚನೆಯ ಹಿನ್ನೆಲೆಯಲ್ಲಿ ಡಿ.ಎಸ್.ಅರುಣ್ ಬೆಂಬಲಿಗರು ಬಿ.ಎಸ್.ಯಡಿಯೂರಪ್ಪರನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ. ಭೇಟಿಯ ವೇಳೆ ಮುಖಂಡರಾದ ಮುರುಳಿ, ಅರವಿಂದ್, ಅಶ್ವಥ್, ಸುರೇಶ್, ಅಶ್ವಥ್ ನಾರಾಯಣ್, ಶಶಿಧರ್ ಸೇರಿದಂತೆ ಸುಮಾರು 70 ಕ್ಕೂ ಅಧಿಕ ಬೆಂಬಲಿಗರಿದ್ದರು

ಪ್ರತಿಭಟಿಸಿದ್ದರು: ನೈರುತ್ಯ ಪದವೀಧರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಆಯನೂರು ಮಂಜುನಾಥ್‍ಗೆ ಟಿಕೆಟ್ ನೀಡಿದ್ದರಿಂದ ಬೇಸರಗೊಂಡಿದ್ದ ಡಿ.ಎಸ್.ಅರುಣ್ ಬೆಂಬಲಿಗರು ಶುಕ್ರವಾರ ಪ್ರತಿಭಟನೆ ನಡೆಸಿದ್ದರು. ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾವಣೆಗೆ ತಾವು ಸಲ್ಲಿಸಿರುವ ಅರ್ಜಿ ಮಾನ್ಯ ಮಾಡದಂತೆ ಸುಮಾರು 50 ಜನರ ಸಹಿಯನ್ನೊಳಗೊಂಡ ಮನವಿ ಪತ್ರ ಅರ್ಪಿಸಿದ್ದರು. 

"ಸ್ವಜನ ಪಕ್ಷಪಾತ, ಜಾತಿ ರಾಜಕಾರಣದ ಕಾರಣದಿಂದಲೇ ಡಿ.ಎಸ್.ಅರುಣ್‍ಗೆ ಬಿಜೆಪಿ ಪಕ್ಷ ಟಿಕೆಟ್ ನಿರಾಕರಿಸಿದೆ. ಬಿಜೆಪಿ ಪಕ್ಷದ ಈ ವರ್ತನೆ ಬೇಸರ ತರಿಸಿದೆ. ನಾವುಗಳೆಲ್ಲರೂ ಮೊದಲಿನಿಂದ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿಕೊಂಡು ಬಂದಿದ್ದೆವೆ. ಆದರೆ ಡಿ.ಎಸ್.ಅರುಣ್‍ಗೆ ಟಿಕೆಟ್ ನಿರಾಕರಣೆ ಮಾಡಿದ್ದರಿಂದ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಮತದಾನ ಮಾಡುವುದಿಲ್ಲ. ಈ ಕಾರಣದಿಂದಲೇ ಮತದಾರರ ಪಟ್ಟಿಯಲ್ಲಿ ನಮ್ಮ ಹೆಸರು ಸೇರ್ಪಡೆ ಮಾಡದಂತೆ ಜಿಲ್ಲಾಡಳಿತಕ್ಕೆ ಮನವಿ ಅರ್ಪಿಸಿದ್ದೆವೆ" ಎಂದು ಬೆಂಬಲಿಗರು ಸುದ್ದಿಗಾರರಿಗೆ ತಿಳಿಸಿದ್ದರು. 

'ಅಸಹಾಯಕತೆ ವ್ಯಕ್ತಪಡಿಸಿದರು' : ಬೆಂಬಲಿಗ ಮುರುಳಿ
 'ಡಿ.ಎಸ್.ಅರುಣ್‍ಗೆ ಬಿಜೆಪಿ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿ ಕೆ.ಎಸ್.ಈಶ್ವರಪ್ಪರವರನ್ನು ಭೇಟಿಯಾಗಿ ಒತ್ತಾಯಿಸಲಾಯಿತು. ಆದರೆ ಅವರು ಅಸಹಾಯಕತೆ ವ್ಯಕ್ತಪಡಿಸಿದರು. ಬಿ.ಎಸ್.ಯಡಿಯೂರಪ್ಪರೊಂದಿಗೆ ಚರ್ಚೆ ನಡೆಸುವಂತೆ ಸೂಚನೆ ನೀಡಿದ್ದಾರೆ. ಅದರಂತೆ ಬಿ.ಎಸ್.ಯಡಿಯೂರಪ್ಪರನ್ನು ಭೇಟಿಯಾಗಿ ಡಿ.ಎಸ್.ಅರುಣ್‍ಗೆ ಟಿಕೆಟ್ ನೀಡುವಂತೆ ಒತ್ತಾಯಿಸಲಾಗುವುದು' ಎಂದು ಡಿ.ಎಸ್.ಅರುಣ್ ಬೆಂಬಲಿಗ ಮುರುಳಿ ಎಂಬುವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News