ಆಸ್ಪತ್ರೆಯಲ್ಲಿ ವೈದ್ಯನಂತೆ ನಟಿಸಿ ಮಹಿಳೆಯ ಚಿನ್ನದ ಸರ ಎಗರಿಸಿದ !
ಮೈಸೂರು,ನ.19: ವೈದ್ಯರ ವೇಷತೊಟ್ಟು ಖದೀಮನೋರ್ವ ಮಹಿಳೆಯೊಬ್ಬರ ಚಿನ್ನದ ಸರವನ್ನು ಎಗರಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಖಾಸಗಿ ಆಸ್ಪತ್ರೆಯೊಂದರಲ್ಲಿ ಸ್ಟೆತಸ್ಕೋಪ್ ಹಿಡಿದು ವೈದ್ಯನಂತೆ ಪೋಸ್ ಕೊಡುತ್ತ ಬಂದಿದ್ದ ಖದೀಮನೋರ್ವ ಮಹಿಳೆಯೊಬ್ಬರ 1.50 ಲಕ್ಷ ರೂ. ಮೌಲ್ಯದ ಸರ ಎಗರಿಸಿದ್ದಾನೆ.
ಇಲ್ಲಿನ ಆಸ್ಪತ್ರೆಯೊಂದಕ್ಕೆ ಸೌಮ್ಯ ಎಂಬ ಮಹಿಳೆ ಚಿಕಿತ್ಸೆಗೆಂದು ತೆರಳಿದಿದ್ದರು. ಅಂತೆಯೇ ಸ್ಟೆತಸ್ಕೋಪ್ ಹಿಡಿದು ವೈದ್ಯನಂತೆ ಪೋಸ್ ಕೊಟ್ಟ ಖದೀಮ ತಪಾಸಣೆಗೆಂದು ಸೌಮ್ಯರನ್ನು ಒಳ ಕರೆದಿದ್ದಾನೆ. ಆಗ ತಪಾಸಣೆ ಮಾಡಬೇಕು ಮಾಂಗಲ್ಯ ಸರವನ್ನು ಪಕ್ಕದಲ್ಲಿಟ್ಟು ಒಳಗೆ ಬನ್ನಿ ಎಂದಿದ್ದಾನೆ. ಅದನ್ನು ನಂಬಿದ ಸೌಮ್ಯ ಒಳಗೆ ಹೋಗಿ ಬಂದಾಗ ನಕಲಿ ವೈದ್ಯರ ಕೈಚಳಕ ಗೊತ್ತಾಗಿದೆ.
ನಂತರ ಸರ ಹಾಗೂ ವೈದ್ಯನ ಬಗ್ಗೆ ಆಸ್ಪತ್ರೆ ಸಿಬ್ಬಂದಿ ಬಳಿ ವಿಚಾರಿಸಿದಾಗ ಆತನ ಬಗ್ಗೆ ನಮಗೆ ಗೊತ್ತಿಲ್ಲ. ವೈದ್ಯರು ಆಗಮಿಸದೇ ಇದ್ದ ಸಮಯವನ್ನು ನೋಡಿಕೊಂಡು ಖದೀಮನೋರ್ವ ಈ ಕೃತ್ಯ ಎಸಗಿದ್ದಾನೆ ಎಂದು ಆಸ್ಪತ್ರೆಯವರು ತಿಳಿಸಿದರು. ನಕಲಿ ವೈದ್ಯನಿಂದ ಸೌಮ್ಯ 1.50 ಲಕ್ಷ ರೂ. ಮೌಲ್ಯದ ಮಾಂಗಲ್ಯ ಸರ ಕಳೆದುಕೊಂಡಿದ್ದಾರೆ. ಈ ಸಂಬಂಧ ಕೆ.ಆರ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.