×
Ad

ದಾವಣಗೆರೆ : ಅನಂತ್ ಕುಮಾರ್ ಹೆಗಡೆ,ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Update: 2017-11-19 23:01 IST

ದಾವಣಗೆರೆ,ನ.19: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಮತ್ತು ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಅವರ ವಿರುದ್ಧ ಭಾನುವಾರ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

ಜಯದೇವವೃತ್ತದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ್, ಬಿಜೆಪಿಯವರ ಸಂಸ್ಕೃತಿ ಅವರ ಮಾತುಗಳಲ್ಲಿಯೇ ತಿಳಿಯುತ್ತದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ, ಅನಂತ್ ಕುಮಾರ್ ಹೆಗೆಡೆ, ಶೋಭಾ ಕರಂದ್ಲಾಜೆ ಅವರುಗಳ ಹೇಳಿಕೆಗಳಿಂದ ಅವರ ಸಂಸ್ಕೃತಿ ಏನೆಂದು ತಿಳಿದುಬರುತ್ತದೆ ಎಂದ ಅವರು, ಕಳೆದ ನಾಲ್ಕುವರೆ ವರ್ಷದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಕಷ್ಟು ಅಭಿವೃದ್ದಿ ಕಾರ್ಯ ನಡೆಸಿದ್ದಾರೆ. ಜನರು ಕಾಂಗ್ರೆಸ್ ಪಕ್ಷದ ಅಧಿಕಾರಕ್ಕೆ ಮನ್ನಣೆ ನೀಡಿದ್ದಾರೆ.

ಇದರಿಂದ ಬಿಜೆಪಿಯವರು ಆತಂಕಕ್ಕೊಳಗಾಗಿದ್ದಾರೆ. ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಬಿಜೆಪಿಯವರು ಹತಾಶರಾಗಿದ್ದಾರೆ. ಯುದ್ದಕ್ಕಿಂತ ಮೊದಲೇ ಶಸ್ತ್ರತ್ಯಾಗ ಎಂಬಂತೆ ಜನಾದೇಶ ಕಾಂಗ್ರೆಸ್ ನತ್ತ ಇರುವುದು ತಿಳಿದು ಈ ರೀತಿ ಇಲ್ಲಸಲ್ಲದ ಮಾತುಗಳನ್ನಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.

ರಾಜ್ಯ ಮಾವು ಅಭಿವೃದ್ದಿ ನಿಗಮದ ಉಪಾಧ್ಯಕ್ಷ ಪಿ. ರಾಜಕುಮಾರ್ ಮಾತನಾಡಿ, ಸರ್ಕಾರದ ಅಭಿವೃದ್ದಿ ಕಾರ್ಯಗಳನ್ನು ಜನರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಯುವಕರು ತಿಳಿಸಬೇಕು ಎಂದು ಸಲಹೆ ನೀಡಿದರು. ಹಿರಿಯ ಮುಖಂಡ ಸೈಯದ್ ಸೈಫುಲ್ಲಾ ಮಾತನಾಡಿ, ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈಗೊಂಡಿರುವಷ್ಟು ಜನೋಪಯೋಗಿ ಕೆಲಸಗಳು ದೇಶದ ಯಾವ ಮುಖ್ಯಮಂತ್ರಿಗಳು ಸಹ ಮಾಡಿಲ್ಲ. ಇದನ್ನು ಪ್ರತಿಪಕ್ಷಗಳು ಅರಿತುಕೊಳ್ಳಬೇಕು ಎಂದರು.

ಪ್ರತಿಭಟನೆಯಲ್ಲಿ ಬಾಡದ ಆನಂದ್ ರಾಜ್,  ದಲಿತ ಮುಖಂಡ ಬಿ.ಹೆಚ್. ವೀರಭದ್ರಪ್ಪ, ಮನೋಜ್, ಬೆಳಕೆರೆ ಪ್ರಸನ್ನ, ಹರೀಶ್ ಕೆಂಗಲಹಳ್ಳಿ, ಹಬೀಬ್, ಕೆ.ರೇವಣ್ಣ, ಗಿರೀಶ್, ಡಿ. ಶಿವಕುಮಾರ್, ಅಯಾಜ್, ಉಮಾದೇವಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News