'ಪಕ್ಷದ ತೀರ್ಮಾನ ಪ್ರಶ್ನಿಸಲು ಹೋಗುವುದಿಲ್ಲ' : ಡಿ.ಎಸ್.ಅರುಣ್
ಶಿವಮೊಗ್ಗ, ನ. 19: 'ತಾವು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದಾನೆ. ಪಕ್ಷದ ನಿರ್ಧಾರಕ್ಕೆ ಬದ್ದವಾಗಿದ್ದೇನೆ' ಎಂದು ಡಿ.ಹೆಚ್.ಶಂಕರಮೂರ್ತಿ ಪುತ್ರ ಡಿ.ಎಸ್.ಅರುಣ್ ತಿಳಿಸಿದ್ದಾರೆ.
ರವಿವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. 'ನೈರುತ್ಯ ಪದವೀಧರ ಕ್ಷೇತ್ರಕ್ಕೆ ತಾವು ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದು ನಿಜ. ಆದರೆ ಟಿಕೆಟ್‍ಗಾಗಿ ಯಾವುದೇ ಲಾಬಿ ನಡೆಸಿಲ್ಲ. ಮುಂದೆ ನಡೆಸುವುದೂ ಇಲ್ಲ. ಪಕ್ಷದ ತತ್ವ-ಸಿದ್ದಾಂತಗಳಿಗೆ ಅನುಗುಣವಾಗಿಯೇ ರಾಜಕಾರಣ ನಡೆಸುತ್ತೇನೆ' ಎಂದು ಹೇಳಿದರು.
ಬೆಂಬಲಿಗರು ನಿಮಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿ ನಡೆಸುತ್ತಿರುವ ಪ್ರತಿಭಟನೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ತಮಗೆ ಟಿಕೆಟ್ ಸಿಗದಿರುವುದರಿಂದ ಕೆಲ ಬೆಂಬಲಿಗರಿಗೆ ಬೇಸರವಾಗಿರಬಹುದು. ಆದರೆ ಯಾವುದೇ ಕಾರಣಕ್ಕೂ ಬೆಂಬಲಿಗರು ಪ್ರತಿಭಟನೆಯ ಮಾರ್ಗ ಹಿಡಿಯಬಾರದು. ಪಕ್ಷಕ್ಕೆ ಮುಜುಗರವಾಗದಂತೆ ನಡೆದುಕೊಳ್ಳಬಾರದು ಎಂದು ತಾವು ವಿನಮ್ರಪೂರ್ವಕವಾಗಿ ಮನವಿ ಮಾಡಿಕೊಳ್ಳುತ್ತೆನೆ' ಎಂದು ತಿಳಿಸಿದ್ದಾರೆ.
ನೈರುತ್ಯ ಪದವೀಧರ ಕ್ಷೇತ್ರವು ಬಿಜೆಪಿಯ ಭದ್ರ ಕೋಟೆಯಾಗಿದೆ. ಈ ಕ್ಷೇತ್ರದಲ್ಲಿ ತಮ್ಮ ತಂದೆ ಡಿ.ಹೆಚ್.ಶಂಕರಮೂರ್ತಿಯವರು ಸತತ ಐದು ಬಾರಿ ಆಯ್ಕೆಯಾಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿಯೂ ಈ ಕ್ಷೇತ್ರದಲ್ಲಿ ಬಿಜೆಪಿಯ ಪ್ರಾಬಲ್ಯ ಮುಂದುವರಿಯಬೇಕು. ಪಕ್ಷದ ಅಭ್ಯರ್ಥಿ ಅತ್ಯದಿಕ ಮತಗಳ ಅಂತರದಲ್ಲಿ ಜಯ ಸಾಧಿಸಬೇಕು. ಈ ನಿಟ್ಟಿನಲ್ಲಿ ತಾವು ಕಾರ್ಯನಿರ್ವಹಣೆ ಮಾಡುತ್ತೆನೆ. ಈಗಾಗಲೇ ಸಾವಿರಾರು ಮತದಾರರನ್ನು ಮತದಾರರ ಪಟ್ಟಿಯಲ್ಲಿ ನೊಂದಾವಣೆ ಮಾಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.