ಶಿವಮೊಗ್ಗ: ವಿಷ ಸೇವಿಸಿದ್ದ ಒಂದೇ ಕುಟುಂಬದ ಮೂವರು ಮೃತ್ಯು
ಶಿವಮೊಗ್ಗ, ನ. 20: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಒಂದೇ ಕುಟುಂಬದ ಮೂವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ.
ವಿನಾಯಕ ನಗರದ ನಿವಾಸಿಗಳಾದ ಪ್ರಧಾನಪ್ಪ (50), ಅವರ ಪತ್ನಿ ಗೌರಮ್ಮ (48) ಹಾಗೂ ಪುತ್ರಿ ಸುಮಾ (25) ಮೃತಪಟ್ಟವರೆಂದು ಗುರುತಿಸಲಾಗಿದೆ.
ಕೌಟಂಬಿಕ ಕಲಹದಿಂದ ಬೇಸತ್ತು ಈ ಮೂವರು ನಗರದ ಚಿಕ್ಕಲ್ ಸಮೀಪದ ನಿರ್ಜನ ಪ್ರದೇಶದಲ್ಲಿ ವಿಷ ಸೇವಿಸಿದ್ದರು. ಬಳಿಕ ಸಾರ್ವಜನಿಕರು ಈ ಮೂವರನ್ನು ನಗರದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಇವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎನ್ನಲಾಗಿದ್ದು, ರವಿವಾರ ಪ್ರಧಾನಪ್ಪ ಹಾಗೂ ಗೌರಮ್ಮರವರು ಮೃತಪಟ್ಟಿದ್ದು, ಸೋಮವಾರ ಪುತ್ರಿ ಸುಮಾರವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತವಾಗಿತ್ತು: ದುರಂತದ ಸಂಗತಿಯೆಂದರೇ, ಈ ಮೂವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಯಿಂದ ಆ್ಯಂಬುಲೆನ್ಸ್‍ನಲ್ಲಿ ಖಾಸಗಿ ಆಸ್ಪತ್ರೆಗೆ ಕರೆತರುವ ವೇಳೆ ಜೈಲ್ ಸರ್ಕಲ್‍ನಲ್ಲಿ ಕಾರೊಂದು ಅಡ್ಡ ಬಂದ ಕಾರಣದಿಂದ ಚಾಲನೆಯ ನಿಯಂತ್ರಣ ಕಳೆದು ಕೊಂಡು ಆ್ಯಂಬುಲೆನ್ಸ್ ಪಲ್ಟಿಯಾಗಿ ಬಿದ್ದಿತ್ತು. ಇದರಿಂದ ಮೊದಲೇ ಗಂಭೀರ ಸ್ಥಿತಿಯಲ್ಲಿದ್ದ ದಂಪತಿ ಹಾಗೂ ಪುತ್ರಿ ಸ್ಥಿತಿ ಮತ್ತಷ್ಟು ಚಿಂತಾಜನಕ ಸ್ಥಿತಿಗೆ ತಲುಪುವಂತಾಗಿತ್ತು. ರೋಗಿಗಳ ಜೊತೆಗಿದ್ದವರಿಗೂ ಸಣ್ಣಪುಟ್ಟ ಗಾಯವಾಗಿದೆ ಎಂದು ತಿಳಿದು ಬಂದಿದೆ.