15 ದಿನಗಳಲ್ಲಿ ವರದಿ ಪಡೆದು, ತಪ್ಪಿತಸ್ಥರ ವಿರುದ್ಧ ಕ್ರಮ: ರೋಷನ್‍ಬೇಗ್
ಬೆಳಗಾವಿ, ನ.20: ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆಯಲ್ಲಿ ರಾಜಕಾರಣಿಗಳು, ಅಧಿಕಾರಿಗಳ ಜತೆ ಶಾಮೀಲಾಗಿ ಕೆಲವು ಗುತ್ತಿಗೆದಾರರು ಅವ್ಯವಹಾರ ನಡೆಸುತ್ತಿರುವ ಕುರಿತು ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿಯಿಂದ ತನಿಖೆ ನಡೆಸಿ 15 ದಿನಗಳಲ್ಲಿ ವರದಿ ಪಡೆದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಆರ್.ರೋಷನ್ ಬೇಗ್ ತಿಳಿಸಿದ್ದಾರೆ.
ಸೋಮವಾರ ವಿಧಾನಪರಿಷತ್ತಿನಲ್ಲಿ ಗಮನ ಸೆಳೆಯುವ ಸೂಚನೆಯಡಿ ವಿಷಯ ಪ್ರಸ್ತಾಪಿಸಿದ ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ, ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆದಾರರು ಲೂಟಿ ಹೊಡೆಯುತ್ತಿದ್ದಾರೆ. ರಸ್ತೆ, ಒಳಚರಂಡಿ, ಬೀದಿ ದೀಪ ಹೀಗೆ ಯಾವುದೇ ಮೂಲಸೌಲಭ್ಯಗಳೂ ಈ ಮಹಾನಗರದ ಜನತೆಗೆ ದೊರೆತಿಲ್ಲ. ಸಾವಿರಾರು ಕೋಟಿ ರೂ. ರಾಜಕಾರಣಿಗಳ ಜತೆ ಕೈಜೋಡಿಸಿರುವ ಗುತ್ತಿಗೆದಾರರ ಪಾಲಾಗುತ್ತಿದೆ ಮಾಡಿದ ಗಂಭೀರ ಆರೋಪಕ್ಕೆ ಅವರು ತನಿಖೆಗೆ ಆದೇಶಿಸುವುದಾಗಿ ಪ್ರಕಟಿಸಿದರು.
ಬೆಂಗಳೂರಿನ ಬಳಿಕ ಅತೀ ದೊಡ್ಡ ನಗರ ಪಾಲಿಕೆ ಹುಬ್ಬಳ್ಳಿ-ಧಾರವಾಡದ್ದು. ರಸ್ತೆ ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಒಂದು ರಸ್ತೆ ದುರಸ್ತಿಯಾಗುತ್ತಿದ್ದರೆ, ಹಿಂದೆಯೆ ರಸ್ತೆಯನ್ನು ಅಗೆಯುವ ಕೆಲಸ ನಡೆಯುತ್ತದೆ. ಹಂದಿ ಹಾಗೂ ನಾಯಿಯ ಹಾವಳಿಯಿಂದ ಮಕ್ಕಳು, ಮಹಿಳೆಯರು ರಸ್ತೆಯಲ್ಲಿ ಓಡಾಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿಯಿದೆ ಎಂದು ಹೊರಟ್ಟಿ ಹೇಳಿದರು.
ಪಾಲಿಕೆಯ ಬಹುತೇಲ ಎಲ್ಲ ಕಾಮಗಾರಿಗಳನ್ನು ಒಬ್ಬನೇ ಗುತ್ತಿಗೆದಾರ ನಿರ್ವಹಿಸುತ್ತಿದ್ದಾನೆ. ಪಾಲಿಕೆಯ ಕೆಲ ಸದಸ್ಯರು, ಅಧಿಕಾರಿಗಳು ಅವರ ಜತೆ ಶಾಮೀಲಾಗಿದ್ದಾರೆ. ಸೊಳ್ಳೆಗಳ ಹಾವಳಿ ಮಿತಿ ಮೀರಿ 1400ಕ್ಕೂ ಹೆಚ್ಚು ಮಂದಿ ಡೆಂಗ್ ಜ್ವರದಿಂದ ಬಳಲುತ್ತಿದ್ದಾರೆ. ಮಾರುಕಟ್ಟೆಗಳು ಕೊಳಚೆ ಪ್ರದೇಶಗಳಾಗಿ ಮಾರ್ಪಟ್ಟಿವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಹೊರಟ್ಟಿ ಅವರ ಮಾತಿಗೆ ದನಿಗೂಡಿಸಿದ ಬಿಜೆಪಿಯ ಪ್ರದೀಪ್ ಶೆಟ್ಟರ್, ಗಣ್ಯಾತಿಗಣ್ಯರು ಸಂಚರಿಸುವ ಪ್ರವಾಸಿ ಮಂದಿರ ರಸ್ತೆಯನ್ನು ದುರಸ್ತಿ ಮಾಡಬೇಕು. ಕೇಂದ್ರ ಸರಕಾರದಿಂದ ಈ ಅವಳಿ ನಗರಗಳ ರಸ್ತೆ ಅಭಿವೃದ್ಧಿಗೆ 1256 ಕೋಟಿ ರೂ. ಬಿಡುಗಡೆಯಾಗಿದ್ದು, ರಾಜ್ಯ ಸರಕಾರ ತಕ್ಷಣ ಕಾಮಗಾರಿ ಆರಂಭಿಸಿ ನಾಗರಿಕರಿಗೆ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ, ಕೇಂದ್ರದಿಂದ ಶೇ.25 ರಷ್ಟು ಹಣ ಬಂದಿಲ್ಲ. ಕೇಂದ್ರ ನಮಗೆ ಬೆಂಬಲ ನೀಡಿಲ್ಲ ಎಂದಾಗ, ಶಿವಮೊಗ್ಗದವರು ಮುಖ್ಯಮಂತ್ರಿ(ಯಡಿಯೂರಪ್ಪ)ಯಾದಾಗ ಆ ಜಿಲ್ಲೆ ಅಭಿವೃದ್ಧಿ ಹೊಂದಿತು. ಆದರೆ, ಹುಬ್ಬಳ್ಳಿ-ಧಾರವಾಡದವರು(ಜಗದೀಶ್‍ಶೆಟ್ಟರ್) ಮುಖ್ಯಮಂತ್ರಿಯಾದಾಗ ನಮಗೆ ಅಂತಹ ಭಾಗ್ಯ ಸಿಕ್ಕಿಲ್ಲ ಎಂದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಸುಳ್ಳಿಗೆ ಮತ್ತೊಂದು ಹೆಸರೆ ವಿನಯ್ ಕುಲಕರ್ಣಿ. ನಿಮ್ಮ ಸರಕಾರ ಏನು ಮಾಡಿದೆ ಎಂಬುದನ್ನು ಮುಖ್ಯಮಂತ್ರಿಯ ಜಿಲ್ಲೆ ಮೈಸೂರಿಗೆ ಹೋಗಿ ಬನ್ನಿ ಎಂದರು. ಆಗ ಕಾಂಗ್ರೆಸ್ ಸದಸ್ಯರು ಗಲಾಟೆ ನಡೆಸಿ ಮೈಸೂರಿಗೆ ಸ್ವಚ್ಛತೆ ಹೆಸರಿನಲ್ಲಿ ಪ್ರಶಸ್ತಿ ಬಂದಿದೆ. ನಿಮ್ಮ ಸರಕಾರವೇ ನಂಬರ್ 1 ಮುಖ್ಯಮಂತ್ರಿ ಎಂಬ ಪ್ರಶಸ್ತಿ ನೀಡಿದೆ ಎಂದಾಗ ಉಭಯ ಪಕ್ಷಗಳ ಸದಸ್ಯರ ನಡುವೆ ಗದ್ದಲ, ಗಲಾಟೆ ನಡೆಯಿತು.
ನಂತರ ಮಾತು ಮುಂದುವರೆಸಿದ ಸಚಿವ ರೋಷನ್ ಬೇಗ್, ರಾಜ್ಯದಲ್ಲಿ ಹುಬ್ಬಳ್ಳಿ-ಧಾರವಾಡ ಎರಡನೇ ಅತಿ ದೊಡ್ಡ ಮಹಾನಗರ. ಈ ನಗರದ ಅಭಿವೃದ್ಧಿ ಹಾಗೂ ಶುಚಿತ್ವ ಕಾಪಾಡುವುದು ಸರಕಾರದ ಕರ್ತವ್ಯ. ಈಗಾಗಲೇ ಹಂದಿ ಹಾವಳಿ ತಡೆಗೆ ಊರ ಹೊರಗಡೆ ಫಾರಂ ರೂಪಿಸಿ ಅಲ್ಲಿಡಲು ಸೂಚಿಸಲಾಗಿದೆ. ಹೊಟೇಲ್ ತ್ಯಾಜ್ಯವನ್ನು ಅವುಗಳಿಗೆ ಪೂರೈಸುತ್ತೇವೆ ಎಂದರು.
ಆಗ ಹೊರಟ್ಟಿ, ಹಂದಿಗಳಿಗೆ ಪುನರ್ವಸತಿ ಕಲ್ಪಿಸಬೇಡಿ. ಅವುಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯಿರಿ ಎಂದು ಸಲಹೆ ಮಾಡಿದರು. ಆಗ ಮಧ್ಯ ಪ್ರವೇಶಿಸಿದ ಕಾಂಗ್ರೆಸ್‍ನ ಜಯಮಾಲಾ, ನಾಯಿಗಳ ರಕ್ಷಣೆಗೂ ಸರಕಾರ ಗಮನಹರಿಸಬೇಕು. ಅವುಗಳದ್ದೂ ಒಂದು ಜೀವವಲ್ಲವೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ರೋಷನ್ ಬೇಗ್, ಮೊದಲು ಮನುಷ್ಯರ ಜೀವ ಮುಖ್ಯ. ಏನಾದರೂ ಮಾಡಲು ಹೊರಟರೆ, ಒಂದು ಕಡೆ ಕಮ್ಯೂನಲ್ ಫಂಡಮೆಂಟಲಿಸ್ಟ್, ಇನ್ನೊಂದು ಕಡೆ ಎನ್ವಿರ್ನಾಮೆಂಟಲ್ ಫಂಡಮೆಂಟಲಿಸ್ಟ್‍ಗಳು ಅಡ್ಡ ಬರುತ್ತಾರೆ. ನಾಯಿ ಕಾಟಾ ಅಂದರೆ ಪೇಟಾ ಅಡ್ಡ ಬರುತ್ತದೆ ?, ಇವರ ಮಕ್ಕಳಿಗೆ ಸಮಸ್ಯೆಯಾದರೆ ಇವರಿಗೆ ಗೊತ್ತಾಗುತ್ತದೆ ಎಂದರು.