×
Ad

462 ಪ್ರಾಂಶುಪಾಲರ ಹುದ್ದೆ ಖಾಲಿ: ಸಚಿವ ಆಂಜನೇಯ

Update: 2017-11-20 21:54 IST

ಬೆಳಗಾವಿ, ನ.20: ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಶಾಲೆಗಳಲ್ಲಿ 462 ಪ್ರಾಂಶುಪಾಲರ ಹುದ್ದೆ ಖಾಲಿಯಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ.

ಸೋಮವಾರ ವಿಧಾನಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಅರುಣ ಶಹಾಪೂರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವೃಂದ ಮತ್ತು ನೇಮಕಾತಿ ನಿಯಮಾನುಸಾರ ವಸತಿ ಶಾಲೆಗಳ ಪ್ರಾಂಶುಪಾಲರ ಹುದ್ದೆಗಳನ್ನು ಮುಂಭಡ್ತಿ ಮತ್ತು ನೇರ ನೇಮಕಾತಿಗಾಗಿ ವಿಂಗಡನೆ ಮಾಡಿಲ್ಲ ಎಂದರು.

ಐದು ವರ್ಷ ಸೇವೆ ಪೂರೈಸಿದ ಶಿಕ್ಷಕರು ಲಭ್ಯವಿಲ್ಲದೇ ಇರುವುದರಿಂದ ಮುಂಭಡ್ತಿ ನೀಡಿಲ್ಲ. ಜಾರಿಯಲ್ಲಿರುವ ವೃಂದ ಮತ್ತು ನೇಮಕಾತಿ ನಿಯಮಗಳಮತೆ 310 ಪ್ರಾಂಶುಪಾಲರ ಹುದ್ದೆಗಳಿಗೆ ನೇರ ನೇಮಕಾತಿಗಾಗಿ ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ಕ್ರಮ ವಹಿಸಲಾಗಿದೆ ಎಂದು ಅವರು ಹೇಳಿದರು.

ಆದರೆ, ಈ ಕ್ರಮವನ್ನು ಪ್ರಶ್ನಿಸಿ ಆಸಿಫ್ ಅಲಿ ಮತ್ತು ಇತರ 31 ಅರ್ಜಿದಾರರು ಧಾರವಾಡದ ಹೈಕೋರ್ಟ್ ಪೀಠದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಅದೇ ರೀತಿ ಕಲಬುರಗಿಯ ಹೈಕೋರ್ಟ್ ಪೀಠದಲ್ಲಿಯೂ ರಿಟ್ ಅರ್ಜಿ ಸಲ್ಲಿಕೆಯಾಗಿದೆ. ಇದರ ಹಿನ್ನೆಲೆಯಲ್ಲಿ ಖಾಲಿಯಿರುವ ಶೇ.50ರಷ್ಟು ಹುದ್ದೆಗಳನ್ನು ಮುಂಭಡ್ತಿ ಮೂಲಕ ತುಂಬುವ ಬಗ್ಗೆ ಹೈಕೋರ್ಟ್ ಅಂತಿಮ ಆದೇಶದ ನಂತರ ಪರಿಶೀಲಿಸಿ ಭರ್ತಿ ಮಾಡಲಾಗುವುದು ಎಂದು ಅವರು ತಿಳಿಸಿದರು.

ಈ ಹಿಂದೆ ವೃಂದ ಮತ್ತು ನೇಮಕಾತಿ ನಿಯಮಗಳಂತೆ ಐದು ವರ್ಷ ಸೇವೆ ಪೂರೈಸಿದ ಶಿಕ್ಷಕರು ಲಭ್ಯವಿಲ್ಲದೇ ಇರುವುದರಿಂದ, ಮುಂಭಡ್ತಿ ನೀಡಲು  ಕ್ರಮ ವಹಿಸಿಲ್ಲ. ಆದರೆ, ಪ್ರಸ್ತುತ ಐದು ವರ್ಷ ಪೂರೈಸಿದ ಶಿಕ್ಷಕರು ಲಭ್ಯವಿದ್ದು, ಈ ಬಗ್ಗೆ ಸೂಕ್ತ ಕ್ರಮ ವಹಿಸಲಾಗುವುದು ಎಂದು ಆಂಜನೇಯ ಹೇಳಿದರು.

ಬಿಜೆಪಿ-ಜೆಡಿಎಸ್ ಸದಸ್ಯರ ಧರಣಿ: ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವಸತಿ ಶಾಲೆ ನೌಕರರು ಸೇವಾ ಬೇಡಿಕೆಗಳ ಈಡೇರಿಕೆಗಾಗಿ ಪ್ರಸಕ್ತ ಸಾಲಿನ ಜೂ.12ರಂದು ಸಾಂಕೇತಿಕ ಮುಷ್ಕರ ನಡೆಸಿದ್ದರಿಂದ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ನೀಡಿರುವ ನೋಟಿಸ್ ಹಿಂಪಡೆಯುವಂತೆ ಆಗ್ರಹಿಸಿ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು. 

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೌಕರರಿಗೆ ಪ್ರತಿಭಟನೆ ಮಾಡುವ ಹಕ್ಕಿಲ್ಲವೆ? ಸರಕಾರ ತನ್ನ ತಪ್ಪು ಮುಚ್ಚಿ ಹಾಕಿಕೊಳ್ಳಲು ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಈ ಸುತ್ತೋಲೆಯನ್ನು ಕೂಡಲೆ ಹಿಂಪಡೆಯಬೇಕು ಎಂದು ಆಗ್ರಹಿಸಿ ಬಿಜೆಪಿ ಸದಸ್ಯರಾದ ಅರುಣ ಶಹಾಪೂರ, ಗಣೇಶ್ ಕಾರ್ಣಿಕ್, ಅಮರನಾಥ ಪಾಟೀಲ, ತಾರಾ ಅನೂರಾಧಾ, ಜೆಡಿಎಸ್‍ನ ರಮೇಶ್‍ಬಾಬು ಸೇರಿದಂತೆ ಇನ್ನಿತರರು ಪ್ರತಿಭಟನೆ ಮಾಡಿದರು.

ಇದಕ್ಕೆ ದನಿಗೂಡಿಸಿದ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಪ್ರತಿಭಟನೆಯನ್ನು ದಮನ ಮಾಡುವ ಪ್ರವೃತ್ತಿ ಸರಿಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಪ್ರತಿಭಟನೆ ಮಾಡುವ ಹಕ್ಕಿದೆ. ಮೊದಲು ಸುತ್ತೋಲೆ ವಾಪಸು ಪಡೆಯಬೇಕು ಎಂದು ಆಗ್ರಹಿಸಿದರು. ಆನಂತರ, ನೋಟಿಸ್ ಹಿಂಪಡೆಯುವುದಾಗಿ ಆಂಜನೇಯ ಪ್ರಕಟಿಸಿದ ಬಳಿಕ ಅವರು ಧರಣಿ ವಾಪಸ್ ತೆಗೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News