ರೋಗಿಗಳಿಗೆ ಹೊರಗಡೆ ಔಷಧಿ ಖರೀದಿಗೆ ಸೂಚಿಸಿದರೆ ವೈದ್ಯರ ವಿರುದ್ಧ ಕ್ರಮ: ರಮೇಶ್‍ ಕುಮಾರ್

Update: 2017-11-20 16:35 GMT

ಬೆಳಗಾವಿ, ನ.20: ಸರಕಾರಿ ವೈದ್ಯರು ರೋಗಿಗಳನ್ನು ಪರಿಶೀಲಿಸಿದ ಬಳಿಕ ಆರೋಗ್ಯ ಸಂಸ್ಥೆಗಳ ಉಗ್ರಾಣಗಳಲ್ಲಿ ಲಭ್ಯವಿರದ ಔಷಧಿಗಳನ್ನು ಖಾಸಗಿ ಔಷಧಾಲಯಗಳಿಂದ ಖರೀದಿಸಲು ಬ್ರಾಂಡೆಡ್ ಹೆಸರಿನಲ್ಲಿ ಸಲಹಾ ಚೀಟಿಗಳನ್ನು ನೀಡುವುದು ಕಂಡು ಬಂದರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್.ರಮೇಶ್‍ಕುಮಾರ್ ತಿಳಿಸಿದ್ದಾರೆ.

ಸೋಮವಾರ ವಿಧಾನಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ರಾಮಚಂದ್ರಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಅವರು, ಸಲಹಾ ಚೀಟಿಗಳನ್ನು ನೀಡುವುದಲ್ಲದೆ, ಜನೌಷಧಿ ಮಳಿಗೆಗಳಿಂದ ಔಷಧಿಗಳನ್ನು ಖರೀದಿಸದೆ ಖಾಸಗಿ ಔಷಧಾಲಯಗಳಿಂದ ಖರೀದಿಸಲು ಪ್ರೇರೇಪಿಸಿದ್ದು ಕಂಡುಬಂದಲ್ಲಿ ಅಂತಹ ವೈದ್ಯಾಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಔಷಧಿಗಳನ್ನು ಕೆಎಸ್‍ಡಿಎಲ್‍ಡಬ್ಲ್ಯುಎಸ್ ಸಂಸ್ಥೆ ರಾಜ್ಯದ ಎಲ್ಲ ಜಿಲ್ಲಾ ಔಷಧ ಉಗ್ರಾಣಗಳ ಮೂಲಕ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಗೆ ಸರಬರಾಜು ಮಾಡಲಾಗುತ್ತಿದೆ. ಒಂದು ವೇಳೆ ಔಷಧಿ ಖರೀದಿಯ ಟೆಂಡರ್ ವಿಳಂಬವಾದಲ್ಲಿ, ರದ್ದುಗೊಂಡಲ್ಲಿ ಸರಬರಾಜು ಮಾಡಿರುವ ಔಷಧಿಗಳನ್ನು ಹೊರತುಪಡಿಸಿ ಯಾವುದಾದರೂ ಔಷಧಿ ಲಭ್ಯವಿಲ್ಲದಿದ್ದಲ್ಲಿ ಅವಶ್ಯ ಔಷಧಿಗಳನ್ನು ತುರ್ತು ಸಂದರ್ಭದಲ್ಲಿ ಪೂರೈಸಲು ಅನುದಾನವನ್ನು ಒದಗಿಸಲಾಗಿದೆ ಎಂದು ತಿಳಿಸಿದರು.

ಪ್ರತೀ ಜಿಲ್ಲಾ ಆಸ್ಪತ್ರೆಗಳಿಗೆ 25 ಲಕ್ಷ ರೂ., ಪ್ರತೀ ತಾಲೂಕು ಆಸ್ಪತ್ರೆಗಳಿಗೆ 10 ಲಕ್ಷ ರೂ., ಸಮುದಾಯ ಆರೋಗ್ಯ ಕೇಂದ್ರಗಳಿಗೆ 3 ಲಕ್ಷ ರೂ., ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ 50 ಸಾವಿರ ರೂ. ಅನುದಾನವನ್ನು ಲಭ್ಯವಿಲ್ಲದ ಔಷಧಿಗಳನ್ನು ಖರೀದಿಸಿ ರೋಗಿಗಳಿಗೆ ವಿತರಿಸಲು ಸೂಚನೆ ನೀಡಲಾಗಿದೆ ಎಂದರು.

ಬಡ ರೋಗಿಗಳಿಗೆ ವಿತರಿಸಲು ಸರಕಾರ ಸಾವಿರಾರು ಕೋಟಿ ರೂ.ಗಳನ್ನು ಖರ್ಚು ಮಾಡಿ ಸರಕಾರ ಔಷಧಿಗಳನ್ನು ಖರೀದಿಸುತ್ತಿದೆ. ರಾಜ್ಯದ ಸಾಮಾನ್ಯ ಜನರಿಗೆ ಅತಿಕಡಿಮೆ ದರದಲ್ಲಿ ಬ್ರಾಂಡೆಡ್ ಔಷಧಿಯಷ್ಟೇ ಉತ್ತಮ ಗುಣಮಟ್ಟ ಹಾಗೂ ರೋಗನಿವಾರಕ ಸಾಮರ್ಥ್ಯ ಹೊಂದಿರುವ ಜನರಿಕ್ ಔಷಧಿಗಳನ್ನು ಪೂರೈಸಲು ರಾಜ್ಯದ ಆಯ್ದ ಸಮುದಾಯ ಆರೋಗ್ಯ ಕೇಂದ್ರ, ಎಲ್ಲ ತಾಲೂಕು ಸಾರ್ವಜರ್ನಿಕ ಆರೋಗ್ಯ ಕೇಂದ್ರ ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಬಿಪಿಪಿಐ ಸಹಕಾರದೊಂದಿಗೆ ಜನೌಷಧಿ ಮಳಿಗೆಗಳನ್ನು ತೆರೆಯಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು  ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News