×
Ad

‘ಕರ್ನಾಟಕ ಭೂ ಕಂದಾಯ ವಿಧೇಯಕ’ ಮಂಡನೆ

Update: 2017-11-20 22:10 IST

ಬೆಳಗಾವಿ, ನ. 20: ಲಂಬಾಣಿ ತಾಂಡ, ಗೊಲ್ಲರಹಟ್ಟಿ, ಹಾಡಿ, ದೊಡ್ಡಿ, ಕ್ಯಾಂಪ್, ಕಾಲನಿ ಸೇರಿದಂತೆ ಸರಕಾರಿ ಭೂಮಿಯಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ವಾಸದ ಮನೆ ಅದಕ್ಕೆ ಹೊಂದಿಕೊಂಡ ಭೂಮಿಯನ್ನು 94 ‘ಡಿ’ಯಡಿ ಸಕ್ರಮಕ್ಕೆ ಅವಕಾಶ ಕಲ್ಪಿಸುವ ‘ಕರ್ನಾಟಕ ಭೂ ಕಂದಾಯ(ಮೂರನೆ ತಿದ್ದುಪಡಿ) ವಿಧೇಯಕ’ ಮಂಡಿಸಲಾಯಿತು.

94 ‘ಡಿ’ ಅಡಿ ಸರಕಾರಿ ಭೂಮಿಯಲ್ಲಿ ನಿರ್ಮಿಸಲಾದ, ಅದರ ಮತ್ತು ಅದಕ್ಕೆ ನಿಕಟದಲ್ಲಿ ತಾಗಿಕೊಂಡಿರುವ ನಿವೇಶನ ಸಹಿತ ವಾಸದ ಮನೆ ಸಕ್ರಮ ಮತ್ತು ಮಂಜೂರು ಮಾಡುವುದು. ಹೀಗೆ ಮಂಜೂರಾತಿ ಪ್ರಮಾಣ ಪತ್ರ ಸ್ವೀಕರಿಸಿದ ಬಳಿಕ ಹದಿನೈದು ವರ್ಷಗಳ ವರೆಗೆ ಪರಭಾರೆ ಮಾಡುವಂತಿಲ್ಲ. ‘ದಾಖಲಾಗದ ವಾಸಿಸುವ ಸ್ಥಳ’ ಎಂದರೆ, ಅಸ್ತಿತ್ವದಲ್ಲಿರುವ ಗ್ರಾಮ ಅಥವಾ ವಿಲೀನಗೊಳಿಸಬೇಕಾದ ಪರಿವರ್ತಿಸಿದ ಗ್ರಾಮಗಳಿಗೆ ಕಂದಾಯ ಗ್ರಾಮಗಳ ಮಾನ್ಯತೆ ಕಲ್ಪಿಸಲು ಅವಕಾಶ ಕಲ್ಪಿಸಲಾಗಿದೆ.

ಈ ಪ್ರಕರಣದಡಿಯಲ್ಲಿ ಸಕ್ರಮ ಮತ್ತು ಮಂಜೂರಾತಿ ಮಾಡಿದ ಅನಧಿಕೃತ ವಾಸದ ಮನೆ ಮತ್ತು ಅದಕ್ಕೆ ಲಗತ್ತಾದ ನಿವೇಶನಕ್ಕಿಂತ ಹೆಚ್ಚಿಲ್ಲದಂತೆ ಒಟ್ಟಾರೆ 4 ಸಾವಿರ ಚದರ ಅಡಿಗೆ ಹೆಚ್ಚಾಗದಂತೆ ಇರಬೇಕು ಎಂಬ ಷರತ್ತಿಗೆ ಒಳಪಟ್ಟಿದೆ. ಸೋಮವಾರ ವಿಧಾನಸಭೆಯಲ್ಲಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಕರ್ನಾಟಕ ಭೂ ಕಂದಾಯ(ಮೂರನೆ ತಿದ್ದುಪಡಿ) ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಿದರು. 

ಲಂಬಾಣಿ ತಾಂಡಾ, ಗೊಲ್ಲರಹಟ್ಟಿ, ಆದಿವಾಸಿಗಳ ಹಾಡಿ ಸೇರಿದಂತೆ ಮಾನ್ಯತೆ ರಹಿತ ಗ್ರಾಮಗಳಿಗೆ ಕಂದಾಯ ಗ್ರಾಮಗಳ ಮಾನ್ಯತೆ ಕಲ್ಪಿಸುವ ಮಹತ್ವದ ಕಾನೂನಿಗೆ ಈಗಾಗಲೇ ರಾಷ್ಟ್ರಪತಿ ಅಂಕಿತ ಹಾಕಿದ್ದು, ವಾಸದ ಮನೆ, ಅದಕ್ಕೆ ಹೊಂದಿಕೊಂಡ ನಿವೇಶನ ಹಾಗೂ ಸಣ್ಣ ಅಳತೆಯ ಭೂಮಿಯನ್ನು ಮಂಜೂರು ಮಾಡಲು ವಿಧೇಯಕ ತರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News