ಜನವರಿಯಿಂದ ಹೊಸ ತಾಲೂಕುಗಳು ಕಾರ್ಯಾರಂಭ: ಸಚಿವ ಕಾಗೋಡು ತಿಮ್ಮಪ್ಪ
ಬೆಳಗಾವಿ, ನ. 20: ರಾಜ್ಯದಲ್ಲಿ ನೂತನವಾಗಿ ಘೋಷಣೆಯಾಗಿರುವ 50 ಹೊಸ ತಾಲೂಕುಗಳು 2018ರ ಜನವರಿಯಿಂದ ಕಾರ್ಯಾರಂಭ ಗೊಳ್ಳಲಿವೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.
ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ರಘುಮೂರ್ತಿ ಕೇಳಿದ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಅವರು, 50 ಹೊಸ ತಾಲೂಕುಗಳ ರಚನೆಗೆ ಈಗಾಗಲೇ ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು, ಹಣಕಾಸು ನೇರವನ್ನು ಒದಗಿಸಲಾಗುತ್ತಿದೆ ಎಂದು ವಿವರಿಸಿದರು.
ಹೊಸ ತಾಲೂಕುಗಳ ರಚನೆ ಭೌಗೋಳಿಕ ಮತ್ತು ಆಡಳಿತಾತ್ಮಕ ಅಗತ್ಯಗಳ ಜತೆಗೆ ಹಣಕಾಸಿನ ಪರಿಸ್ಥಿತಿಯನ್ನು ಅವಲಂಬಿಸುತ್ತದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಪರಶುರಾಂಪುರ ಹೋಬಳಿಯನ್ನು ಹೊಸ ತಾಲೂಕನ್ನಾಗಿ ರಚಿಸುವ ಬೇಡಿಕೆಯನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಹೊಸ ತಾಲೂಕು ಘೋಷಣೆಗೆ ಆಗ್ರಹ: ರಾಜ್ಯದಲ್ಲಿ ಹೊಸ ತಾಲೂಕುಗಳ ಘೋಷಣೆಗೆ ಅರ್ಹವಾಗಿರುವ ಹಲವು ಹೋಬಳಿ ಕೇಂದ್ರಗಳಿದ್ದು, ಅವುಗಳಿಗೆ ತಾಲೂಕನ್ನಾಗಿ ಘೋಷಣೆ ಮಾಡಬೇಕು ಎಂದು ಆಡಳಿತ ಮತ್ತು ವಿಪಕ್ಷ ಸದಸ್ಯರು ಒಕ್ಕೂರಲಿನಿಂದ ಆಗ್ರಹಿಸಿದರು.
ಚಿಕ್ಕಮಗಳೂರು ಜಿಲ್ಲೆಯ ಕಳಸಾ, ಬೆಂಗಳೂರು ಗ್ರಾಮಾಂತರ ಜಿಲ್ಲೆ ವಿಜೀಪುರ, ಸಾವಳಗಿ, ಹಾರೋಗೇರಿ ಸೇರಿದಂತೆ ಇನ್ನಿತರ ಹೋಬಳಿಗಳನ್ನು ತಾಲೂಕು ಘೋಷಣೆ ಮಾಡಬೇಕು ಎಂದು ಕೋರಿದರು.
ಹೊಸ ತಾಲೂಕುಗಳ ಘೋಷಣೆಗೆ ಬಹಳ ಬೇಡಿಕೆ ಇದೆ. ಈ ಬಗ್ಗೆ ಮುಂಬರುವ ದಿನಗಳಲ್ಲಿ ಹಣಕಾಸಿನ ಲಭ್ಯಯನ್ನು ಆಧರಿಸಿ ಸೂಕ್ತ ಸಂದರ್ಭದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಚಳ್ಳಕೆರೆ ತಾಲೂಕಿನ ಪರುಶುರಾಂಪುರ ಹೋಬಳಿಯನ್ನು ತಾಲೂಕು ಘೋಷಣೆಗೆ ಆದ್ಯತೆ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಕಾಗೋಡು ತಿಮ್ಮಪ್ಪ, ಸದಸ್ಯರ ಆಗ್ರಹಕ್ಕೆ ಪ್ರತಿಕ್ರಿಯೆ ನೀಡಿದರು.
ಹೊಸ ಉಪವಿಭಾಗಗಳ ರಚನೆ: ರಾಜ್ಯದಲ್ಲಿ ಹೊಸ ಉಪವಿಭಾಗಗಳನ್ನು ರಚಿಸುವ ಕುರಿತು ಒಟ್ಟು 11 ಪ್ರಸ್ತಾವನೆಗಳು ಸರಕಾರದ ಮುಂದಿವೆ. ಪ್ರತಿಯೊಂದು ಉಪವಿಭಾಗ ರಚನೆಗೆ ತಲಾ 7.70ಕೋಟಿ ರೂ.ವೆಚ್ಚ ಅಂದಾಜಿಸಲಾಗಿದ್ದು, ಒಟ್ಟು 84.70 ಕೋಟಿ ರೂ.ಅಗತ್ಯವಿದೆ. ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹೊಸ ಉಪವಿಭಾಗ ರಚನೆಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.