ತೆಂಗು ಬೆಳೆ ನಾಶಕ್ಕೆ ಪರಿಹಾರ ಕೋರಿ ಪ್ರಧಾನಿ ಬಳಿ ನಿಯೋಗ: ಮಲ್ಲಿಕಾರ್ಜುನ್
ಬೆಳಗಾವಿ, ನ. 20: ತೆಂಗು ಬೆಳೆ ನಾಶಕ್ಕೆ ಪರಿಹಾರ ಕೋರಿ ಮುಂದಿನ ವಾರದೊಳಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಳಿಗೆ ಸರ್ವಪಕ್ಷ ನಿಯೋಗ ಕೊಂಡ್ಯೊಯಲಾಗುವುದು ಎಂದು ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಇಂದಿಲ್ಲಿ ಭರವಸೆ ನೀಡಿದ್ದಾರೆ.
ಸೋಮವಾರ ವಿಧಾನಸಭೆಯಲ್ಲಿ ನಿಯಮ 69ರಡಿಯಲ್ಲಿ ಜೆಡಿಎಸ್ ಹಿರಿಯ ಸದಸ್ಯ ಶಿವಲಿಂಗೇಗೌಡ, ಬಾಲಕೃಷ್ಣ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಅವರು, ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿಯಿಂದ ತೆಂಗು ಬೆಳೆ ನಾಶವಾಗಿದೆ. ಆ ಹಿನ್ನೆಲೆಯಲ್ಲಿ ಕೇಂದ್ರಕ್ಕೆ 2,477 ಕೋಟಿ ರೂ.ಪರಿಹಾರ ಕೋರಿ ಈ ಹಿಂದೆ ಮನವಿ ಸಲ್ಲಿಸಲಾಗಿತ್ತು. ಆದರೆ, ಈ ಬಗ್ಗೆ ಕೇಂದ್ರ ಸಮರ್ಪಕವಾಗಿ ಸ್ಪಂದಿಸಿಲ್ಲ. ಹೀಗಾಗಿ ಶೀಘ್ರದಲ್ಲೇ ಪ್ರಧಾನಿ ಮೋದಿ ಬಳಿಗೆ ಸರ್ವಪಕ್ಷ ನಿಯೋಗ ಕೊಂಡೊಯ್ಯಲಾಗುವುದು. ತೆಂಗು ಬೆಳೆಗೆ ವಿಶೇಷ ಪ್ಯಾಕೇಜ್ ನೀಡುವಂತೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಶಿವಲಿಂಗೇಗೌಡ, ತೆಂಗು ಬೆಳೆ ನಾಶದ ಹಿನ್ನೆಲೆಯಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಬೆಂಗಳೂರಿನ ಸಿದ್ಧ ಉಡುಪು ಕಾರ್ಖಾನೆಗಳಲ್ಲಿ ಭದ್ರತೆ ಸಿಬ್ಬಂದಿಯಾಗಿ ಸೀಟಿ ಹೊಡೆಯುವ ಕೆಲಸದಲ್ಲಿ ತೊಡಗಿದ್ದಾರೆ. ವಿದ್ಯುತ್ ತಗುಲಿ ಅಥವಾ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ತೆಂಗಿನ ಮರ ಕಡಿದರೆ 15 ಸಾವಿರ ರೂ. ಪರಿಹಾರ ನೀಡಲಾಗುತ್ತದೆ. ಒಂದು ತೆಂಗಿನ ಮರ ಬಿದ್ದರೆ ಅದನ್ನು ತೆರವು ಮಾಡಲು ಕನಿಷ್ಠ 3 ಸಾವಿರ ರೂ.ಗಳು ಬೇಕು. ಹೀಗಾಗಿ ರಾಜ್ಯ ಸರಕಾರ ತೆಂಗು ಬೆಳೆ ನಾಶಕ್ಕೆ ಸೂಕ್ತ ಪರಿಹಾರ ನೀಡಬೇಕು. ಜತೆಗೆ ರಾಜ್ಯದಿಂದ ಆಯ್ಕೆಯಾದ ಬಿಜೆಪಿ ಸಂಸದರು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಿ ಸೂಕ್ತ ಪರಿಹಾರ ಕೊಡಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ಸಿ.ಟಿ.ರವಿ, ರಾಜ್ಯ ಸರಕಾರ ಮೊದಲು ಪರಿಹಾರ ಘೋಷಣೆ ಮಾಡಿ ಆ ಬಳಿಕ ಕೇಂದ್ರಕ್ಕೆ ಮನವಿ ಸಲ್ಲಿಸಬೇಕು. ಅದು ಬಿಟ್ಟು ಕೇಂದ್ರ ಸರಕಾರ ನೇರವು ನೀಡಿಲ್ಲ ಎಂಬುದು ಸರಿಯಲ್ಲ ಎಂದು ಟೀಕಿಸಿದರು.
ಅವ್ರೇನೂ ಅಲ್ಲಾಡಿಸಲಿಲ್ಲ: ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಿವಲಿಂಗೇಗೌಡ, ‘ನಿಮ್ಮ ಪಕ್ಷದ 19 ಮಂದಿ ಸಂಸದರಿದ್ದು, ಅವರೆಲ್ಲ ಅಲ್ಲಿಗೆ ಹೋಗಿ ಏನೂ ಅಲ್ಲಾಡಿಸಲು ಆಗುವುದಿಲ್ಲ. ಈಗ ನೀವೂ ಇಲ್ಲೇನೂ ಹೇಳ್ತೀರಿ ಎಂದು ತಿವಿದರು. ಇದರಿಂದ ಸದನ ನಗೆ ಅಲೆಯಲ್ಲಿ ತೇಲಿತು. ಈ ಮಧ್ಯೆ ಎದ್ದು ನಿಂತ ಬಿಜೆಪಿಯ ಅರವಿಂದ ಲಿಂಬಾವಳಿ, ‘ಏನೂ ಅಲ್ಲಾಡಿಸಬೇಕು ಎಂಬುದನ್ನು ವಿವರಣೆ ಕೋಡಿ ಎಂದು ಮಸಾಲೆ ಬೆರೆಸಿದರು.
ಇದಕ್ಕೆ ಧ್ವನಿಗೂಡಿಸುವ ರೀತಿಯಲ್ಲೇ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಬಿಜೆಪಿಯವರಿಗೆ ಏನೂ ಅಲ್ಲಾಡಿಸಲು ಆಗುವುದಿಲ್ಲ. ಅವರ ಕೈಗೆ ನೀವೇ ಒಂದು ಗಂಟೆ ಕೊಟ್ಟು ಅಲ್ಲಾಡಿಸಲಿಕ್ಕೆ ಹೇಳಬೇಕು ಎಂದು ಶಿವಲಿಂಗೇಗೌಡ ಅವರಿಗೆ ಸಲಹೆ ನೀಡಿದ್ದು, ಸದನದಲ್ಲಿ ಹಾಸ್ಯದ ಹೊಳೆ ಹರಿಸಿತು.
ತೆಂಗು ಬೆಳೆ ನಾಶದ ಬಗ್ಗೆ ರಾಜ್ಯ ಸರಕಾರ ವೈಜ್ಞಾನಿಕ ಸರ್ವೆ ನಡೆಸಿ ಅಂಕಿಅಂಶ ಸಂಗ್ರಹಿಸಿ ಕೇಂದ್ರಕ್ಕೆ ಮನವಿ ಸಲ್ಲಿಸಿದೆ. ಮನವಿ ಸಲ್ಲಿಸಿ ಮೂರು ತಿಂಗಳು ಕಳೆದರೂ ಕೇಂದ್ರದಿಂದ ಯಾವುದೇ ಸಕರಾತ್ಮಕ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ರಾಜ್ಯ ಪ್ರತಿನಿಧಿಸುವ ಸಂಸದರು ಕೇಂದ್ರದ ಮೇಲೆ ಪ್ರಭಾವ ಬೀರಿ ಪರಿಹಾರ ಕೊಡಿಸಲು ಕ್ರಮ ವಹಿಸಬೇಕು.
ಕೃಷ್ಣ ಬೈರೇಗೌಡ, ಕೃಷಿ ಸಚಿವ