ವಿಮಾನ ನಿಲ್ದಾಣದ ಟ್ಯಾಕ್ಸಿ ಸೇವೆ ಮೇಲ್ದರ್ಜೆಗೆ: ಡಾ.ಶರಣಪ್ರಕಾಶ್‍ ಪಾಟೀಲ್

Update: 2017-11-20 17:04 GMT

ಬೆಳಗಾವಿ, ನ.20: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟ್ಯಾಕ್ಸಿ ಸೇವೆಯನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ 4 ವರ್ಷ ಹಳೆಯದಾದ ಟ್ಯಾಕ್ಸಿಗಳನ್ನು ತೆರವುಗೊಳಿಸಿ ಹೊಸ ಟ್ಯಾಕ್ಸಿಗಳನ್ನು ಸೇರ್ಪಡೆಗೊಳಿಸಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್‍ಪಾಟೀಲ್ ತಿಳಿಸಿದ್ದಾರೆ.

ಸೋಮವಾರ ವಿಧಾನಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಟಿ.ಎ.ಶರವಣ ಕೇಳಿದ ಪ್ರಶ್ನೆಗೆ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್‍ ಖರ್ಗೆ ಪರವಾಗಿ ಉತ್ತರ ನೀಡಿದ ಅವರು, ಪ್ರಯಾಣಿಕರ ಸುರಕ್ಷತೆಯ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಟ್ಯಾಕ್ಸಿ ಸೇವೆ ಉತ್ತಮಪಡಿಸುವ ಸಲುವಾಗಿ ಪ್ರಯಾಣಿಕರ ಆಗಮನದ ಸ್ಥಳದಲ್ಲಿ ಸೂಕ್ತ ಮಾಹಿತಿ ನೀಡಲು ನಿಗದಿತ ಸ್ಥಳಗಳಲ್ಲಿ 15 ಜನ ನುರಿತ ಸಿಬ್ಬಂದಿ ನಿಯೋಜಿಸಲಾಗಿದೆ ಎಂದರು.

ಪ್ರಯಾಣಿಕರ ದೂರುಗಳನ್ನು ಸ್ವೀಕರಿಸಿ, ಪರಿಹರಿಸಲು, ಸಲಹೆಗಳನ್ನು ಪಡೆಯಲು ಮತ್ತು ಟ್ಯಾಕ್ಸಿ ಸೇವೆಯನ್ನು ಮುಂಗಡವಾಗಿ ಕಾಯ್ದಿರಿಸಲು 24*7 ಕಾರ್ಯನಿರ್ವಹಿಸಲು ಯಶವಂತಪುರದಲ್ಲಿರುವ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಕಚೇರಿಯಲ್ಲಿ ಕಾಲ್‍ಸೆಂಟರ್ ಸೇವೆಯನ್ನು ಮತ್ತು ಮೊಬೈಲ್‍ ಆ್ಯಪ್‍ನ್ನು ಪ್ರಾರಂಭಿಸಲಾಗಿದೆ ಎಂದ ಅವರು, ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ಸಲುವಾಗಿ ಟ್ಯಾಕ್ಸಿ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ಆನ್‍ಲೈನ್ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದೆ. ಪೋಸ್ಟ್‍ಪೇಡ್ ಟ್ಯಾಕ್ಸಿ ಸೇವೆಯ ಪಾರ್ಕಿಂಗ್ ಶುಲ್ಕ ಮತ್ತು ನಿರ್ವಹಣೆಯಲ್ಲಿ ಅಕ್ರಮ ನಡೆದಿರುವುದು ಸರಕಾರದ ಗಮನಕ್ಕೆ ಬಂದಿದೆ ಎಂದರು.

ಬೆಂಗಳೂರಿನ ಪೂಜಾರಿ ಆ್ಯಂಡ್ ಅಸೋಸಿಯೇಟ್ಸ್ ಚಾರ್ಟರ್ಡ್ ಅಕೌಂಟೆಂಟ್ಸ್ ಅವರಿಂದ ವಿಶೇಷ ಲೆಕ್ಕ ತಪಾಸಣಾ ಕಾರ್ಯವನ್ನು ಮಾಡಿಸಲಾಗಿದ್ದು, 52,890 ರೂ.ಗಳು ದುರುಪಯೋಗವಾಗಿರುವುದಾಗಿ ತನಿಖಾ ವರದಿ ಉಲ್ಲೇಖಿಸಿದೆ. ಈ ಸಂಬಂಧ ವ್ಯವಸ್ಥಾಪಕ, ಉಪಯೋಗಿ ಕೆಲಸಗಾರ, ಅಟೆಂಡರ್ ಹಾಗೂ ಇಬ್ಬರು ಹೊರ ಗುತ್ತಿಗೆ ನೌಕರರನ್ನು ವಜಾಗೊಳಿಸಲಾಗಿದೆ ಎಂದು ಅವರು ಹೇಳಿದರು.

ವ್ಯವಸ್ಥಾಪಕ ಎಸ್.ಆರ್.ಚಿಕ್ಕಮಠ್ ಅವರನ್ನು ಅಮಾನತ್ತಿನಲ್ಲಿಟ್ಟು ಇಲಾಖೆ ತನಿಖೆ ನಂತರ ಅವ್ಯವಹಾರದ 52,890 ರೂ.ಪೈಕಿ ಶೇ.50ರಷ್ಟು ಹಣ 26,445 ರೂ.ಗಳನ್ನು ವಸೂಲು ಮಾಡಲಾಗಿದೆ. ಉಪಯೋಗಿ ಕೆಲಸಗಾರ ವೆಂಕಟರಾಮಯ್ಯ ತನಿಖಾ ಸಮಯದಲ್ಲಿ ಮರಣ ಹೊಂದಿದ್ದರಿಂದ ಇವರ ವಿರುದ್ಧದ ತನಿಖೆಯನ್ನು ಕೈಬಿಡಲಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News