ಹೆಣ್ಣು ಭ್ರೂಣ ಪತ್ತೆ ಕೇಂದ್ರಗಳ ವಿರುದ್ಧ ಕಟ್ಟು ನಿಟ್ಟಿನ ಕ್ರಮ: ರಮೇಶ್‍ ಕುಮಾರ್

Update: 2017-11-20 17:06 GMT

ಬೆಳಗಾವಿ, ನ.20: ಹೆಣ್ಣು ಭ್ರೂಣ ಪತ್ತೆ ಮಾಡುವ ಸ್ಕ್ಯಾನಿಂಗ್ ಕೇಂದ್ರಗಳ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್. ರಮೇಶ್‍ಕುಮಾರ್ ತಿಳಿಸಿದ್ದಾರೆ.

ಸೋಮವಾರ ವಿಧಾನಪರಿಷತ್ತಿನ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, 2014ರಲ್ಲಿ 1000 ಗಂಡು ಮಕ್ಕಳ ಜನನಕ್ಕೆ 917 ರಷ್ಟಿದ್ದ ಹೆಣ್ಣು ಮಕ್ಕಳ ಸಂಖ್ಯೆ 2016ರಲ್ಲಿ 898ಕ್ಕೆ ಇಳಿದಿದೆ. ಲಿಂಗಾನುಪಾತದಲ್ಲಿ ಅಜಗಜಾಂತರ ವ್ಯತ್ಯಾಸವಾಗುತ್ತಿದೆ. ಪಿಸಿಪಿಎನ್‍ಡಿಟಿ ಕಾಯ್ದೆಯಡಿ ಇದುವರೆಗೆ 70 ಪ್ರಕರಣ ದಾಖಲಿಸಲಾಗಿದ್ದು, 38 ಪ್ರಕರಣ ಮಾತ್ರ ಇತ್ಯರ್ಥವಾಗಿವೆ. 3 ಪ್ರಕರಣದಲ್ಲಿ ಶಿಕ್ಷೆಯಾಗಿದೆ ಎಂದರು.

ಅದಕ್ಕೆ ಉತ್ತರಿಸಿದ ಸಚಿವ ರಮೇಶ್‍ಕುಮಾರ್, ಅನೇಕ ಸ್ಕ್ಯಾನಿಂಗ್ ಸೆಂಟರ್‍ಗಳಲ್ಲಿ ಸ್ತ್ರೀ ರೋಗ ತಜ್ಞರ ಶಿಫಾರಸಿಲ್ಲದೆ ಹೆಣ್ಣು ಭ್ರೂಣ ಪತ್ತೆ ಮಾಡುವ ಪ್ರಕರಣ ಗಮನದಲ್ಲಿದೆ. ವೃತ್ತಿ ಸಂಹಿತೆ ಬಿಟ್ಟಾಗ, ಮನುಷ್ಯ ರಾಕ್ಷಸನಾದಾಗ ಇಂತಹ ನೀಚ ಕೃತ್ಯಗಳು ನಡೆಯುತ್ತವೆ. ಕಟ್ಟುನಿಟ್ಟಿನ ಕಾಯ್ದೆ ಇದ್ದಾಗಲೂ ಉಲ್ಲಂಘಿಸುವವರು ಇದ್ದಾರೆ. ಹೆಣ್ಣು ಬೇಡ ಎನ್ನುವುದಾದರೆ ನಿಮಗೆ ತಾಯಿ ಬೇಡವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚು ವರದಿಯಾಗಿವೆ. ಅಂತಹ ಪ್ರಕರಣ ಕಂಡು ಬಂದಲ್ಲಿ ಲೈಸನ್ಸ್ ರದ್ದು ಮಾಡುವುದರ ಜತೆಗೆ ಮಾಲೀಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುತ್ತಿದ್ದೇವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News