ಅಲೆಮಾರಿ-ಅರೆ ಅಲೆಮಾರಿ ಸಮುದಾಯಕ್ಕೆ 9545 ಮನೆ ಮಂಜೂರು: ಆಂಜನೇಯ

Update: 2017-11-20 17:09 GMT

ಬೆಳಗಾವಿ, ನ.20: 2013-14 ರಿಂದ 2016-17ರವರೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಅಲೆಮಾರಿ, ಅರೆಅಲೆಮಾರಿ ಸಮುದಾಯದವರಿಗೆ 9545 ಮನೆಗಳನ್ನು ಮಂಜೂರು ಮಾಡಲಾಗಿದೆ ಎಂದು ಸಮಾಜಕಲ್ಯಾಣ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ.

ಸೋಮವಾರ ವಿಧಾನಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯೆ ಜಯಮ್ಮ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 2013-14ರಲ್ಲಿ 17 ಜಿಲ್ಲೆಗಳಿಗೆ 1991 ಮನೆಗಳು ಮಂಜೂರಾಗಿದ್ದು, 1380 ಮನೆಗಳು ಪೂರ್ಣಗೊಂಡಿವೆ. 2014-15ರಲ್ಲಿ 10 ಜಿಲ್ಲೆಗಳಿಗೆ 5888 ಮನೆಗಳು ಮಂಜೂರಾಗಿದ್ದು, 3695 ಮನೆಗಳು ಪೂರ್ಣಗೊಂಡಿವೆ. 2016-17ರಲ್ಲಿ 14 ಜಿಲ್ಲೆಗಳಿಗೆ 1666 ಮನೆಗಳು ಮಂಜೂರಾಗಿದ್ದು, ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದರು.

2017-18ನೆ ಸಾಲಿಗೆ 833 ಗೊಲ್ಲ ಸಮುದಾಯದವರಿಗೆ ಹಾಗೂ 833 ಇತರೆ ಸಮುದಾಯದವರಿಗೆ ಒಟ್ಟು 1666 ಮನೆಗಳ ಗುರಿಯನ್ನು ಪ್ರಸಕ್ತ ಸಾಲಿನ ಮೇ 29ರಂದು ರಾಜ್ಯ ಅಲೆಮಾರಿ, ಅರೆಅಲೆಮಾರಿ ಅಭಿವೃದ್ಧಿ ಮಂಡಳಿ ಸಭೆಯಲ್ಲಿ ನಿಗದಿಪಡಿಸಿದ್ದು, ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈವರೆಗೆ ಮಂಜೂರಾದ ಮನೆಗಳಲ್ಲಿ ಪೈಕಿ 5075 ಮನೆಗಳ ಕಾಮಗಾರಿ ಪೂರ್ಣಗೊಂಡಿದೆ ಎಂದು ಹೇಳಿದರು.

ಗೊಲ್ಲರಹಟ್ಟಿಗಳು ಇಂದಿಗೂ ನಾಗರಿಕ ಸೌಲಭ್ಯಗಳು ಹಾಗೂ ಅಭಿವೃದ್ಧಿಯಿಂದ ವಂಚಿತವಾಗಿವೆ. ಗುಡಿಸಲು ಮುಕ್ತ ಗೊಲ್ಲರಹಟ್ಟಿಯನ್ನು ಸಾಕಾರಗೊಳಿಸಲು ರಾಜ್ಯ ಸರಕಾರವು ಬೇಡಿಕೆ ಇರುವೆಡೆ ಮನೆಗಳಿಗೆ ವಿಶೇಷ ಪ್ಯಾಕೇಜ್ ನೀಡಬೇಕು. ಚಿತ್ರದುರ್ಗ ಹಾಗೂ ತುಮಕೂರು ಭಾಗದಲ್ಲಿ ಹೆಚ್ಚು ಮನೆಗಳ ಅಗತ್ಯವಿದೆ ಎಂದು ಜಯಮ್ಮ ಹೇಳಿದರು.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಆಂಜನೇಯ, ಯಾವ ಜಿಲ್ಲೆಗೂ ಅನ್ಯಾಯವಾಗದಂತೆ ಅಗತ್ಯವಿರುವೆಡೆ ಹೆಚ್ಚುವರಿ ಮನೆಗಳನ್ನು ಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News