ಸಾರಿಗೆ ಬಸ್ ಗಳನ್ನು ಬಳಸಿ ಜಾಗತಿಕ ತಾಪಮಾನ ಇಳಿಸಿ: ರೇವಣ್ಣ

Update: 2017-11-20 17:12 GMT

ಬೆಳಗಾವಿ, ನ.20: ಸಾರ್ವಜನಿಕರು ಪ್ರಯಾಣಕ್ಕಾಗಿ ಸಾರಿಗೆ ಬಸ್‍ಗಳನ್ನು ಹೆಚ್ಚು ಹೆಚ್ಚು ಬಳಸಿ ಜಾಗತಿಕ ತಾಪಮಾನ ತಡೆಗಟ್ಟಲು ಸಹಕರಿಸಬೇಕೆಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಮನವಿ ಮಾಡಿದ್ದಾರೆ.

ಸೋಮವಾರ ನಗರದಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಬಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಾರ್ವಜನಿಕರು ಸಾರಿಗೆ ಬಸ್‍ಗಳನ್ನು ಬಳಸುವುದರಿಂದ ಇಂಧನ ಉಳಿತಾಯದೊಂದಿಗೆ ಹೆಚ್ಚುತ್ತಿರುವ ಅಪಘಾತಗಳ ಪ್ರಮಾಣವನ್ನು ಕಡಿಮೆಗೊಳಿಸಬಹುದು. ಒಂದು ಬಸ್ 60 ದ್ವಿಚಕ್ರ ವಾಹನಗಳಿಗೆ ಸರಿಸಮವಾಗಿದೆ ಎಂದು ತಿಳಿಸಿದರು.

ಸಾಮಾಜಿಕ ಸದುದ್ದೇಶ ಹೊಂದಿರುವ ಬಸ್ ದಿನವನ್ನು ಎಲ್ಲ ಸಾರ್ವಜನಿಕರು, ವ್ಯಾಪಾರಸ್ಥರು, ಶಾಲಾ, ಕಾಲೇಜು ವಿದ್ಯಾರ್ಥಿಗಳು ಹಾಗೂ ಅಧಿಕಾರಿಗಳು ಸೇರಿದಂತೆ ಸಮಾಜದ ಎಲ್ಲ ವರ್ಗದವರು ಬೆಂಬಲಿಸುವ ಮೂಲಕ ಆರೋಗ್ಯಯುತ ನಗರ ನಿರ್ಮಾಣಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ರಾಜ್ಯದಲ್ಲಿಯೇ ಬೆಳಗಾವಿ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಜಿಲ್ಲೆಯಾಗಿದ್ದು, ಜನಂಖ್ಯೆಗೆ ಅನುಗುಣವಾಗಿ ಸಾರಿಗೆ ವ್ಯವಸ್ಥೆ ಮಾಡಲಾಗುವುದು. ಸಾರ್ವಜನಿಕರು ಬಸ್‍ಗಳಲ್ಲಿ ಪ್ರಯಾಣಿಸುವಂತೆ ಪ್ರೋತ್ಸಾಹಿಸಲು ನಗರ ಹಾಗೂ ಉಪನಗರ ವ್ಯಾಪ್ತಿಯಲ್ಲಿ ದೈನಂದಿನ  ಬಸ್‍ಪಾಸ್ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ದರವನ್ನು 50 ರಿಂದ 40 ರೂ.ಗಳಿಗೆ ಕಡಿತಗೊಳಿಸಲಾಗಿದೆ ಎಂದರು.

ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿ, ಸಾರಿಗೆಗಾಗಿ ಬಸ್‍ಗಳನ್ನು ಬಳಸುವುದರಿಂದ ಹಲವಾರು ಉಪಯೋಗಗಳು ಇದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಿದರು.

ಕಾರ್ಯಕ್ರಮದಲ್ಲಿ ಸರಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ, ನಾಗನೂರು ಮಠದ ಶ್ರೀ ಸಿದ್ಧರಾಮ ಮಹಾಸ್ವಾಮಿ, ಕಾರಂಜಿಮಠದ ಶ್ರೀ ಗುರುಸಿದ್ಧಸ್ವಾಮಿ, ಸ್ವಾತಂತ್ರ್ಯ ಹೋರಾಟಗಾರ ರಂಗಪ್ಪ ಮಾಳಗಿ, ವಾಯುವ್ಯ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪಾಂಡುರಂಗ ನಾಯಕ, ಎನ್ ಡಬ್ಲ್ಯು ಕೆಎಸ್ಸಾರ್ಟಿಸಿ ಅಧ್ಯಕ್ಷ ಸದಾನಂದ ಡಂಗನವರ, ಬಿಎಂಟಿಸಿ ಅಧ್ಯಕ್ಷ ಎಂ.ನಾಗರಾಜ, ವಿಭಾಗ ನಿಯಂತ್ರಣ ಅಧಿಕಾರಿ ಗಣೇಶ ರಾಠೋಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News