ತಾನು ಏನು ಮಾತನಾಡುತ್ತಿದ್ದೇನೆಂದು ಬುದ್ಧಿಮಾಂದ್ಯ ಈಶ್ವರಪ್ಪಗೆ ಗೊತ್ತಿಲ್ಲ: ಸಿಎಂ ಸಿದ್ದರಾಮಯ್ಯ

Update: 2017-11-20 17:38 GMT

ನಾಗಮಂಗಲ, ನ.20: ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್ ಯಾವುದೇ ಯಾತ್ರೆ ಮಾಡಿದರೂ ಜನಪರ ಆಡಳಿತ ನೀಡಿರುವ ಕಾಂಗ್ರೆಸ್ ಮತ್ತೆ ಅಧಿಕಾರಿಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಪಟ್ಟಣದಲ್ಲಿ ಕನಕ ಭವನ ನಿರ್ಮಾಣಕ್ಕೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಿ ಬಳಿಕ ಮಾತನಾಡಿದ ಅವರು, ಅಹಿಂದ ವರ್ಗದವರೊಬ್ಬರು ಮುಖ್ಯಮಂತ್ರಿಯಾಗಿರುವುದನ್ನು ಸಹಿಸಲಾಗದೆ ಬಿಜೆಪಿಯವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ತಿಪ್ಪರಲಾಗ ಹಾಕಿದರೂ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದು ವ್ಯಂಗ್ಯವಾಡಿದರು.

ಪರಿವರ್ತನಾ ಯಾತ್ರೆ, ವಿಕಾಸ ಯಾತ್ರೆ ಕಾಂಗ್ರೆಸ್ ತೆಗೆಳುವುದಕ್ಕೆ ಮಾತ್ರ ಸೀಮಿತವಾಗಿವೆ ಎಂಬುದು ಜನರಿಗೆ ಗೊತ್ತು. ಮಹಿಳೆ, ಮಕ್ಕಳು, ರೈತರು ಸೇರಿದಂತೆ ಎಲ್ಲ ವರ್ಗದ ಹಿತಕ್ಕಾಗಿ ಯೋಜನೆ ಕಾರ್ಯಗತಗೊಳಿಸಿರುವ ಕಾಂಗ್ರೆಸ್‍ನ್ನು ಮತ್ತೆ ಜನತೆ ರಾಜ್ಯದಲ್ಲಿ ಅಧಿಕಾರಕ್ಕೆ ತರಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ನಾನು ಕಮೀಷನ್ ತೆಗೆದುಕೊಳ್ಳುತ್ತೇನೆಂದು ಜೈಲಿಗೆ ಹೋಗಿ ಬಂದ ಬಿಜೆಪಿ ಗಿರಾಕಿಗಳು ಹೇಳುತ್ತಿದ್ದಾರೆ. ಅದನ್ನು ಸಾಬೀತುಪಡಿಸಿದರೆ ಸಾರ್ವಜನಿಕ ಜೀವನದಿಂದ ನಿವೃತ್ತಿಯಾಗುತ್ತೇನೆಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ತಾನು ಏನು ಮಾತನಾಡುತ್ತಿದ್ದೇನೆಂದು ಬುದ್ಧಿಮಾಂದ್ಯ ಈಶ್ವರಪ್ಪಗೆ ಗೊತ್ತಿಲ್ಲ. ಇನ್ನು ಕೇಂದ್ರ ಸಚಿವರ ಅನಂತಕುಮಾರ ಹೆಗಡೆಗೆ ಸಂಸ್ಕೃತಿಯೇ ಇಲ್ಲ. ಆದ್ದರಿಂದ ಅವರ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿಲ್ಲ ಎಂದು ಟೀಕಿಸಿದರು.

ನಾನು ಜನತಾ ದಳದಲ್ಲಿದ್ದಾಗ ಎರಡು ಬಾರಿ ಮುಖ್ಯಮಂತ್ರಿ ಅವಕಾಶ ಬಂದಿತ್ತು. ಆದರೆ, ಆಗಲು ಬಿಡಲಿಲ್ಲ. ಕೊನೆಗೆ ನನ್ನನ್ನು ಪಕ್ಷದಿಂದಲೇ ತೆಗೆದು ಹಾಕಿದರು. ನಾನು ಕಾಂಗ್ರೆಸ್ ಸೇರಿಕೊಳ್ಳದಿದ್ದರೆ ಮುಖ್ಯಮಂತ್ರಿ ಆಗುತ್ತಿರಲಿಲ್ಲ ಎಂದವರು, ಸರಕಾರ ಎಲ್ಲ ವರ್ಗದ ಜನರ ಹಿತವನ್ನು ಬಯಸಿ ಅನೇಕ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರುತ್ತಿದ್ದು, ಬರುವ ಜನವರಿಯಿಂದ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲಾಗುವುದು ಎಂದರು.

ಚಲುವರಾಯಸ್ವಾಮಿ, ಜಮೀರ್ ಅಹ್ಮದ್, ಬಾಲಕೃಷ್ಣ ಸೇರಿದಂತೆ ಜೆಡಿಎಸ್‍ನಿಂದ ಅಮಾನತಾಗಿರುವ 7 ಶಾಸಕರನ್ನೂ ಜವರಿಯಲ್ಲಿ ಕಾಂಗ್ರೆಸ್‍ಗೆ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ಇದೇ ವೇಳೆ ತಿಳಿಸಿದರು.

ನಾಗಮಂಗಲ ನನಗೆ ತವರು ಕ್ಷೇತ್ರದಷ್ಟೇ ಪ್ರೀತಿಯುಳ್ಳದ್ದು, ಇಲ್ಲಿನ ಜನರ ಪ್ರೀತಿ ವಿಶ್ವಾಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಮುಂದಿನ ಚುನಾವಣೆಗೆ ಚಲುವರಾಯಸ್ವಾಮಿ ಪರವಾಗಿ ಪ್ರಚಾರಕ್ಕೆ ಆಗಮಿಸುತ್ತೇನೆ ಎಂದರು.

ನಾಗಮಂಗಲದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕನಕ ಭವನಕ್ಕೆ ಈಗಾಗಲೇ 50 ಲಕ್ಷ ರೂ. ಬಿಡುಗಡೆ ಮಾಡಿರುವುದಾಗಿ ಘೋಷಿಸಿದ ಅವರು, ಭವನವನ್ನು ಅಚ್ಚುಕಟ್ಟಾಗಿ ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸುರೇಶ್‍ಗೌಡರಿಗೆ ಚಾಟಿ ಬೀಸಿದ ಸಿಎಂ: ನಾನೇನು ಸುರೇಶ್‍ಗೌಡರನ್ನು ಕಾಂಗ್ರೆಸ್‍ನಿಂದ ತಳ್ಳಿರಲಿಲ್ಲ. ಅವರಿಗೆ ಅನುಕೂಕ್ಕೆ ತಕ್ಕಂತೆ ಜೆಡಿಎಸ್ ಸೇರಿಕೊಂಡಿದ್ದಾರೆ. ಆದರೆ, ಅವರನ್ನು ಗೆಲ್ಲಿಸಲು ಎರಡು ಬಾರಿ ಚುನಾವಣಾ ಪ್ರಚಾರ ಮಾಡಿದ್ದನ್ನು ಮರೆಯಬಾರದು ಎಂದು ಪಕ್ಕದಲ್ಲೇ ಇದ್ದ ಸುರೇಶ್‍ಗೌಡರಿಗೆ ಸಿದ್ದರಾಮಯ್ಯ ಚಾಟಿ ಬೀಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಶಾಸಕ ಎನ್.ಚಲುವರಾಯಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ, ಜೆಡಿಎಸ್ ಬಂಡಾಯ ಶಾಸಕರಾದ ಜಮೀರ್ ಅಹ್ಮದ್ ಖಾನ್, ರಮೇಶ್ ಬಂಡಿಸಿದ್ದೇಗೌಡ, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಕಲ್ಪನಾ ಸಿದ್ದರಾಜು, ಎಚ್.ಬಿ ರಾಮು, ಕೆಪಿಸಿಸಿ ಸದಸ್ಯ ಮಂಜೇಗೌಡ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಬಸವೇಗೌಡ, ಗಿಣಿ ಮಂಜು, ಜಿಲ್ಲಾಧಿಕಾರಿ ಎನ್.ಮಂಜುಶ್ರೀ, ಜಿಪಂ ಸಿಇಒ ಬಿ.ಶರತ್, ಇತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News