ಬಹುಗ್ರಾಮ ಶುದ್ಧ ಕುಡಿಯುವ ನೀರು ಕಾಮಗಾರಿಗೆ ಸಿಎಂ ಚಾಲನೆ

Update: 2017-11-20 17:56 GMT

ನಾಗಮಂಗಲ, ನ.20: ತಾಲೂಕಿನ ಆದಿಚುಂಚನಗಿರಿ ಸೇರಿದಂತೆ ಇತರೆ 128 ಗ್ರಾಮಗಳಿಗೆ ನೀರು ನೀಡುವ 154.62 ಕೋಟಿ ರೂ. ವೆಚ್ಚದ ಬಹುಗ್ರಾಮ ಶುದ್ಧ ಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಬೆಳ್ಳೂರಿನಲ್ಲಿ ಚಾಲನೆ ನೀಡಿದ್ದಾರೆ.

ನಂತರ ಮಾತನಾಡಿದ ಅವರು, ಬಹುವರ್ಷಗಳಿಂದ ನೆನೆಗುದಿಗೆ ಬಿದ್ದಿದ ಮಾರ್ಕೋನಹಳ್ಳಿ ಜಲಾಶಯದಿಂದ ಆದಿಚುಂಚನಗಿರಿ ಮಠ ಮತ್ತು ತಾಲೂಕಿನ 128 ಹಳ್ಳಿಗಳಿಗೆ ನೀರು ಸರಬರಾಜು ಮಾಡುವ ಬಹು ಗ್ರಾಮ ಕುಡಿಯುವ ಯೋಜನೆ ಕಾಮಗಾರಿ ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

ರಾಜ್ಯದ ಎಲ್ಲ ಜನರಿಗೂ ಶುದ್ಧ ಕುಡಿಯುವ ನೀರು ನೀಡುವುದು ಸರಕಾರದ ಜವಾಬ್ಧಾರಿಯಾಗಿದ್ದು, 10,500 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಾಣ ಮಾಡಲಾಗಿದೆ. ಇದರಿಂದ ಜನರ ಆರೋಗ್ಯದಲ್ಲಿ ಸುಧಾರಣೆಯಾಗಿದೆ ಎಂದರು.

ಚುನಾವಣೆ ವೇಳೆ ಪ್ರಣಾಳಿಕೆಯಲ್ಲಿ ನೀಡಿದ್ದ 160 ಅಂಶಗಳ ಪೈಕಿ 155 ಅಂಶಗಳನ್ನು ಈಡೇರಿಸಲಾಗಿದೆ. ರಾಜ್ಯದ ಯಾವುದೇ ವ್ಯಕ್ತಿಯೂ ಹಸಿವಿನಿಂದ ನರಳಬಾರದು ಎಂಬ ಆಶಯದಿಂದ ಪ್ರತಿಯೊಂದು ಬಡ ಕುಟುಂಬಕ್ಕೂ ಉಚಿತವಾಗಿ ಅಕ್ಕಿ ನೀಡುವ ಕ್ರಾಂತಿಕಾರಕ ಅನ್ನ ಯೋಜನೆ ಯಶಸ್ವಿಯಾಗಿ ಜಾರಿಗೊಂಡಿದೆ ಎಂದು ಅವರು ಹೇಳಿದರು.

ಸಂಕಷ್ಟದಲ್ಲಿರುವ ರೈತರಿಗಾಗಿ ಸಹಕಾರ ಸಂಘಗಳ 50 ಸಾವಿರವರೆಗಿನ ಅಲ್ಪಾವಧಿ ಬೆಳೆ ಸಾಲಮನ್ನಾ ಮಾಡಿದ್ದು, ಮಂಡ್ಯ ಜಿಲ್ಲೆಯಲ್ಲಿ 1.16 ಲಕ್ಷ ರೈತರ 429 ಕೋಟಿ ಬೆಳೆ ಸಾಲಮನ್ನಾ ಮಾಡಲಾಗಿದೆ. ರಾಜ್ಯದಲ್ಲಿ 1.70 ಲಕ್ಷ  ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಲಾಗಿದೆ. ರಾಜ್ಯದಲ್ಲಿ 1.08 ಕೋಟಿ ಜನರಿಗೆ ಬಿಪಿಎಲ್ ಕಾರ್ಡ್ ನೀಡಲಾಗಿದೆ ಎಂದು ತಿಳಿಸಿದರು.

ಸರ್ವಪಕ್ಷ ನಿಯೋಗ ತೆರಳಿ ಮನವಿ ಮಾಡಿದರೂ ಪ್ರಧಾನಿ ನರೇಂದ್ರ ಮೋದಿ ರೈತರ ರಾಷ್ಟ್ರೀಕೃತ ಬ್ಯಾಂಕ್‍ಗಳ ಸಾಲಮನ್ನಾ ಮಾಡಲಿಲ್ಲ. ರೈತರ ಸಾಲಮನ್ನಾ ಮಾಡಲು ಸಾದ್ಯವಿಲ್ಲ, ನಮ್ಮಲ್ಲಿ ನೋಟ್ ಪ್ರಿಂಟ್ ಮಾಡುವ ಮಿಷನ್ ಇಲ್ಲ ಎಂದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ವಿಧಾನಸಭೆಯಲ್ಲಿ ಹೇಳಿದ ಮಾತು ದಾಖಲೆಯಾಗಿದೆ. ಇದು ಬಿಜೆಪಿ ರೈತ ವಿರೋಧಿ ನೀತಿಗೆ ಉದಾಹರಣೆಯಾಗಿದೆ ಎಂದು ಅವರು ಆರೋಪಿಸಿದರು.

ನೀರಾವರಿ ಯೋಜನೆಗಾಗಿ ಹಿಂದಿನ ಸರಕಾರಗಳು 18 ಸಾವಿರ ಕೋಟಿ ರೂ. ಹಣ ಖರ್ಚು ಮಾಡಿದ್ದರೆ, ನಮ್ಮ ಕಾಂಗ್ರೇಸ್ ಸರಕಾರ ಈಗಾಗಲೆ 45 ಸಾವಿರ ಕೋಟಿಯಷ್ಟು ದೊಡ್ಡ ಮೊತ್ತದಲ್ಲಿ ನೀರಾವರಿಗೆ ಖರ್ಚು ಮಾಡಿದೆ. ಸರಕಾರದ ಜನಪರ ಯೋಜನೆಗಳು ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರುತ್ತವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಆದಿಚುಂಚನಗಿರಿ ಮಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ, ಸ್ಥಳೀಯ ಶಾಸಕ ಚಲುವರಾಯಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಜಮೀರ್ ಆಹ್ಮದ್ ಖಾನ್, ರಮೇಶ ಬಂಡಿಸಿದ್ದೇಗೌಡ, ಮಾಜಿ ಶಾಸಕರಾದ ಕಲ್ಪನ ಸಿದ್ದರಾಜು, ಕೆ.ಬಿ.ಚಂದ್ರಶೇಖರ್, ಎಚ್‍ಬಿ ರಾಮು, ಬಿ.ರಾಮಕೃಷ್ಣ, ಜಿಪಂ ಸದಸ್ಯ ಮುತ್ತಣ್ಣ, ತಾಪಂ ಅಧ್ಯಕ್ಷ ನವೀನ್‍ಕುಮಾರ್, ಇತರ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News