ಚಾಮರಾಜನಗರ ಜಿಲ್ಲೆಯಲ್ಲಿ 1414 ಆನೆಗಳು ಇರುವಿಕೆಯ ಬಗ್ಗೆ ಅಂದಾಜಿಸಲಾಗಿದೆ: ರಮಾನಾಥ ರೈ

Update: 2017-11-20 18:13 GMT

ಹನೂರು, ನ.20: ಇತ್ತೀಚೆಗೆ ಇಲಾಖಾವತಿಯಿಂದ ನಡೆಸಿದ ಆನೆಗಣತಿ ಮತ್ತು ಹುಲಿಗಣತಿ ಪ್ರಕಾರ ಚಾಮರಾಜನಗರ ಜಿಲ್ಲೆಯಲ್ಲಿ 1414 ಆನೆಗಳು ಮತ್ತು 66-78 ಹುಲಿಗಳು ಇರುವಿಕೆಯ ಬಗ್ಗೆ ಅಂದಾಜಿಸಲಾಗಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ರಮಾನಾಥ ರೈ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ಶಾಸಕ ನರೇಂದ್ರರ ಪ್ರಶ್ನೆಗೆ ಉತ್ತರಿಸಿದ ಅವರು, 2014-15ನೆ ಸಾಲಿನಲ್ಲಿ ಚಾಮರಾಜನಗರ ಜಿಲ್ಲಾ ವ್ಯಾಪ್ತಿಯಲ್ಲಿ ಸ್ವಾಭಾವಿಕವಾಗಿ 45 ಆನೆ, ವಿದ್ಯುತ್ ಸ್ಪರ್ಶದಿಂದ 02 ಆನೆ, 2015-16ನೆ ಸಾಲಿನಲ್ಲಿ 26 ಸ್ವಾಭಾವಿಕವಾಗಿ 01 ಆನೆ ವಿದ್ಯುತ್ ಸ್ಪರ್ಶದಿಂದ, 2016-17ನೆ ಸಾಲಿನಲ್ಲಿ 32 ಆನೆ ಸ್ವಾಭಾವಿಕ ಆನೆಗಳು ಸಾವನ್ನಪ್ಪಿವೆ. 2014-15 ಮತ್ತು 2015-16ನೆ ಸಾಲಿನಲ್ಲಿ ಪ್ರತಿವರ್ಷ ತಲಾ 2 ಹುಲಿಗಳು ಸಾವನ್ನಪ್ಪಿವೆ ಎಂದರು.

ಇತ್ತೀಚಿನ ಗಣತಿ ಪ್ರಕಾರ 1414 ಆನೆಗಳು ಮತ್ತು 66-78 ಹುಲಿಗಳು ಜಿಲ್ಲಾ ವ್ಯಾಪ್ತಿಯಲ್ಲಿವೆ.  ಹನೂರು ಕ್ಷೇತ್ರ ವ್ಯಾಪ್ತಿಯ ಗ್ರಾಮಗಳು ಮತ್ತು ಜಮೀನುಗಳಿಗೆ ಆನೆಗಳು ದಾಳಿ ಮಾಡದಂತೆ ತಡೆಯಲು ಮಲೆ ಮಹದೇಶ್ವರ ವನ್ಯಜೀವಿ ವಲಯದಲ್ಲಿ ಈಗಾಗಲೇ 84 ಕಿ/ಮೀ ಸೋಲಾರ್ ಬೇಲಿಯನ್ನು ನಿರ್ಮಿಸಲಾಗಿದ್ದು, 135 ಕಿ.ಮೀ ಆನೆ ಕಂದಕವನ್ನು ನಿರ್ಮಾಣ ಮಾಡಲಾಗಿದೆ. ಈ 135 ಕಿ.ಮೀ ವ್ಯಾಪ್ತಿಯಲ್ಲಿ ಪಿ.ಜಿ.ಪಾಖ್ಯ ವನ್ಯಜೀವಿ ವಲಯದ 18.57ಕಿ.ಮೀ ಆನೆ ಕಂದಕವನ್ನು ಉನ್ನತೀಕರಿಸಲಾಗಿದ್ದು 3*3*1.5ಮೀ ಅಳತೆಯ ಸ್ಪೈಕ್ ಬ್ಯಾರಿಕೇಡ್ (ಮುಂಭಾಗದಲ್ಲಿ ಚೂಪಾಗಿರುವ ಕಬ್ಬಿಣದ ಸಲಾಖೆ) ಅಳವಡಿಸುವುದರ ಜೊತೆ ಆನೆ ಓಡಿಸುವ ಶಿಬಿರಗಳನ್ನೂ ನಿರ್ಮಿಸಿ ಆನೆಗಳ ಹಾವಳಿ ತಡೆಯಲಾಗುತ್ತಿದೆ ಎಂದರು. 

ಬೆಳೆ ನಾಶಕ್ಕೆ ಸರ್ಕಾರ ನಿಗದಿಪಡಿಸಿರುವ ಪರಿಹಾರದ ಮೊತ್ತವೆಷ್ಟು:  ಕಾಡುಹಂದಿಗಳ ದಾಳಿಯಿಂದಾಗಿ ಬೆಳೆ ನಾಶವಾಗಿರುವ ರೈತ ಕುಟುಂಬಗಳಿಗೆ ಸರ್ಕಾರ ಯಾವ ಮಾನದಂಡದಡಿ ಪರಿಹಾರ ನೀಡುತ್ತಿದೆ ಎಂಬ ಶಾಸಕ ನರೇಂದ್ರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅರಣ್ಯ ಸಚಿವ ರಮಾನಾಥ ರೈ ಸರ್ಕಾರದ ಆದೇಶದ ಪ್ರಕಾರ 7.500ರೂ ವರೆಗಿನ ಬೆಳೆ ನಷ್ಟಕ್ಕೆ ಸಂಪೂರ್ಣ ಹಣ, 7,500ರೂನಿಂದ 35,000ದ ವರೆಗಿನ ಬೆಳೆ ನಷ್ಟಕ್ಕೆ ಶೇ.50 ಪರಿಹಾರ ಅಥವಾ ಗರಿಷ್ಠ 21,250ರೂ ಮತ್ತು 35,000ರೂ ಗಳಿಗಿಂದ ಹೆಚ್ಚಿನ ಹಾನಿ ಸಂಭವಿಸಿದ ಬೆಳೆ ನಷ್ಟಕ್ಕೆ ಗರಿಷ್ಠ 50,000 ರೂ ಅಥವಾ ಶೇ.30 ರಷ್ಟು ಪರಿಹಾರ ಒದಗಿಸಲಾಗುತ್ತಿದೆ ಎಂದು ಹೇಳಿದರು.

ಕ್ಷೇತ್ರ ವ್ಯಾಪ್ತಿಯ ಸತ್ತೇಗಾಲ ಗ್ರಾಮದ ಸ.174ರ ವಸತಿ ಮತ್ತು 2874ಎಕರೆ ಜಮೀನನ್ನು ಡೀಮ್ಡ್ ಅರಣ್ಯ ಪ್ರದೇಶದ ವ್ಯಾಪ್ತಿಗೆ ಸೇರಿಸಲು ಅರಣ್ಯ ಇಲಾಖೆ ಅಭಿಪ್ರಾಯಪಟ್ಟಿದೆ. ಆದರೆ ಈ ಪ್ರದೇಶದಲ್ಲಿನ ಜಮೀನು ಮತ್ತು ವಸತಿ ಪ್ರದೇಶವನ್ನು ಕಂದಾಯ ಇಲಾಖೆಯಲ್ಲಿ ಮುಂದುವರೆಸಲು ಅರಣ್ಯ ಇಲಾಖೆ ಒಪ್ಪಿಗೆ ನೀಡಿಲ್ಲ. ಈ ಬಗ್ಗೆ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂಬ ಶಾಸಕ ನರೇಂದ್ರ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಈ ಸಂಬಂಧ 2016ರ ಡಿ.5 ಮತ್ತು ಡಿ.14ರಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದ್ದು, ಜಿಲ್ಲಾಧಿಕಾರಿಗಳು ಪ್ರಸ್ತಾವನೆಯನ್ನೂ ಸಲ್ಲಿಸಿದ್ದಾರೆ. ಈ ಸಭೆಯ ನಡಾವಳಿಯಂತೆ ಸ.174ರ 2928 ಎಕರೆ ಪ್ರದೇಶವನ್ನು ಡೀಮ್ಡ್ ಅರಣ್ಯ ಪ್ರದೇಶದ ವ್ಯಾಪ್ತಿಯಿಂದ ಕೈಬಿಡಲು ತೀರ್ಮಾನ ಕೈಗೊಳ್ಳಲಾಗಿದೆ. ಅರಣ್ಯ ಇಲಾಖೆಯಿಂದ ಆದೇಶ ಸ್ವೀಕೃತಿಯಾದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಉತ್ತರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News