ಬ್ಯಾಂಕ್‌ಗಳಲ್ಲಿ ಕನ್ನಡ ಅನುಷ್ಠಾನಕ್ಕಾಗಿ ಕೇಂದ್ರ ಸಚಿವರಿಗೆ ಪತ್ರ

Update: 2017-11-20 18:15 GMT

ಬೆಂಗಳೂರು, ನ.20: ರಾಜ್ಯದ ಗ್ರಾಮೀಣ ಬ್ಯಾಂಕ್‌ಗಳ ವ್ಯವಹಾರದಲ್ಲಿ ಕನ್ನಡ ಭಾಷೆ ಬಳಕೆಯ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವಂತೆ ಒತ್ತಾಯಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಅವರು ನ.18ರಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೆಟ್ಲಿ ಅವರಿಗೆ ಪತ್ರ ಬರೆದಿದ್ದಾರೆ.

ನ.7ರಂದು ಕೇಂದ್ರ ಸಚಿವರನ್ನು ನಿಯೋಗದೊಂದಿಗೆ ಭೇಟಿಯಾಗಿ ಬ್ಯಾಂಕ್‌ಗಳಲ್ಲಿ ಕನ್ನಡ ಭಾಷೆಯ ಅನುಷ್ಠಾನ ಹಾಗೂ ಸ್ಥಳೀಯರಿಗೆ ಉದ್ಯೋಗ ಅವಕಾಶ ನೀಡುವ ಕುರಿತು ಗಮನ ಸೆಳೆದಿದ್ದೆವು. ನಮ್ಮ ಬೇಡಿಕೆಗಳ ಈಡೇರಿಕೆಗೆ ಈವರೆಗೂ ಕ್ರಮ ಕೈಗೊಳ್ಳದ ಕಾರಣ ಸಚಿವರಿಗೆ ಮತ್ತೊಮ್ಮೆ ಗಮನಕ್ಕೆ ತರಲು ಪತ್ರವನ್ನು ಬರೆದಿದ್ದೇನೆ ಎಂದು ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಅವರು ‘ವಾರ್ತಾ ಭಾರತಿ’ಗೆ ತಿಳಿಸಿದರು.

ಬಹುತೇಕ ಬ್ಯಾಂಕ್‌ಗಳ ರಸೀದಿ, ನಮೂನೆ ಹಾಗೂ ನೋಟಿಸ್‌ಗಳಲ್ಲಿ ಈಗಲೂ ಇಂಗ್ಲಿಷ್ ಮತ್ತು ಹಿಂದಿ ಬಳಸುತ್ತಿದ್ದಾರೆ. ಗ್ರಾಮೀಣ ಬ್ಯಾಂಕ್‌ಗಳಲ್ಲಿ ಕನ್ನಡದ ಬಳಕೆ ಕಡ್ಡಾಯಗೊಳಿಸಬೇಕು. 2014ರ ಬ್ಯಾಂಕ್ ಸಿಬ್ಬಂದಿ ನೇಮಕಾತಿ ನಿಯಮಗಳ ಅನ್ವಯ 10ನೆ ತರಗತಿವರೆಗೂ ಕನ್ನಡ ಮಾಧ್ಯಮದಲ್ಲಿ ಓದಿದ ಅಭ್ಯರ್ಥಿಗಳಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು.

ಕನ್ನಡದ ಅನುಷ್ಠಾನದಿಂದ ಒಕ್ಕೂಟ ವ್ಯವಸ್ಥೆಯಲ್ಲಿ ಸಾಮಾಜಿಕ ಮತ್ತು ಭಾಷಾ ಸಮತೋಲನ ಸಾಧ್ಯವಾಗಲಿದೆ. ಹಾಗಾಗಿ ಕನ್ನಡ ಪರ ಸಂಘಟನೆಗಳು ಭಾಷೆ ಬಳಕೆಯ ಕುರಿತು ರಾಜ್ಯದ ಹಲವೆಡೆ ಈಗಾಗಲೇ ಸತ್ಯಾಗ್ರಹಗಳನ್ನು ನಡೆಸುತ್ತಿದ್ದಾರೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಒಕ್ಕೂಟ ವ್ಯವಸ್ಥೆಯ ತತ್ವಗಳನ್ನುಉಳಿಸಲು ಹಾಗೂ ಸ್ಥಳೀಯ ಯುವಜನರಿಗೆ ನೆರವಾಗಲು ಸ್ಥಳೀಯ ಭಾಷೆ ಬಲ್ಲವರನ್ನೆ ಬ್ಯಾಂಕ್‌ಗಳಲ್ಲಿ ನೇಮಕ ಮಾಡಬೇಕು. ಇದರಿಂದ ಲಕ್ಷಾಂತರ ಸ್ಥಳೀಯ ಯುವಜನರು ಉದ್ಯೋಗಸ್ಥರಾಗುತ್ತಾರೆ. ಬ್ಯಾಂಕ್‌ನ ವ್ಯವಹಾರವು ಸುಸೂತ್ರವಾಗಿ ನಡೆಯುತ್ತವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News