ಕೇಂದ್ರ ಸರಕಾರ ರಾಷ್ಟ್ರೀಯ ನೀತಿ ರೂಪಿಸಿದರೆ ಬೆಂಬಲ: ಸಿಎಂ ಸಿದ್ದರಾಮಯ್ಯ
ಬೆಳಗಾವಿ, ನ.21: ದೇಶದಲ್ಲಿ ಸಂಪೂರ್ಣ ಮದ್ಯಪಾನ ನಿಷೇಧಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರ ರಾಷ್ಟ್ರೀಯ ನೀತಿ ರೂಪಿಸಿದರೆ ಕರ್ನಾಟಕ ಸರಕಾರ ಅಗತ್ಯ ಬೆಂಬಲ ನೀಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಸಿ.ಟಿ.ರವಿ ಕೇಳಿದ ಪ್ರಶ್ನೆಯೊಂದಕ್ಕೆ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಉತ್ತರಿಸಿದ ಬಳಿಕ ಮಧ್ಯ ಪ್ರವೇಶಿಸಿ ಮಾತನಾಡಿದ ಅವರು, ಮದ್ಯಪಾನ ನಿಷೇಧಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಸೇರಿದಂತೆ ಇನ್ನಿತರ ರಾಜ್ಯಗಳು ಮದ್ಯಪಾನ ನಿಷೇಧ ಜಾರಿಗೆ ತಂದರೂ ಅದು ಯಶಸ್ವಿಯಾಗಿಲ್ಲ. ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪ ಅವರ ಕಾಲದಲ್ಲಿ ಕರ್ನಾಟಕ ರಾಜ್ಯದಲ್ಲಿ ಈ ಬಗ್ಗೆ ಪ್ರಯತ್ನಗಳು ನಡೆದರೂ ಅನುಷ್ಠಾನ ಸಾಧ್ಯವಾಗಿಲ್ಲ. ದೇಶದಲ್ಲಿ ಮದ್ಯಪಾನ ನಿಷೇಧ ಜಾರಿಗೆ ಬಂದರೆ ಮಾತ್ರ ಸಮರ್ಪಕ ಅನುಷ್ಠಾನ ಸಾಧ್ಯ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವೇ ರಾಷ್ಟ್ರೀಯ ನೀತಿ ರೂಪಿಸಬೇಕು. ಆ ನಿಟ್ಟಿನಲ್ಲಿ ಕೇಂದ್ರ ಸರಕಾರ ಮುಂದಾದರೆ ಅದಕ್ಕೆ ರಾಜ್ಯ ಸರಕಾರ ಬೆಂಬಲ ನೀಡಲಿದೆ ಎಂದು ತಿಳಿಸಿದರು.
ಈ ಹಿಂದೆ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಸಾರಾಯಿ ನಿಷೇಧ ಜಾರಿಗೊಳಿಸಿದೆ. ಆದರೆ, ಇದರ ಸಮರ್ಪಕ ಅನುಷ್ಠಾನ ಸಾಧ್ಯವಾಗಿಲ್ಲ. ಸಾರಾಯಿ ನಿಷೇಧದಿಂದ ಬಡವರಿಗೆ ಲಾಭಕ್ಕಿಂತ ಹಾನಿಯೇ ಹೆಚ್ಚಾಗಿದೆ. ಈ ಹಿಂದೆ ಕುಡಿತಕ್ಕೆ 20ರಿಂದ 25 ರೂ.ಹಣ ಖರ್ಚು ಮಾಡುತ್ತಿದ್ದವರು, ಇದೀಗ 100ರಿಂದ 150 ರೂ.ವೆಚ್ಚ ಮಾಡುವ ಪರಿಸ್ಥಿತಿಯಿದೆ ಎಂದವರು, ಅಕ್ರಮ ಮದ್ಯಕ್ಕೆ ಕಡಿವಾಣ ಹಾಕಲು ರಾಜ್ಯ ಸರಕಾರ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದ್ದರೂ, ಸಂಪೂರ್ಣ ನಿಯಂತ್ರಣ ಸಾಧ್ಯವಾಗಿಲ್ಲ. ಇದರಿಂದ ಬಡವರಿಗೆ ಮಾತ್ರವಲ್ಲದೆ, ರಾಜ್ಯದ ಬೊಕ್ಕಸಕ್ಕೂ ನಷ್ಟ ಉಂಟಾಗುತ್ತಿದೆ. ಸಾರಾಯಿ ನಿಷೇಧದಿಂದ ಭ್ರಷ್ಟಾಚಾರವೂ ಹೆಚ್ಚಾಗಿದೆ ಎಂದರು.
ರಾಷ್ಟ್ರಪಿತ ಮಹಾತ್ಮ ಗಾಂಧಿ ಹುಟ್ಟಿದ ನಾಡಾದ ಗುಜರಾತ್ ರಾಜ್ಯದಲ್ಲಿಯೂ ಮದ್ಯಪಾನ ನಿಷೇಧ ಮಾಡಿಲ್ಲ. ಬಿಜೆಪಿ ಸದಸ್ಯರು ಕೇಂದ್ರದ ಮೇಲೆ ಒತ್ತಡ ಹೇರದೆ ರಾಜ್ಯ ಸರಕಾರದ ವಿರುದ್ಧ ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಇವರು ಆಡಳಿತದಲ್ಲಿರುವ ಸಂದರ್ಭದಲ್ಲಿ ಏನೂ ಮಾಡಿಲ್ಲ ಎಂದು ನಿಜೆಪಿ ನಾಯಕರ ವಾಗ್ದಾಳಿ ನಡೆಸಿದರು.
ಆರಂಭಕ್ಕೆ ಉತ್ತರ ನೀಡಿದ ಅಬಕಾರಿ ಸಚಿವ ತಿಮ್ಮಾಪೂರ, ರಾಜ್ಯದಲ್ಲಿ ಮದ್ಯಪಾನ ನಿಷೇಧ ಪ್ರಸ್ತಾಪ ಸರಕಾರದ ಮುಂದಿಲ್ಲ. ಮದ್ಯ ಸೇವನೆಯಿಂದ ಬಡ ಕುಟುಂಬಗಳ ಬೀದಿಪಾಲಾದ ಬಗ್ಗೆಯೂ ನಮ್ಮ ಗಮನಕ್ಕೆ ಬಂದಿಲ್ಲ. ಹಾಗೇನಾದರೂ ಇದ್ದರೆ ಆರೋಗ್ಯ ಇಲಾಖೆಗೆ ಈ ಬಗ್ಗೆ ಕ್ರಮ ವಹಿಸಲಾಗಿದೆ ಎಂದರು.
ರಾಜ್ಯದಲ್ಲಿ ಈ ವರೆಗೂ ಅಬಕಾರಿ ಇಲಾಖೆ 11 ಸಾವಿರ ಕೋಟಿ ರೂ. ಆದಾಯ ಬಂದಿದ್ದು, 18,050 ಕೋಟಿ ರೂ. ಆದಾಯ ಸಂಗ್ರಹ ಆಗುವ ನಿರೀಕ್ಷೆ ಹೊಂದಲಾಗಿದೆ. ಆದರೆ, ಇಷ್ಟೇ ಪ್ರಮಾಣದ ಮದ್ಯ ಮಾರಾಟ ಮಾಡಬೇಕು ಎಂದು ಯಾರಿಗೂ ಗುರಿ ನಿಗದಿಪಡಿಸಿಲ್ಲ. ಈ ಸಂಬಂಧದ ವಿಪಕ್ಷ ಸದಸ್ಯರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಸ್ಪಷ್ಟಣೆ ನೀಡಿದರು.