ರಾಜ್ಯದಲ್ಲಿ 4.63 ಲಕ್ಷ ಪಂಪ್‍ಸೆಟ್ ಸಕ್ರಮ: ಸಚಿವ ಶಿವಕುಮಾರ್
ಬೆಳಗಾವಿ, ನ.21: ರಾಜ್ಯದಲ್ಲಿ 4.63 ಲಕ್ಷ ಅಕ್ರಮ ನೀರಾವರಿ ಪಂಪ್‍ಸೆಟ್‍ಗಳನ್ನು ಸಕ್ರಮಗೊಳಿಸಿದ್ದು, ಇಡೀ ದೇಶದಲ್ಲಿ ದಾಖಲೆಯಾಗಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಮಂಗಳವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಕಾಂತರಾಜು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ದೇಶದಲ್ಲೇ ನೀರಾವರಿ ಪಂಪ್‍ಸೆಟ್‍ಗಳ ಅಕ್ರಮ ಸಕ್ರಮದಲ್ಲಿ ನಮ್ಮ ರಾಜ್ಯ ಮೊದಲನೆ ಸ್ಥಾನದಲ್ಲಿದ್ದು, ಈ ಬಗ್ಗೆ ಯಾರಿಗಾದರೂ ಸಂಶಯವಿದ್ದರೆ ಕೇಂದ್ರ ಸರಕಾರದಿಂದಲೇ ಮಾಹಿತಿ ಪಡೆಯಬಹುದು ಎಂದರು.
ರಾಜ್ಯದ ಯಾವುದೇ ಭಾಗದಲ್ಲಿ ವಿದ್ಯುತ್ ಪರಿವರ್ತಕ (ಟ್ರಾನ್ಸ್‍ಫಾರ್ಮರ್)ದುರಸ್ತಿಗೊಳಗಾಗಿ ಮೂರು ದಿನಗಳಲ್ಲಿ ರಿಪೇರಿ ಮಾಡದಿದ್ದರೆ ಅಂತಹ ಅಧಿಕಾರಿಗಳಿಗೆ ದಂಡ ಹಾಕಲಾಗುವುದು. ಟ್ರಾನ್ಸ್ ಫಾರ್ಮರ್‍ಗಳು ದುರಸ್ತಿಗೆ ಒಳಗಾದರೆ ಸಂಬಂಧಪಟ್ಟವರಿಗೆ ಮಾಹಿತಿ ನೀಡಬೇಕು. ಅವರು ಮೂರು ದಿನಗಳೊಳಗೆ ಅದನ್ನು ಸರಿಪಡಿಸದಿದ್ದರೆ ಅಂತಹ ಅಧಿಕಾರಿಗೆ ದಂಡ ಹಾಕಿ ಶಿಸ್ತು ಕ್ರಮ ಜರಗಿಸುವ ನಿಯಮವನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು.
ರಾಜ್ಯದ 142ಕಡೆ ಟ್ರಾನ್ಸ್ ಫಾರ್ಮರ್ ರಿಪೇರಿ ಕೇಂದ್ರ ಆರಂಭಿಸಲಾಗಿದ್ದು, ಒಂದೊಂದು ಟ್ರಾನ್ಸ್ ಫಾರ್ಮರ್ ರಿಪೇರಿ ಮಾಡಲು 20ರಿಂದ 40 ಸಾವಿರ ಖರ್ಚಾಗುತ್ತದೆ. ರೈತರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕಾಗಿ ಇಂತಹ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಎಸ್.ಎಂ.ಕೃಷ್ಣ ಸರಕಾರದ ಅವಧಿಯಲ್ಲಿ ಇಂಧನ ಇಲಾಖೆಗೆ ಎರಡೂವರೆ ಸಾವಿರ ಕೋಟಿ ಹಣ ಮೀಸಲಿಡಲಾಗಿತ್ತು. ಬಿಜೆಪಿ ಅವಧಿಯಲ್ಲಿ 9500 ಕೋಟಿ ರೂ. ಇಡಲಾಗಿತ್ತು. ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ 11 ಸಾವಿರ ಕೋಟಿ ರೂ. ಅನುದಾನವನ್ನು ಮೀಸಲಿಡಲಾಗಿದೆ ಎಂದು ಅವರು ಹೇಳಿದರು.
ರೈತರಿಗೆ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ತಮಿಳುನಾಡಿನಲ್ಲಿ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು 10 ವರ್ಷ ಕಾಯಬೇಕಾಗುತ್ತದೆ. ಆದರೆ, ನಮ್ಮ ರಾಜ್ಯದಲ್ಲಿ ಅಂತಹ ಸಮಸ್ಯೆಯಿಲ್ಲ. ಯಾವುದೇ ಪ್ರಭಾವಕ್ಕೂ ಒಳಗಾಗದೆ ಆದ್ಯತೆ ಮೇರೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಶಿವಕುಮಾರ್ ತಿಳಿಸಿದರು.