ರಸ್ತೆ ಅಪಘಾತ: ಮೂವರು ಮಹಿಳೆಯರು ಸ್ಥಳದಲ್ಲಿಯೇ ಮೃತ್ಯು

Update: 2017-11-21 16:25 GMT

ಶಿವಮೊಗ್ಗ, ನ. 21: ಕೂಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಸರಕು-ಸಾಗಣೆ ಸಾಗಿಸುವ ವಾಹನಕ್ಕೆ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ವಾಹನದಲ್ಲಿದ್ದ ಮೂವರು ಕೂಲಿಕಾರ್ಮಿಕ ಮಹಿಳೆಯರು ಸ್ಥಳದಲ್ಲಿಯೇ ಮೃತಪಟ್ಟರೆ, 13 ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಸೊರಬ ತಾಲೂಕು ಚಂದ್ರಗುತ್ತಿ ಹೋಬಳಿಯ ಬೆನ್ಮೂರು ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ. 

ಸೊರಬ ತಾಲೂಕು ತಲಗಡ್ಡೆ ಗ್ರಾಮದ ನಿವಾಸಿಗಳಾದ ಮುರಂಬಿ (43), ರಝೀಯಾ ಬೇಗಂ (40) ಹಾಗೂ ಸುಜಾತಾ (45) ಮೃತಪಟ್ಟ ಕೂಲಿಕಾರ್ಮಿಕ ಮಹಿಳೆಯರೆಂದು ಗುರುತಿಸಲಾಗಿದ್ದು, ತಲಗಡ್ಡೆ ಗ್ರಾಮದ ನಿವಾಸಿಗಳಾದ ಸಾವಿತ್ರಮ್ಮ (40), ಲಕ್ಷ್ಮಮ್ಮ (46) ಹಾಗೂ ಬದರುದ್ದೀನ್ (21) ಎಂಬವರು ಗಾಯಗೊಂಡಿದ್ದಾರೆ.

ಗಾಯಾಳುಗಳಿಗೆ ಸೊರಬ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಸರಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. 

ಘಟನೆಯಲ್ಲಿ ಸುಮಾರು 9ಕ್ಕೂ ಅಧಿಕ ಕೂಲಿಕಾರ್ಮಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಇವರನ್ನು ಸೊರಬ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆಂದು ತಿಳಿದು ಬಂದಿದೆ.

ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಇನ್ಸ್ ಸ್ಪೆಕ್ಟರ್ ಉಮಾಪತಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದರು.

ಈ ಬಗ್ಗೆ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಏನಾಯ್ತು?: ತಲಗಡ್ಡೆ ಗ್ರಾಮದ ಕೂಲಿಕಾರ್ಮಿಕರು ಸಮೀಪದ ಗ್ರಾಮವೊಂದರಲ್ಲಿ ಗದ್ದೆ ಕೆಲಸಕ್ಕೆ ತೆರಳಿದ್ದರು. ಕೆಲಸ ಮುಗಿಸಿಕೊಂಡು ಸಂಜೆ ವಾಹನದಲ್ಲಿ ತಮ್ಮ ಊರುಗಳಿಗೆ ಹಿಂದಿರುಗುವಾಗ ಹಿಂಬದಿಯಿಂದ ಬಂದ ಲಾರಿಯು ಢಿಕ್ಕಿ ಹೊಡೆದಿದೆ. ಪರಿಣಾಮ ವಾಹನ ಪಲ್ಟಿಯಾಗಿ ಬಿದ್ದಿದ್ದು, ಅದರಲ್ಲಿದ್ದ ಕೂಲಿಕಾರ್ಮಿಕರು ಸಾವು - ನೋವಿಗೆ ತುತ್ತಾಗುವಂತಾಗಿದೆ ಎಂದು ಹೇಳಲಾಗಿದೆ.

ಘಟನೆಯ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News