ಭೈರಾಪುರ-ಶಿಶಿಲಾ ರಸ್ತೆಯ ಸರ್ವೇ ಕಾರ್ಯ ಪ್ರಾರಂಭ: ಡಾ.ಎಚ್.ಸಿ.ಮಹದೇವಪ್ಪ
ಬೆಳಗಾವಿ, ನ.21: ಚಿಕ್ಕಮಗಳೂರು ಜಿಲ್ಲೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಹಾದು ಹೋಗುವ ಚಾರ್ಮಾಡಿ ಘಾಟ್ ರಸ್ತೆಯ ಪರ್ಯಾಯ ರಸ್ತೆ “ಭೈರಾಪುರ-ಶಿಶಿಲಾ” ರಸ್ತೆಯ ಸರ್ವೆ ಕಾರ್ಯ ಪ್ರಾರಂಭವಾಗಿದೆ ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.
ಮಂಗಳವಾರ ವಿಧಾನಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯೆ ಮೋಟಮ್ಮ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮೂಡಿಗೆರೆ ತಾಲೂಕಿನ ಭೈರಾಪುರದಿಂದ ನಾಯಿಹಳ್ಳ, ಪೇರಿಕೆ, ಶಿಶಿಲ ಮೂಲಕ ಸಂಪರ್ಕ ಕಲ್ಪಿಸುವ ರಸ್ತೆಯ ವಿಸ್ತೃತ ಯೋಜನಾ ವರದಿಯನ್ನು ತಯಾರಿಸುವ ಕಾರ್ಯವನ್ನು 12.50 ಲಕ್ಷ ರೂ.ವೆಚ್ಚದಲ್ಲಿ ಬೆಂಗಳೂರಿನ ಫಿಕ್ಸೆಲ್ ಸಾಫ್ಟ್ ಟೆಕ್ ಪ್ರೈ.ಲಿ. ಸಂಸ್ಥೆಗೆ ಪ್ರಸಕ್ತ ಸಾಲಿನ ಜು.18ರಂದು ಕಾರ್ಯಾದೇಶ ನೀಡಲಾಗಿದ್ದು, ವಿಸ್ತ್ರತ ಯೋಜನಾ ವರದಿ ತಯಾರಿಸುವ ಕಾರ್ಯ ಪ್ರಗತಿಯಲ್ಲಿದ್ದು, ಪ್ರಾಥಮಿಕ ಸರ್ವೇ ಕಾರ್ಯ ಪೂರ್ಣಗೊಂಡಿದೆ ಎಂದರು.
ಶಿಶಿಲಾ-ಭೈರಾಪುರ ರಸ್ತೆಯ ಬಗ್ಗೆ ವಿವರವಾದ ವಿಸ್ತ್ರತ ಯೋಜನಾ ವರದಿಯನ್ನು ಸಲ್ಲಿಸಲು ಬೆಂಗಳೂರಿನ ಪ್ರೀತಿ ಕ್ಯಾಡ್ ಕನ್ಸಲ್ಟಿಂಗ್ ಇಂಜಿನಿಯರ್ಸ್ ಪ್ರೈ.ಲಿ.ಗೆ 2016ರ ಆ.10ರಂದು 13.84 ಲಕ್ಷ ರೂ.ಗಳಿಗೆ ಕಾರ್ಯಾದೇಶ ನೀಡಲಾಗಿತ್ತು. ಆದರೆ, ಅವರು ಸರ್ವೇ ಕಾರ್ಯ ಕೈಗೊಂಡು ಸಲ್ಲಿಸಿದ ಅಲೈನ್‍ಮೆಂಟ್(ಪಂಕ್ತೀಕರಣ) ನಕ್ಷತೆಯನ್ನು ಪರಿಶೀಲಿಸಲಾಗಿ ಸದರಿ ಆಲೈನ್ ಮೆಂಟ್‍ನ ಬಹುಭಾಗವು ಬಾಳೂರು ಮೀಸಲು ಅರಣ್ಯ ಪ್ರದೇಶದ ಮೂಲಕ ಹಾದು ಹೋಗುವುದರಿಂದ ಹಾಗೂ ಕಡಿದಾದ ಏರಿಳಿತಗಳಿಂದ ಕೂಡಿರುವುದರಿಂದ ರಸ್ತೆ ನಿರ್ಮಾಣವು ಕಷ್ಟಸಾಧ್ಯವಾಗುವುದರಿಂದ ಈ ರಸ್ತೆಯ ಬದಲಾಗಿ ಈಗಾಗಲೇ ಕೆಲವು ಜಾಗಗಳಲ್ಲಿ ಅಸ್ಥಿತ್ವದಲ್ಲಿರುವ ಕಚ್ಚಾರಸ್ತೆಯ ಅಲೈನ್‍ಮೆಂಟ್‍ನಲ್ಲಿ ಸರ್ವೇ ಕಾರ್ಯ ನಡೆಸಿ ವಿಸ್ತ್ರತ ಯೋಜನಾ ವರದಿಯನ್ನು ಸಲ್ಲಿಸಲು ಸೂಚಿಸಲಾಗಿತ್ತು ಎಂದು ಅವರು ಹೇಳಿದರು.
ಆದರೆ, ಆ ಸಮಾಲೋಚಕರು ನಿಗದಿತ ಸಮಯದೊಳಗೆ ಸರ್ವೇ ಕಾರ್ಯವನ್ನು ಪೂರ್ಣಗೊಳಿಸದೆ ಇರುವುದರಿಂದ ಹಾಗೂ ಸಮಾಲೋಚಕರ ಸೇವೆಯು ತೃಪ್ತಿಕರವಾಗಿರದ ಕಾರಣ ಅವರ ಕರಾರನ್ನು ರದ್ದುಗೊಳಿಸಿ ಹೊಸದಾಗಿ ಫಿಕ್ಸೆಲ್ ಸಾಫ್ಟ್ ಟೆಕ್ ಪ್ರೈ.ಲಿ.ಸಮಾಲೋಚಕರನ್ನು ನೇಮಿಸಿ ಜು.18ರಂದು ಕಾರ್ಯಾದೇಶ ನೀಡಲಾಗಿದೆ ಎಂದರು.
ಸಮಾಲೋಚಕರು ವಿಸ್ತ್ರತ ಯೋಜನಾ ವರದಿ(ಡಿಪಿಆರ್) ತಯಾರಿಸುತ್ತಿದ್ದು, ವರದಿ ಸಲ್ಲಿಸಿದ ನಂತರ ಕಾಮಗಾರಿ ಕೈಗೆತ್ತಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ಮಹದೇವಪ್ಪ ತಿಳಿಸಿದರು.