×
Ad

ಕಡೂರು ಆಹಾರ ನಿರೀಕ್ಷಕ ರಂಗನಾಥ್ ಅಮಾನತು

Update: 2017-11-21 23:16 IST

ಕಡೂರು, ನ.21: ಇಲ್ಲಿನ ಆಹಾರ ನಿರೀಕ್ಷಕ ಡಿ.ಎಸ್. ರಂಗನಾಥ್ ಅವರನ್ನು ಕರ್ತವ್ಯಲೋಪ ಮತ್ತು ದೀರ್ಘಕಾಲದ ಗೈರು ಹಾಜರಿ ಹಿನ್ನೆಲೆ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಆಯುಕ್ತರು ಮತ್ತು ಶಿಸ್ತು ಪ್ರಾಧಿಕಾರಿ ವಿ.ಚೈತ್ರಾ ಅಮಾನತು ಮಾಡಿ ಆದೇಶ ನೀಡಿದ್ದಾರೆ.

ಡಿ.ಎಸ್. ರಂಗನಾಥ್ ಕಡೂರು ತಾಲೂಕು ಕಚೇರಿಯ ಆಹಾರ ಶಾಖೆಯಲ್ಲಿ ಆಹಾರ ನಿರೀಕ್ಷಕರಾಗಿ ಕರ್ತವ್ಯ ಸಲ್ಲಿಸುತ್ತಿದ್ದರು. ಇವರು ದಿನಚರಿಯನ್ನು ಸಲ್ಲಿಸಿಲ್ಲ. ನ್ಯಾಯಬೆಲೆ ಅಂಗಡಿ ಮಟ್ಟದ ಹಾಗೂ ತಾಲೂಕು ಮಟ್ಟದ ಜಾಗೃತಿ ಸಮಿತಿ ರಚಿಸಿಲ್ಲ ಮತ್ತು ಸಭೆ ಕರೆದಿಲ್ಲ ಎಂಬ ಆರೋಪಗಳನ್ನು ಜಿಲ್ಲಾಧಿಕಾರಿ ವರದಿ ಮಾಡಿದ್ದರು.

ಅಲ್ಲದೆ, ಜಾಬ್‌ಚಾರ್ಟ್ ಪ್ರಕಾರ ನ್ಯಾಯಬೆಲೆ ತನಿಖೆ ಹಾಗೂ ಗ್ಯಾಸ್ ಏಜೆಸ್ಸಿಗಳ ತನಿಖೆ ನಡೆಸಿದ ವರದಿಯನ್ನು ಕಛೇರಿಗೆ ಸಲ್ಲಿಸಿಲ್ಲ. ಪಡಿತರ ಚೀಟಿಗಳ ಆಧಾರ್ ಲಿಂಕ್ ಕಾರ್ಯವನ್ನು ಮಾಡಿಲ್ಲ ಎಂಬ ಆರೋಪಗಳನ್ನು ಜಿಲ್ಲಾಧಿಕಾರಿಗಳು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಪಡಿತರ ಚೀಟಿ ಅರ್ಜಿಗಳ ಶುಲ್ಕ ಮತ್ತು ನವೀಕರಣ ಶುಲ್ಕದ ಬಾಬು 1,75,240 ಲಕ್ಷ ಹಣವನ್ನು ವಸೂಲಿ ಮಾಡಿ ಎರಡು ವರ್ಷವಾದರೂ ಸರ್ಕಾರಕ್ಕೆ ಜಮಾ ಮಾಡಿಲ್ಲ. ಜೊತೆಗೆ ದೀರ್ಘಕಾಲದ ರಜೆಯ ಮೇಲೆ ತೆರಳಿ ಸರ್ಕಾರದ ಕೆಲಸ ಕಾರ್ಯಗಳಿಗೆ ಅಡ್ಡಿ ಉಂಟು ಮಾಡಿದ್ದಾರೆ ಎಂದು ವರದಿಯಲ್ಲಿ ಹೇಳಿದ್ದಾರೆ.

ಈ ಎಲ್ಲಾ ಹಿನ್ನೆಲೆಯಲ್ಲಿ ಆಯುಕ್ತರು 2017 ನ.16ರಂದು ಕರ್ನಾಟಕ ನಾಗರೀಕ ಸೇವಾ ನಿಯಮಗಳ 1958ರ ನಿಯಮ 98ರ ಅನ್ವಯ ಸದರಿ ನೌಕರರು ಜೀವನಾಧಾರ ತ್ಯೆ ಪಡೆಯಲು ಅರ್ಹತೆ ಹೊಂದಿದ್ದಾರೆ ಎಂದು ಸೂಚಿಸಿ ತಕ್ಷಣವೇ ಅಮಾನತು ಮಾಡಿದ್ದಾರೆ.

ಆಹಾರ ನಿರೀಕ್ಷಕ ರಂಗನಾಥ್ ಅವರ ಮೇಲಿನ ಇಲಾಖಾ ವಿಚಾರಣೆ ಬಾಕಿ ಇದೆ. ಇದರ ಜೊತೆಗೆ ಈ ಹಿಂದೆ ಸೀಮೆಎಣ್ಣೆ ಹಂಚಿಕೆಯಲ್ಲಿ ನಡೆದ ಲೋಪ, ಗ್ಯಾಸ್ ಹೊಂದಿದ ಪಡಿತರ ಚೀಟಿಗಳಿಗೆ ಸೀಮೆಎಣ್ಣೆ ವಿತರಣೆಯಲ್ಲಿ ಲೋಪ ಮುಂತಾದ ವಿಷಯಗಳ ಮೇಲಿನ ಇಲಾಖಾ ವಿಚಾರಣೆಯು ಈ ಅಧಿಕಾರಿಯ ಮೇಲೆ ಈಗಾಗಲೇ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News