ಕಾಳುಮೆಣಸು ಆಮದು ತಡೆಗೆ ಬೆಳೆಗಾರರ ಸಂಘ ಆಗ್ರಹ
ಚಿಕ್ಕಮಗಳೂರು, ನ.21: ವಿಯೆಟ್ನಾಂನಿಂದ ಕಾನೂನು ಬಾಹಿರವಾಗಿ ಭಾರತಕ್ಕೆ ಆಮದಾಗುತ್ತಿರುವ ಕಾಳು ಮೆಣಸಿಗೆ ಕಡಿವಾಣ ಹಾಕಬೇಕು ಎಂದು ಕರ್ನಾಟಕ, ತಮಿಳುನಾಡು ಹಾಗೂ ಕೇರಳ ಮೂರು ರಾಜ್ಯಗಳ ಕಾಳು ಮೆಣಸು ಬೆಳೆಗಾರರ ಸಂಘಟನೆಗಳ ಕಾಂನ್ಸರೇಷನ್ ಆಫ್ ಪೆಪ್ಪರ್ ಗ್ರೋಯರ್ಸ್ ಅಸೋಷಿಯೇಷನ್ ಸಂಚಾಲಕ ಕೊಂಕೋಡಿ ಪದ್ಮನಾಭ ಗ್ರಹಿಸಿದ್ದಾರೆ.
ಮಂಗಳವಾರ ಕರ್ನಾಟಕ, ಕೇರಳ ಹಾಗೂ ತಮಿಳುನಾಡು ಮೂರು ರಾಜ್ಯಗಳ ಬೆಳೆಗಾರ ಒಕ್ಕೂಟಗಳು ಸೇರಿದಂತೆ ಒಟ್ಟು 14 ಬೆಳೆಗಾರ ಸಂಘಟನೆಗಳ ನೇತೃತ್ವದಲ್ಲಿ ಸಕಲೇಶಪುರ ಪಟ್ಟಣದಲ್ಲಿ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಸಭಾಂಗಣದಲ್ಲಿ ಭಾರತದ ಕಾಳುಮೆಣಸು ಬೆಳೆಗೆ ಕಲಬೆರಕೆ ತಡೆಯುವುದು ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ಕಾಳುಮೆಣಸಿನ ಗುಣಮಟ್ಟ ಕಾಯ್ದುಕೊಳ್ಳುವ ಉದ್ದೇಶದಿಂದ ಏರ್ಪಡಿಸಿದ್ದ ಸಭೆೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಡೀ ವಿಶ್ವದಲ್ಲಿ ಭಾರತದ ಕಾಳುಮೆಣಸಿನ ಗುಣಮಟ್ಟದಲ್ಲಿ ಮೊದಲನೇ ಸ್ಥಾನದಲ್ಲಿದೆ. ಇಲ್ಲಿಯ ಕಾಳುಮೆಣಸಿನಲ್ಲಿ ಔಷಧೀಯ ಗುಣವಿದೆ. ಮಾರುಕಟ್ಟೆಯಲ್ಲಿ ಬೇರೆ ರಾಷ್ಟ್ರಗಳ ಕಾಳುಮೆಣಸಿಗಿಂತ ಹೆಚ್ಚಿ ನ ಬೆಲೆ ಇದೆ. ವಿಯೆಟ್ನಾಂ ಕಾಳುಮೆಣಸು ವಿಷಕಾರಿಯಾಗಿರುವುದರಿಂದ ಪಾಶ್ಚಾತ್ಯ ರಾಷ್ಟ್ರಗಳು ಈ ಮೆಣಸು ಬಳಕೆಯನ್ನು ನಿಷೇಧಿಸಿವೆ ಎಂದರು.
ಕೇಂದ್ರ ಸರಕಾರ ವಿಯೆಟ್ನಾಂ ಕಾಳುಮೆಣಸು ಆಮದು ತಡೆಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ನ.23ರಂದು ಕೇಂದ್ರ ವಾಣಿಜ್ಯ ಸಚಿವ ಸುರೇಶ್ ಪ್ರಭು ಅವರನ್ನು ಬೆಳೆಗಾರರ ಸಂಘಟನೆಗಳು ಭೇಟಿ ನೀಡಿ ಮನವಿ ಸಲ್ಲಿಸಲು ನಿಯೋಗ ತೆರಳುತ್ತಿರುವುದಾಗಿ ಹೇಳಿದರು.
ಕೆಜಿಎಫ್ ಸಂಚಾಲಕ ಕೆ.ಕೆ.ವಿಶ್ವನಾಥ್, ಕೆಜಿಎಫ್ ಅಧ್ಯಕ್ಷ ಬಿ.ಎಸ್.ಜಯರಾಂ, ಪ್ರಧಾನ ಕಾರ್ಯದರ್ಶಿ ಯು.ಎಂ.ತೀರ್ಥಮಲ್ಲೇಶ್, ಉಪಾಧ್ಯಕ್ಷ ಡಾ.ಎಚ್.ಟಿ.ಮೋಹನ್ಕುಮಾರ್, ಮಾಜಿ ಅಧ್ಯಕ್ಷ ಡಾ.ಎನ್.ಕೆ.ಪ್ರದೀಪ್, ಮಾಜಿ ಅಧ್ಯಕ್ಷ ಬಿ.ಎ.ಜಗನ್ನಾಥ್, ಎಚ್ಡಿಪಿಎ ಕಾರ್ಯದರ್ಶಿ ಮುರುಳೀಧರ್, ಉಪಾಧ್ಯಕ್ಷ ತೋ.ಚ. ಅನಂತ ಸುಬ್ಬರಾವ್, ಮಾಜಿ ಅಧ್ಯಕ್ಷ ಕೆ.ಬಿ.ಕೃಷ್ಣಪ್ಪಮತ್ತಿತರರಿದ್ದರು.