ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ರೂಪಿಸುವುದು ಎಲ್ಲರ ಹೊಣೆ: ಇಶ್ರತ್ ಜಹಾನ್
ಶಿವಮೊಗ್ಗ, ನ. 21: ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ರೂಪಿಸಬೇಕಾದ ಹೊಣೆಗಾರಿಕೆ ಸಮಾಜದಲ್ಲಿರುವ ಎಲ್ಲರದಾಗಿದೆ ಎಂದು ಬಾಲನ್ಯಾಯ ಮಂಡಳಿ ಅಧ್ಯಕ್ಷೆ ಹಾಗೂ ಮೊದಲನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಇಶ್ರತ್‌ಜಹಾನ್ ಅರಾ ಹೇಳಿದ್ದಾರೆ.
ಮಂಗಳವಾರ ಕರ್ನಾಟಕ ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಯುಕ್ತಾಶ್ರಯದಲ್ಲಿ ನಗರದ ಬಾಲಮಂದಿರದ ಆವರಣದಲ್ಲಿರುವ ಸ್ತ್ರೀಶಕ್ತಿ ಭವನದಲ್ಲಿ ಏರ್ಪಡಿಸಲಾಗಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಮನಸ್ಸು ಬಹು ಸೂಕ್ಷ್ಮವಾದುದು. ಗ್ರಹಿಕೆಯ ಶಕ್ತಿಯೂ ಅತಿಹೆಚ್ಚು. ಇಂತಹ ಸಮಯದಲ್ಲಿ ಮಕ್ಕಳಿಗೆ ಸರಿತಪ್ಪುಗಳನ್ನು ಪರಿಚಯಿಸಿ, ಸೂಕ್ತ ಮಾರ್ಗದರ್ಶನ ನೀಡಬೇಕಾದ ಅಗತ್ಯವಿದೆ ಎಂದವರು ನುಡಿದರು.
ಪೋಷಕರು ಮಕ್ಕಳ ಪ್ರತಿಹೆಜ್ಜೆಯನ್ನು ಗಮನಿಸಬೇಕು. ಸಾಮಾಜಿಕ ಜಾಲತಾಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಿಂದ ದೂರವಿರುವಂತೆ ನೋಡಿಕೊಳ್ಳಬೇಕೆಂದು ಪಾಲಕರಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಸೋಮಶೇಖರ ಸಿ.ಬಾದಾಮಿ ಮಾತನಾಡಿ, ಹಿಂದೆ ಗತಿಸಿದ ದುರ್ಘಟನೆಗಳು ಪುನರಾವರ್ತನೆಗೊಳ್ಳದಂತೆ ನೋಡಿಕೊಳ್ಳುವ, ಮಾಡಿದ ಕಾರ್ಯಕ್ರಮಗಳ ಲಾಭ-ನಷ್ಟಗಳ ಕುರಿತು ಅವಲೋಕಿಸುವ ದಿನ ಇದಾಗಿದೆ ಎಂದ ಅವರು, ಸಂವಿಧಾನದ ಆಶಯದಂತೆ ಮಕ್ಕಳ ರಕ್ಷಣಾತ್ಮಕ ಕಾನೂನು ಮತ್ತು ಮೂಲಭೂತ ಹಕ್ಕುಗಳನ್ನು ನೀಡಲಾಗಿದೆ ಎಂದರು.
ಪೋಷಕರು ತಮ್ಮ ಮಕ್ಕಳನ್ನು ಅತಿಮುದ್ದು ಮಾಡಿ ಬೆಳೆಸುವುದು ಅಥವಾ ನಿರ್ಲಕ್ಷಿಸುವುದು ಸರಿಯಾದ ಕ್ರಮವಲ್ಲ. ಮಗು ದುಶ್ಚಟಗಳಿಗೆ, ದುಷ್ಕೃತ್ಯಗಳಿಗೆ ಬಲಿಯಾಗದಂತೆ, ಅಪರಾಧ ಕೃತ್ಯಗಳನ್ನೆಸಗದಂತೆ ಗಮನಿಸಬೇಕೆಂದ ಅವರು, ಮಕ್ಕಳಿಗೆ ಕೇವಲ ಪಠ್ಯವಲ್ಲದೇ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳಬೇಕು. ಮಕ್ಕಳನ್ನು ಡಾಕ್ಟರ್ ಇಂಜಿನಿಯರ್‌ರನ್ನಾಗಿ ಮಾಡುವುದಕ್ಕಿಂತ ಉತ್ತಮ ಶಿಕ್ಷಣ, ಸಂಸ್ಕಾರ ನೀಡಿ ಬೆಳೆಸಬೇಕೆಂದು ಹೇಳಿದರು.
ಮಕ್ಕಳ ಭವಿಷ್ಯತ್ತು ಅವರ ಮನಸ್ಸಿನ ಬೆಳವಣಿಗೆಯನ್ನು ಅವಲಂಬಿಸಿದೆ. ಮನಸ್ಸಿನ ಆರೋಗ್ಯ ಸರಿಯಿದ್ದರೆ ಆರೋಗ್ಯವೂ ಸರಿಯಿರಲಿದೆ. ಮಕ್ಕಳ ಮನೋವಿಜ್ಞ್ಞಾನವೂ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಜಿ.ಜಿ.ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಪರಿವರ್ತನಾ ಸಂಸ್ಥೆಯ ನಿರ್ದೇಶಕ ಶಂಕರಪ್ಪ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ರೇಖಾ ಜಿ.ಎಂ., ರತ್ನಾವತಿ ವಿ.ಹೊನ್ನಿಕೊಪ್ಪ, ಗಾಯಿತ್ರಿ, ಚರಣ್‌ರಾಜ್ ಮುಂತಾದವರು ಉಪಸ್ಥಿತರಿದ್ದರು.