ಸದಾಶಿವ ಆಯೋಗ ವರದಿ ಜಾರಿಗೆ ಆಗ್ರಹ

Update: 2017-11-21 18:26 GMT

ಶಿವಮೊಗ್ಗ, ನ.21: ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿ ಯಥಾವತ್ ಅನುಷ್ಠಾನಗೊಳಿಸಲು ಆಗ್ರಹಿಸಿ ಮಂಗಳವಾರ ಕರ್ನಾಟಕ ಮಾದಿಗ ದಂಡೋರ ಹಾಗೂ ಮಾದಿಗ ಮೀಸಲಾತಿ ಹೋರಾಟ ಸಮಿತಿಗಳು ಜಂಟಿಯಾಗಿ ನಗರದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದವು.

ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ರ್ಯಾಲಿ ಸಾಗಿತು. ನಂತರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಾಂಕೇತಿಕವಾಗಿ ಧರಣಿ ನಡೆಸಿದ ಪ್ರತಿಭಟನಾಕರರು, ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದರು.

ರಾಜ್ಯದ 101 ಪರಿಶಿಷ್ಟ ಜಾತಿಗಳಲ್ಲಿ ಮೀಸಲಾತಿ ಹಂಚಿಕೆಯಲ್ಲಾಗಿರುವ ತಾರತಮ್ಯ ಹಾಗೂ ಜನಸಂಖ್ಯೆ, ಹಿಂದುಳಿದಿರುವಿಕೆಗೆ ಅನುಗುಣವಾಗಿ ಒಳಮೀಸಲಾತಿ ಕಲ್ಪಿಸಬೇಕು ಎಂದು ಮಾದಿಗ ಸಮುದಾಯದ 18 ವರ್ಷಗಳ ಹೋರಾಟದ ಫಲವಾಗಿ ಈ ಹಿಂದಿನ ಸರಕಾರವು ನಿವೃತ್ತ ನ್ಯಾ.ಎ.ಜೆ. ಸದಾಶಿವ ಅವರ ನೇತೃತ್ವದಲ್ಲಿ ಆಯೋಗ ರಚನೆ ಮಾಡಿತ್ತು.

ಈ ಆಯೋಗವು ರಾಜ್ಯಾದ್ಯಂತ ಸಂಚರಿಸಿ, ಖುದ್ದು ಪರಿಶೀಲನೆ ನಡೆಸಿ ಪರಿಶಿಷ್ಟ ಜಾತಿಗಳ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ಉದ್ಯೋಗದ ಮಾಹಿತಿ ಕಲೆ ಹಾಕಿತ್ತು. ಪರಿಶಿಷ್ಟ ಜಾತಿಗಳಲ್ಲಿ ಅತ್ಯಂತ ಹಿಂದುಳಿದಿರುವ ಮಾದಿಗ ಸಮುದಾಯಕ್ಕೆ ಶೇ.6ರಷ್ಟು ಒಳಮೀಸಲಾತಿ ನೀಡುವಂತೆ ಆಯೋಗವು ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಿತ್ತು ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

2012ರಲ್ಲಿ ಅಂದಿನ ಸರಕಾರವು ಆಯೋಗದ ವರದಿಯನ್ನು ಅಂಗೀಕರಿಸಿತ್ತು. ಆದರೆ ಅನುಷ್ಠಾನಗೊಳಿಸಿರಲಿಲ್ಲ. ಇದೀಗ ಈ ವರದಿಯನ್ನು ಸಚಿವ ಸಂಪುಟದಲ್ಲಿ ಅನುಮೋದಿಸಿ ವಿಧಾನಮಂಡಲದಲ್ಲಿ ಅಂಗೀಕರಿಸಿ ಕೇಂದ್ರ ಸರಕಾರಕ್ಕೆ ಕಳುಹಿಸಿ ಕೊಡಬೇಕಾಗಿದೆ. ಆದರೆ ಕಳೆದ ಮೂರು ವರ್ಷಗಳಿಂದ ಕ್ಯಾಬಿನೆಟ್ ಸಭೆಯಲ್ಲಿ ವರದಿ ಮಂಡನೆ ಮಾಡದೆ, ವಿನಾಕಾರಣ ಮುಂದೂಡುತ್ತಾ ಬರಲಾಗುತ್ತಿದೆ. ಇದು ಸರಿಯಾದ ಕ್ರಮವಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕ್ಯಾಬಿನೆಟ್ ಸಭೆಯಲ್ಲಿ ವರದಿ ಮಂಡನೆಯಾಗದಂತೆ ಕೆಲವರು ಸರಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಮತ್ತೊಂದೆಡೆ ಪರಿಶಿಷ್ಟ ಜಾತಿಯೊಳಗೆ ಆಂತರಿಕ ಸಂಘರ್ಷ ಹುಟ್ಟು ಹಾಕುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ರಾಜಕೀಯ ಕಾರಣಕ್ಕಾಗಿ ಪರಿಶಿಷ್ಟರನ್ನು ಒಡೆದಾಳುವ ಹುನ್ನಾರವಾಗಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.

ತಕ್ಷಣವೇ ರಾಜ್ಯ ಸರಕಾರ ವರದಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಂಘಟನೆಗಳಿಂದ ಬೀದಿಗಿಳಿದು ಉಗ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ರ್ಯಾಲಿಯಲ್ಲಿ ಮುಖಂಡರಾದ ಬಿ.ಎ. ಕೇಶವಮೂರ್ತಿ, ಎಂ.ಶಂಕರಪ್ಪ, ಭಾನುಪ್ರಸಾದ್, ಸಿ.ಮೂರ್ತಿ, ಆರ್.ರಂಗನಾಥ್, ಬಿರನಕೆರೆ ಮಂಜಣ್ಣ, ಎ.ಗಂಗಾಧರ, ಎನ್.ಜಿ. ಪ್ರಕಾಶ್ ಸೇರಿದಂತೆ ಮೊದಲಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News